Advertisement

ಜ್ಞಾನ ಸಂರಕ್ಷಣೆಯಲ್ಲಿ ಹಿರಿಯರ ಕೌಶಲ

12:08 AM Nov 17, 2022 | Team Udayavani |

ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಬರೆವಣಿಗೆ ಎಂಬುದು ಹಿನ್ನೆಲೆಗೆ ಸರಿಯುತ್ತಿದೆ. ಎಲ್ಲವೂ ಡಿಜಿಟಲ್‌ವುಯವಾಗಿವೆ. ಮೊಬೈಲ್‌ ಮತ್ತು ಗಣಕಯಂತ್ರದ ಬಟನ್‌ಗಳನ್ನು ಒತ್ತಿದರೆ ಸಾಕು ಇಡೀ ವಿಶ್ವ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ದೈನಂದಿನ ಆಗುಹೋಗುಗಳ ಜತೆಯಲ್ಲಿ ಇತಿಹಾಸದತ್ತಲೂ ಇವು ಬೆಳಕು ಚೆಲ್ಲುತ್ತವೆ. ಆದರೆ ಹಿಂದಿನ ಕಾಲದತ್ತ ಒಮ್ಮೆ ತಿರುಗಿ ನೋಡಿದರೆ ನಮ್ಮ ಜ್ಞಾನ ಭಂಡಾರ ಅತ್ಯಂತ ವ್ಯವಸ್ಥಿತ ಶೈಲಿಯಲ್ಲಿ ಮುಂದಿನ ತಲೆಮಾರುಗಳಿಗೆ ವರ್ಗಾವಣೆಗೊಳ್ಳುತ್ತಾ ಸಾಗಿಬಂದುದನ್ನು ಕಾಣಬಹುದು.

Advertisement

ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನ ಉಪದೇಶ. ನಮ್ಮ ದೇಶವು ಹಿಂದಿನಿಂದಲೂ ಜ್ಞಾನಕ್ಕೆ ಹೆಸರಾದುದು. ಇಲ್ಲಿನ ಅಧ್ಯಾತ್ಮ ಸಂಪತ್ತು ವಿಶ್ವಕ್ಕೇ ಮಾದರಿ. ಪ್ರಾಚೀನ ಕಾಲದಿಂದಲೂ ಈ ಜ್ಞಾನ ವಾಹಿನಿ ಮಾನವನ ಎದೆಯಿಂದ ಎದೆಗೆ ಹರಿದು ಬಂದಿದೆ.

ಇಂದಿನಂತೆ ಅಂದು ಬೆರಳಚ್ಚು ಅಥವಾ ಗಣಕಯಂತ್ರವಿರಲಿಲ್ಲ. ದೃಶ್ಯ ಅಥವಾ ಶ್ರಾವ್ಯ ಮಾಧ್ಯಮದಂಥ ತಂತ್ರಜ್ಞಾನದ ಉಪಕರಣಗಳೂ ಇರಲಿಲ್ಲ. ಆದರೂ ಸನಾತನವಾದ ಈ ಜ್ಞಾನವನ್ನು ನಮ್ಮ ಹಿರಿಯರು ಜೋಪಾನವಾಗಿ ಕಾದುಕೊಂಡು ಬಂದು ಮುಂದಿನವರಿಗೆ ಉಳಿಸಿದರು. ಈ ಸಂರಕ್ಷಣೆಯಲ್ಲಿ ನಮ್ಮ ಹಿರಿಯರು ಬಳಸಿಕೊಂಡ ಕೌಶಲ ಸ್ತುತ್ಯರ್ಹ.

ಕಂಠಸ್ಥ ಪರಂಪರೆ: ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನವನ್ನು ಕಾಪಿಡು ವಲ್ಲಿ ಬಳಸಿದ ಒಂದು ಅದ್ಭುತ ಸಾಧನ ಕಂಠಪಾಠ. ಓಶೋ ಈ ಕುರಿತು ತಮ್ಮ ವೇದಾಂತ ಎಂಬ ಆಂಗ್ಲ ಭಾಷಾ ಕೃತಿಯಲ್ಲಿ ಉಲ್ಲೇಖಿಸುವ ಒಂದು ಘಟನೆ ಗಮನಾರ್ಹ. ಅಲೆಗ್ಸಾಂಡರ್ ಭಾರತಕ್ಕೆ ಬಂದಿದ್ದ ಸಮಯ. ಈ ಭಾಗವನ್ನು ಗೆದ್ದು ಗ್ರೀಕ್‌ ದೇಶಕ್ಕೆ ಮರಳುತ್ತಿದ್ದಾನೆ. ಪಂಜಾಬ್‌ ಸಮೀಪ ದಲ್ಲಿ ಸಾಗುವಾಗ ಭಾರತದಿಂದ ಮರಳುವಾಗ ಅಮೂಲ್ಯ ಜ್ಞಾನ ಸಂಪತ್ತಾದ ನಾಲ್ಕು ವೇದಗಳನ್ನು ತೆಗೆದುಕೊಂಡು ಬಾ ಎಂದು ತನ್ನ ದೇಶದ ಜ್ಞಾನಿಗಳು ಹೇಳಿದ ವಿಷಯ ನೆನಪಾಗುತ್ತದೆ. ಅಲೆಗ್ಸಾಂಡರ್ ಈ ಬಗ್ಗೆ ಸ್ಥಳೀಯರನ್ನು ವಿಚಾರಿಸುತ್ತಾನೆ. ಅಲ್ಲೇ ಸಮೀಪದಲ್ಲಿ ವೇದ ವಿದ್ವಾಂಸರೊಬ್ಬರ ಮನೆಯಿರುತ್ತದೆ. ಅಲೆಗ್ಸಾಂಡರ್ ಸೇನೆ ಸಹಿತ ಆ ಮನೆಯತ್ತ ಧಾವಿಸುತ್ತಾನೆ. ನಾಲ್ಕು ವೇದಗಳನ್ನು ತನಗೆ ಕೊಡುವಂತೆ ಆಗ್ರಹಿಸುತ್ತಾನೆ. ಕೊಡದಿದ್ದರೆ ಪ್ರಾಣಕ್ಕೇ ಸಂಚಕಾರ ಬರಬಹುದೆಂಬ ಬೆದರಿಕೆಯನ್ನೂ ಒಡ್ಡುತ್ತಾನೆ. ಆ ಕುಟುಂಬ ಯಾವುದೇ ಭಯಕ್ಕೆ ಒಳಗಾಗುವುದಿಲ್ಲ. ವೇದ ಗಳನ್ನು ಕೊಡಲು ಸಿದ್ಧ. ಆದರೆ ಒಂದು ರಾತ್ರಿ ಕಾಯಬೇಕು. ಅದನ್ನು ಕೊಡುವ ಮೊದಲು ಕೆಲವು ಧಾರ್ಮಿಕ ವಿಧಿ ವಿಧಾನಗಳಿವೆ. ಬೇಕಾದರೆ ನಿನ್ನ ಸೇನೆ ನನ್ನ ಮನೆಯ ಸುತ್ತ ಕಾವಲಿರಲಿ.

ಅಲೆಗ್ಸಾಂಡರನು ಒಪ್ಪಿ ಸೇನೆಯನ್ನು ಮನೆಯ ಸುತ್ತ ನಿಯೋಜಿಸಿ ತೆರಳುತ್ತಾನೆ. ಬೆಳಗಾಯಿತು, ಅಲೆಗ್ಸಾಂಡರ್ ಆ ಮನೆಗೆ ಮರಳುತ್ತಾನೆ. ಅದೇ ಮನೆಯಲ್ಲಿ ಅಗ್ನಿ ಉರಿ ಯುತ್ತಿದೆ. ವೇದಗಳ ಕೊನೆಯ ಪುಟವನ್ನು ವೇದವಿದ್ವಾಂಸನು ತನ್ನ ಮಕ್ಕಳ ಮುಂದೆ ಓದುತ್ತಿದ್ದಾನೆ. ಅದು ಮುಗಿಯುತ್ತಿದ್ದಂತೆ ಉರಿಯುವ ಅಗ್ನಿಗೆ ಅದನ್ನು ಆಹುತಿ ಕೊಡುತ್ತಾನೆ. ಅಲೆಗಾÕಂಡರನಿಗೆ ಅಚ್ಚರಿಯಾಗಿ ವಿದ್ವಾಂಸನ ವರ್ತನೆಯನ್ನು ಪ್ರಶ್ನಿಸುತ್ತಾನೆ. ವಿದ್ವಾಂಸನು ಹೇಳುತ್ತಾನೆ. ಇವರು ನಾಲ್ವರು ನನ್ನ ಮಕ್ಕಳು. ಇವರಲ್ಲಿ ನಾಲ್ಕು ವೇದಗಳು ಇದೀಗ ಕಂಠಸ್ಥವಾಗಿವೆ. ಬೇಕಾದರೆ ಇವರನ್ನೇ ಕರೆದುಕೊಂಡು ಹೋಗು. ಅಲೆಗ್ಸಾಂಡರನಿಗೆ ಇದು ನಂಬಲಾಗದ ಸಂಗತಿಯಾಗುತ್ತದೆ. ಬೇರೆ ವಿದ್ವಾಂಸನೊಬ್ಬನನ್ನು ಕರೆಸಿಕೊಂಡು ಈ ನಾಲ್ವರನ್ನು ಪರೀಕ್ಷೆಗೆ ಒಳಪಡಿಸಿದಾಗ ನಾಲ್ವರಲ್ಲೂ ಈ ಜ್ಞಾನ ಸಂಪತ್ತು ಕಂಠಸ್ಥವಾಗಿರುವುದು ದೃಢಪಡುತ್ತದೆ.

Advertisement

ಈ ಕಥೆಯ ಆಶಯ ನಮ್ಮ ಪ್ರಾಚೀನರಲ್ಲಿ ಅದ್ಭುತವಾದ ನೆನಪಿನ ಶಕ್ತಿಯ ಕೌಶಲವಿತ್ತು. ಕಂಠದಲ್ಲಿಯೇ ಸಾವಿರಾರು ಪುಟಗಳಷ್ಟನ್ನು ಸೆರೆ ಹಿಡಿದುಕೊಳ್ಳುವ ಶಕ್ತಿ ಇದ್ದಿತ್ತು. ನಮ್ಮ ಜಾನಪದ ಸಾಹಿತ್ಯವನ್ನೇ ತೆಗೆದು ಕೊಂಡರೂ ಇದು ಮನವರಿಕೆಯಾಗುತ್ತದೆ. ನೂರಾರು ಪಾಡªನಗಳು, ಹಾಡುಗಳು ನಮ್ಮ ಹಿರಿಯರಿಗೆ ಕಂಠಸ್ಥ. ಇತ್ತೀಚಿನವರೆಗೂ ಯಕ್ಷಗಾನ ಭಾಗವತರಲ್ಲಿ ಪ್ರಸಂಗ ನೋಡಿ ಪದ ಹೇಳುವ ಕ್ರಮವಿರಲಿಲ್ಲ. ಹಿಂದಿನ ಕೆಲವು ಭಾಗವತರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರಂತೆ. ನಾವು ಪುಸ್ತಕದ ಭಾಗವತರಲ್ಲ, ಮಸ್ತಕದ ಭಾಗವತರು ಎಂದು.

ಅಕ್ಷರ ಪರಂಪರೆ: ಕಂಠಸ್ಥ ಪರಂಪರೆಯ ಮುಂದಿನ ಹೆಜ್ಜೆಯಾಗಿ ಬರೆವಣಿಗೆ ಬೆಳಕಿಗೆ ಬಂತು. ಅವುಗಳನ್ನು ಅಕ್ಷರ ರೂಪದಲ್ಲಿ ಸೆರೆ ಹಿಡಿ ಯುವ ಪ್ರಯತ್ನ. ಈ ಹಂತದಲ್ಲಿ ಲಿಪಿ ಶಾಸ್ತ್ರವು ಸಾಕಷ್ಟು ಬೆಳೆದಿತ್ತು. ಕಲ್ಲಿನ ಮೇಲೆ, ತಾಮ್ರದ ಮೇಲೆ ಆರಂಭವಾದ ಬರೆವಣಿಗೆ ಸ್ಥಾನದಲ್ಲಿ ಮುಂದೆ ತಾಳೆಗರಿ ತಲೆದೋರಿತು. ಕವಿ ಹಾಗೂ ಲಿಪಿಕಾರ ಎಂಬ ಪರಿಕಲ್ಪನೆಗಳು ಬೆಳೆದುಬಂದವು. ಮಹಾಭಾರತವನ್ನು ಬರೆದವನು ಗಣಪತಿ. ಅದನ್ನು ನಿರೂಪಿಸುತ್ತಾ ಸಾಗಿದವನು ವ್ಯಾಸಮಹರ್ಷಿ. ಕುಮಾರವ್ಯಾಸ ಭಾರತದಲ್ಲೂ ಕವಿ ಹಾಗೂ ಲಿಪಿಕಾರ ಉಲ್ಲೇಖಗಳಿವೆ. ಕುಮಾರವ್ಯಾಸನೇ ಒಂದು ಕಡೆ ಹೇಳುವಂತೆ ತಾನು ಲಿಪಿಕಾರ, ಗದುಗಿನ ವೀರನಾರಾಯಣನೇ ಕವಿ. ಪ್ರಾಚೀನ ಕಾವ್ಯದ ಮೂಲಕ ವಿವಿಧ ವಿಚಾರಗಳನ್ನು ಸೆರೆ ಹಿಡಿಯುವ ಕವಿಗೆ ಪ್ರಬಲವಾದ ಆತ್ಮವಿಶ್ವಾಸ ಮುಖ್ಯ. ಅನೇಕ ಹಳಗನ್ನಡ ಕವಿಗಳಲ್ಲಿ ಈ ಆತ್ಮವಿಶ್ವಾಸ ಕೆಲವೊಮ್ಮೆ ಅತಿಯಾಗಿ ಕಂಡರೂ ಅಚ್ಚರಿ ಪಡಬೇಕಾಗಿಲ್ಲ. ರನ್ನನು ತನ್ನ ಕೃತಿಯನ್ನು ವಿಮರ್ಶಿಸುವವನಿಗೆ ಎಂಟೆದೆ ಬೇಕು ಎನ್ನುತ್ತಾ ತಾನು ವಾಗೆವಿಯ ಭಂಡಾರ ಮುದ್ರೆಯನ್ನು ಒಡೆದೆನೆಂದು ಹೇಳುತ್ತಾನೆ. ಪೊನ್ನನಂತೂ ಕಾಳಿದಾಸನಿಗಿಂತ ನಾಲ್ವಡಿ ತಾನೆನ್ನುತ್ತಾನೆ. ಆದರೆ ಬರೆವಣಿಗೆಯ ಸಿದ್ಧಿ ತನಗೊಲಿದ ಪರಿಯನ್ನು ಕುಮಾರವ್ಯಾಸ ಹೇಳುವ ರೀತಿ ವಿಶಿಷ್ಟವಾದುದು. ಹಲಗೆ ಬಳಪವ ಪಿಡಿಯದ ಅಗ್ಗಳಿಕೆ ಎನ್ನುತ್ತಾನೆ. ತಾಳೆಗರಿಯಲ್ಲಿ ಬರೆಯುವಾಗ ತಪ್ಪಾಗದಂತೆ ಎಚ್ಚರ ಅಗತ್ಯ. ಹಾಗೇನಾದರೂ ಬರೆವಣಿಗೆಯಲ್ಲಿ ಎಡವಿದರೆ ತಾಳೆಗರಿಯೇ ವ್ಯರ್ಥವಾಗುವ ಸಾಧ್ಯತೆಗಳಿದ್ದವು. ಹಾಗಾಗಿ ಮೊದಲು ಹಲಗೆ ಬಳಪವನ್ನು ಬಳಸಿ ಮಾದರಿ ಪಠ್ಯವನ್ನು ತಯಾರಿಸಿಕೊಳ್ಳುವ ಕ್ರಮವಿತ್ತು. ಆದರೆ ಕುಮಾರವ್ಯಾಸನಿಗೆ ಹಲಗೆ ಬಳಪವ ಹಿಡಿಯುವ ಅಗತ್ಯವೇ ಇಲ್ಲ. ಬರೆವಣಿಗೆಯ ಮೇಲೆ ಅಷ್ಟು ಹಿಡಿತ.

ನೇರವಾಗಿ ತಾಳೆಗರಿಯಲ್ಲಿಯೇ ಬರೆಯುವಷ್ಟು ಭಾಷಾಪ್ರೌಢಿಮೆ ಮತ್ತು ಆತ್ಮವಿಶ್ವಾಸ. ಒಮ್ಮೆ ಒಂದು ಪದ ಬಳಸಿದರೆ ಅದನ್ನು ಬದಲಾಯಿಸುವ ಪ್ರಶ್ನೆಯೇ ಆತನ ಬರೆವಣಿಗೆಯ ಶೈಲಿಯಲ್ಲಿಲ್ಲ. ಅಷ್ಟು ನಿಖರತೆ. ಬೇರೆಯವರ ರೀತಿಯನ್ನು ನಕಲು ಮಾಡುವ ಅಭ್ಯಾಸವೇ ತನಗಿಲ್ಲ ಎನ್ನುತ್ತಾ ಕಂಠಪತ್ರದ ಉಲುಹು ಕೆಡದ ಅಗ್ಗಳಿಕೆ ಎನ್ನುತ್ತಾನೆ. ಉಲುಹು ಎಂದರೆ ನಾದ. ಪತ್ರ ಎಂದರೆ ತಾಳೆಗರಿ. ಕಂಠ ಎಂದರೆ ಬರೆಯುವ ಸಾಧನ. ಬರೆವಣಿಗೆಯಲ್ಲಿ ಆ ನಾದದ ಓಟ ಅಷ್ಟು ಸುಂದರ. ಭಾಮಿನಿಯಲ್ಲಿ ನಿರರ್ಗಳವಾಗಿ ಬರೆದುಕೊಂಡು ಸಾಗುವ ಕೌಶಲ. ಇಂಥ ಬಲುಹು ವೀರನಾರಾಯಣನ ಕಿಂಕರನಾದ ತನ್ನದು ಎಂಬಲ್ಲಿ ಅಷ್ಟೇ ವಿನಯವಂತಿಕೆಯನ್ನೂ ಪ್ರದರ್ಶಿಸುತ್ತಾನೆ. ಸಾಹಿತ್ಯದ ಯಾವುದೇ ಪ್ರಕಾರವಿರಲಿ, ಅದರಲ್ಲಿ ಸರಾಗವಾಗಿ ಬರೆಯುವ ವಿಶೇಷ ಕೌಶಲ ನಮ್ಮ ಹಿರಿಯರಿಗೆ ಸಿದ್ಧಿಸಿತ್ತು. ಹಾಗಾಗಿಯೇ ನಮ್ಮ ಅಂದಿನ ಕವಿಗಳ, ವಚನಕಾರರ, ದಾಸರ, ಸರ್ವಜ್ಞನ ಮತ್ತು ಹಳ್ಳಿಗರ ಅನೇಕ ಸಾಹಿತ್ಯಗಳು ಕಾಲದಂಚಿನಲ್ಲಿ ತೇಲಿ ಹೋಗದೆ ಮತ್ತೆ ಮತ್ತೆ ಜನಮಾನಸದಲ್ಲಿ ಜೀವವನ್ನು ಪಡೆಯುತ್ತಿವೆ.

ಇದು ಕಂಪ್ಯೂಟರ್‌ ಯುಗ. ಎಲ್ಲೆಡೆ ಡಿಜಿಟಲ್‌ ಕ್ರಾಂತಿ. ಕೈ ಬರೆವಣಿಗೆ ಮರೆತೇ ಹೋಗುವಷ್ಟು ದೂರ ಸಾಗುತ್ತಿದೆ. ಜ್ಞಾನ ಸಂರಕ್ಷಣೆಗೂ ನೂರಾರು ತಂತ್ರಜ್ಞಾನ ಮಾರ್ಗಗಳಿವೆ. ಇದರ ನಡುವೆಯೂ ನಮ್ಮಲ್ಲಿ ಹಸ್ತಪ್ರತಿಯ ಸಂಗ್ರಹದ ಹವ್ಯಾಸ, ಶಾಸನಗಳ ಓದು, ವಾಚನ ಹಾಗೂ ಪ್ರವಚನ ಮುಂದುವರಿಯುತ್ತಿದೆ. ಅವುಗಳಿಗೂ ಆಧುನಿಕ ತಂತ್ರಜ್ಞಾನದ ಸ್ಪರ್ಶವಾಗುತ್ತಿದೆ. ಎಷ್ಟೇ ಬದಲಾಗಲಿ. ನಮ್ಮ ಹಿರಿಯರು ಯಾವುದೇ ಆಧುನಿಕ ಸೌಲಭ್ಯಗಳಿಲ್ಲದ ಅಂದಿನ ದಿನಗಳಲ್ಲಿ ಪಟ್ಟ ಶ್ರಮ ಇಂದಿಗೂ ಸ್ಮರಣೀಯ.

-ಡಾ| ಶ್ರೀಕಾಂತ್‌ ಸಿದ್ದಾಪುರ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next