ಬೆಂಗಳೂರು: ಕೌಶಲಭರಿತ ಕರ್ನಾಟಕ ನಿರ್ಮಾಣ ನನ್ನ ಗುರಿಯಾಗಿದೆ. ಆರಂಭಿಕ ಹಂತದಲ್ಲೇ ಮಕ್ಕಳನ್ನು ಕೌಶಲಯುಕ್ತರನ್ನಾಗಿ ಮಾಡಲು ಮುಂದಿನ ಶೈಕ್ಷಣಿಕ ವರ್ಷದಿಂದ 8, 9 ಹಾಗೂ 10ನೇ ತರಗತಿಗಳಲ್ಲಿ ತಾಂತ್ರಿಕ ಶಿಕ್ಷಣ ಜಾರಿಗೆ ತರಲು ತೀರ್ಮಾನಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ “ವಿಶ್ವ ಯುವ ಕೌಶಲ ದಿನಾಚರಣೆ-2022′ ಉದ್ಘಾಟಿಸಿ ಮಾತನಾಡಿದ ಅವರು, 8,9 ಮತ್ತು 10ನೇ ತರಗತಿಗಳಲ್ಲಿ ತಾಂತ್ರಿಕ ಶಿಕ್ಷಣವನ್ನು ಪರಿಚಯಿಸಲು ತೀರ್ಮಾನಿಸಿದ್ದು, ಮುಂದಿನ ಬಜೆಟ್‌ನಲ್ಲಿ ಘೋಷಿಸುತ್ತೇನೆ ಎಂದರು.
ಕರ್ನಾಟಕವು ದೇಶದ ನಂಬರ್ ಒನ್ ಕೌಶಲಭರಿತ ರಾಜ್ಯವಾಗಬೇಕು. ಜಗತ್ತಿನ 10 ಕೌಶಲಭರಿತ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿರಬೇಕು ಎಂಬುದು ನಮ್ಮ ಸರಕಾರದ ಚಿಂತನೆ. ಈ ದಿಸೆಯಲ್ಲಿ ನಮ್ಮ ಸರಕಾರ ಅನೇಕ ಹೆಜ್ಜೆಗಳನ್ನು ಇಟ್ಟಿದೆ. ಯುವ ಸಮುದಾಯವನ್ನು ನೈತಿಕವಾಗಿ ಸಮರ್ಥರನ್ನಾಗಿ ಮಾಡಲು ಕೌಶಲ ಮತ್ತು ಉದ್ಯೋಗ ಬಹುದೊಡ್ಡ ಅಸ್ತ್ರಗಳು ಎಂದು ಮುಖ್ಯಮಂತ್ರಿಯವರು ಪ್ರತಿಪಾದಿಸಿದರು.
6 ಕಾಲೇಜು ಮೇಲ್ದರ್ಜೆಗೆ :
ರಾಜ್ಯದ 6 ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ನಮ್ಮ ರಾಜ್ಯದ ಮಕ್ಕಳು ಬೇರೆ ಐಐಟಿಗಳಿಗೆ ಹೋಗಿ ಕೈ ಕಟ್ಟಿ ನಿಲ್ಲುವಂತಾಗಬಾರದು. ಅವರಿಗೆ ನಮ್ಮ ರಾಜ್ಯದಲ್ಲೇ ಅವಕಾಶಗಳು ಸಿಗಬೇಕು. 6 ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಒಂದೊಂದು ಕಾಲೇಜು ಒಂದೊಂದು ವಿಷಯದಲ್ಲಿ ಪ್ರಾವೀಣ್ಯ ಹೊಂದಿರಬೇಕು ಹಾಗೂ ಪ್ರತಿ ಕಾಲೇಜು ಕೂಡ ವಿದೇಶಿ ವಿವಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಜತೆಗೆ 200 ಐಟಿಐಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಡಿಪ್ಲೋಮಾ ಕಾಲೇಜುಗಳನ್ನು ಉನ್ನತೀಕರಿಸಲಾಗಿದೆ. ಸದ್ಯ 23 ಕೌಶಲಗಳಿಗೆ ತರಬೇತಿ ಕೊಡಲಾಗುತ್ತಿದ್ದು, ಇನ್ನಷ್ಟು ಕೌಶಲಗಳನ್ನು ಸೇರಿಸಲಾಗುವುದು ಎಂದರು.
ಮಹಿಳಾ ಸ್ವಸಹಾಯ ಸಂಘಗಳನ್ನು ಕೌಶಲ ತರಬೇತಿ ಯೋಜನೆಯೊಂದಿಗೆ ಜೋಡಿಸುವ ಮೂಲಕ 5 ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡುವ ಗುರಿ ತಲುಪಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಉನ್ನತ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ| ಅಶ್ವತ್ಥ ನಾರಾಯಣ ಹಾಗೂ ಕೌಶಲಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.