Advertisement

ಕೌಶಲ ಆಧಾರಿತ ಅಭಿಯಾನ: ಮೋದಿ

06:00 AM Oct 30, 2017 | Team Udayavani |

ಉಜಿರೆ: ಕೌಶಲ ಆಧಾರಿತ ಕಾಯಕಗಳೇ ಸುಭದ್ರ ಆರ್ಥಿಕತೆಯ ಭಾರತ ವನ್ನು ರೂಪಿಸುತ್ತವೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯಿಂದ ಈಗಾಗಲೇ ದೊಡ್ಡ ಮಟ್ಟದಲ್ಲಿ ಕರಕುಶಲ ಸಂಬಂಧಿತ ಸಣ್ಣ, ಮಧ್ಯಮ ಉದ್ಯಮಗಳು ಯಶಸ್ವಿಯಾಗಿವೆ. ದೇಶಕ್ಕೆ ಇದು ಮಾದರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತ ಕಂಠದಿಂದ ಪ್ರಶಂಸಿಸಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 12 ಲಕ್ಷ ಸ್ವಸಹಾಯ ಸಂಘದ ಸದಸ್ಯರಿಗೆ ರೂಪೇ ಕಾರ್ಡ್‌ ವಿತರಣೆ, ತಂತ್ರಾಂಶ ಆಧಾರಿತ ಸ್ವಸಹಾಯ ಸಂಘ ನಿರ್ವಹಣೆ ಒಪ್ಪಂದ ವಿನಿಮಯ ಮತ್ತು “ಭೂಮಿಯನ್ನು ರಕ್ಷಿಸಿ-ಮುಂದಿನ ಪೀಳಿಗೆಗೆ ವರ್ಗಾಯಿಸಿ’ ಅಭಿಯಾನವನ್ನು ಉಜಿರೆಯ ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಟೇಡಿಯಂ
ನಲ್ಲಿ ಪ್ರಚಂಡ ಜನಸ್ತೋಮದ ಸಮ್ಮುಖದಲ್ಲಿ ಉದ್ಘಾಟಿಸಿ ಪ್ರಧಾನಿ ಅವರು ಮಾತನಾಡಿದರು.

ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೃಷಿಕರು, ರೈತರಿಗೆ ಸಕಾಲಿಕ ನೆರವು, ಮಾರ್ಗದರ್ಶನ ನೀಡುತ್ತಿದ್ದಾರೆ. ಇದರ ಜತೆಯಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಕೌಶಲ ಆಧಾರಿತ ಕಾಯಕಗಳಿಗೆ ಬೆಂಬಲ ಒದಗಿಸಿದ್ದಾರೆ. ಇದು ನೇರವಾಗಿ ಉದ್ಯೋಗಾವಕಾಶಗಳನ್ನು, ಉತ್ಪನ್ನಗಳಿಗೆ ಮಾರುಕಟ್ಟೆಯನ್ನು, ಸ್ವಾವಲಂಬನೆಯನ್ನು ಸಾಧಿಸಲು ಪೂರಕವಾಗುತ್ತದೆ. ಇಲ್ಲಿನ ಕಾರ್ಯ ಚಟುವಟಿಕೆಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಶಿಕ್ಷಣ ಮುಂತಾದ ಸಂಸ್ಥೆಗಳು ಅಧ್ಯಯನ ನಡೆಸುವುದು ಈ ಯಶಸ್ಸಿಗೆ ನಿದರ್ಶನ ಎಂದರು.

ಜೆಮ್‌ ಸೇರ್ಪಡೆಗೆ ಕರ್ನಾಟಕಕ್ಕೆ ಕರೆ
ಭಾರತ ಸರಕಾರವೀಗ ಜೆಇಎಂ (GeM – Government e Market) ಎಂಬ ಪರಿಕಲ್ಪನೆಯಲ್ಲಿ ವೆಬ್‌ಪೋರ್ಟಲ್‌ ಸ್ಥಾಪಿಸಿದೆ. ಎಲ್ಲ ಬಗೆಯ ಉತ್ಪನ್ನಗಳನ್ನು ಈ ವೆಬ್‌ನಲ್ಲಿ ಉದ್ಯಮಿಗಳು, ಉತ್ಪಾದಕರು, ಕೃಷಿಕರು ಮುಂತಾದವರು ನೋಂದಾಯಿಸಿಕೊಳ್ಳಬಹುದು. ಕೇಂದ್ರ, ರಾಜ್ಯ ಸರಕಾರಗಳು ಕೂಡ ಇಲ್ಲಿ ಖರೀದಿದಾರರಾಗಿರುತ್ತಾರೆ. ಉತ್ಪಾದಕರಿಗೆ ಉತ್ತಮ ಬೆಲೆ, ಗ್ರಾಹಕರಿಗೆ ನ್ಯಾಯ ಇಲ್ಲಿ ಒದಗುತ್ತದೆ. ಈಗಾಗಲೇ 15 ರಾಜ್ಯಗಳು ನೋಂದಾಯಿಸಿವೆ. ಪಾರದರ್ಶಕವಾಗಿ ಇಲ್ಲಿ ವ್ಯವಹಾರ ನಡೆಯುತ್ತದೆ. ಕರ್ನಾಟಕ ರಾಜ್ಯ ಕೂಡ ಕೂಡಲೇ ನೋಂದಾಯಿಸಿಕೊಳ್ಳುವಂತೆ ಮೋದಿ ಸಲಹೆ ನೀಡಿದರು.

ಈಗಾಗಲೇ 52 ಸಾವಿರ ಕೋ.ರೂ. ಮೊತ್ತ ಸರಿದಾರಿಗೆ ಬಂದಿದೆ. ಅತ್ಯಂತ ಕಠಿನವಾದ ಆರ್ಥಿಕ ಶಿಸ್ತನ್ನು ನಾವು ಅನುಷ್ಠಾನಿಸಿದ್ದೇವೆ. ಈ ಶಿಸ್ತು ಕ್ರಮದಿಂದ ಕಂಗಾಲಾಗಿರುವ ಕಾಳಸಂತೆಕೋರರು “ಕ್ಯಾ ಮೋದೀಕೋ ಪ್ರಶಂಸಾ ಕರೇಂಗೇ?’ ಎಂದು ಪ್ರಶ್ನಿಸಿದರು. ಈ ದೇಶದ ಆರ್ಥಿಕತೆ ಯಾವುದೇ ಕಾರಣಕ್ಕೆ ಕುಸಿಯಬಾರದು. ಸಶಕ್ತ, ಭ್ರಷ್ಟಾಚಾರ ಮುಕ್ತ ಭಾರತದ ನಿರ್ಮಾಣವೇ ತಮ್ಮ ಗುರಿ ಎಂದು ಸಾರಿದರು.

Advertisement

ಜಲ ಸಂರಕ್ಷಣೆ
ನೀರು ಎನ್ನುವುದು ನಮ್ಮೆಲ್ಲರ ಬದುಕಿನ ಅತ್ಯಂತ ಪ್ರಮುಖವಾದ ವಸ್ತು. ನೀರಿನ ಒಂದೊಂದು ಹನಿ ಕೂಡ ಮುತ್ತು ರತ್ನವಿದ್ದಂತೆ (ಪಾನೀ ಕೀ ಹರ್‌ ಏಕ್‌ ಬೂಂದ್‌ ಭೀ ಮೋತೀ ಜೈಸೇ ಹೋತಾ ಹೈ). ನಾವೀಗ ಬಳಸುತ್ತಿರುವ ನೀರನ್ನು ನಮ್ಮ ಹಿಂದಿನ ತಲೆಮಾರಿನವರು ರಕ್ಷಿಸಿ ನಮಗೆ ನೀಡಿದ್ದಾರೆ. ಆದ್ದರಿಂದ ಮುಂದಿನ ತಲೆಮಾರಿನವರಿಗೆ ಜಲಸಂಪತ್ತನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಡಾ| ವೀರೇಂದ್ರ ಹೆಗ್ಗಡೆಯವರು ಆಶಿಸಿರುವ ಜಲ ಸಂರಕ್ಷಣಾ ಅಭಿಯಾನಕ್ಕೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ. ಹೆಗ್ಗಡೆಯವರು ಯಾವ ಕಾರ್ಯವನ್ನು ಆರಂಭಿಸಿದರೂ ಅದು ಯಶಸ್ವಿಯಾಗುತ್ತದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಭೂಮಾತೆಯ ಸಂರಕ್ಷಣೆಯಾಗಬೇಕು. ದೇಶ ಸಾತಂತ್ರÂದ 75ನೇ ವರ್ಷವನ್ನು ಆಚರಿಸುವ 2022ರ ವೇಳೆಗೆ ರೈತರು ಬಳಸುವ ಯೂರಿಯಾದ ಪ್ರಮಾಣ ಶೇ. 50ಕ್ಕೆ ಇಳಿಯಬೇಕು. ಕೃಷಿಭೂಮಿಯ ಸಹಜ ಫಲವತ್ತತೆ ಸಾಧ್ಯವಾಗಬೇಕು. ಮೈಕ್ರೋ ಇರಿಗೇಶನ್‌ ಪರಿಕಲ್ಪನೆ ಕಾರ್ಯರೂಪಕ್ಕೆ ಬರಬೇಕು ಎಂದು ಮೋದಿ ಆಶಯ ವ್ಯಕ್ತಪಡಿಸಿದರು.

ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತೀ ಹೆಗ್ಗಡೆ ಉಪಸ್ಥಿತರಿದ್ದರು. ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ಮತ್ತು ಅನಂತ ಕುಮಾರ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಮುಖ್ಯ ಅತಿಥಿಗಳಾಗಿದ್ದರು.

ಡಿಜಿಟಲ್‌ ನಿರ್ವಹಣೆ
ಕರೆನ್ಸಿ ಅಥವಾ ಹಣಕಾಸು ಎಂಬುದು ಕಾಲಾನುಕಾಲಕ್ಕೆ ಬದಲಾಗುತ್ತಾ ಬಂದಿದೆ. ಶಿಲೆ, ಚರ್ಮ, ಚಿನ್ನ, ಬೆಳ್ಳಿ, ಕಾಗದ, ಪ್ಲಾಸ್ಟಿಕ್‌ ಮುಂತಾದ ರೂಪಗಳನ್ನು ಕರೆನ್ಸಿ ತಾಳಿದೆ. ಈಗ ಜಗತ್ತಿನ ಆರ್ಥಿಕತೆ ಡಿಜಿಟಲ್‌ ಆಗುತ್ತಿರುವಾಗ ಭಾರತ ಅದರಲ್ಲಿಯೂ ಮುಂಚೂಣಿಯಲ್ಲಿರಬೇಕೆಂದು ಮೋದಿ ಹೇಳಿದರು. ರೂಪೇ ಕಾರ್ಡ್‌, ತಂತ್ರಾಂಶ ಆಧಾರಿತ ನಿರ್ವಹಣೆಗಳಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಲಕ್ಷಾಂತರ ಸದಸ್ಯರು ದೇಶಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಈ ಬಗ್ಗೆ ತನಗೆ ತುಂಬಾ ಸಂತಸವಾಗಿದೆ ಎಂದು ಹೇಳಿದರು.

ಭಾರತದಲ್ಲೀಗ 35ಕ್ಕಿಂತ ಕಿರಿಯ ವಯಸ್ಸಿನವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಶ್ಲಾಘನೀಯ ಮಾನವ ಸಂಪದವನ್ನು ದೇಶ ಹೊಂದಿದೆ. ಯುವಜನತೆಗೆ ಸರಿಯಾದ ಮಾರ್ಗದರ್ಶನವಿರಬೇಕು. ಅವರು ಸ್ವಾವಲಂಬಿಗಳಾಗಿರಬೇಕು. ಅವರಿಗೆ ಉದ್ಯೋಗಗಳು ಸೃಷ್ಟಿಯಾಗಬೇಕು. ಧರ್ಮಸ್ಥಳದ ಯೋಜನೆಗಳು ಈ ಬಗ್ಗೆ ಪರಿಪೂರ್ಣ ಎಂದು ವಿಶ್ಲೇಷಿಸಿದರು.

ಹೆಣ್ಣೆಂದರೆ ಮನೆಗೆ ಮಹಾಲಕ್ಷ್ಮೀ ಇದ್ದಂತೆ. 
ಆದ್ದರಿಂದ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಪ್ರಗತಿಯ ಪಾಲುದಾರರಾಗಿದ್ದಾರೆ. ಸಮಾಜವನ್ನು ಕಟ್ಟಿ , ಸಮಾಜದ ಕನಸನ್ನು ನನಸು ಮಾಡಿ, ಹೊಸ ಕಲ್ಪನೆಗಳಿಗೆ ಜೀವ ನೀಡಿ ಆರ್ಥಿಕ ಸಹಕಾರದ ಮೂಲಕ ಬೆಂಗಾವಲು ಹಾಗೂ ಮಾರ್ಗದರ್ಶನ ನೀಡುವ ಕೆಲಸ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಗುತ್ತಿದೆ.
 -ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ  ಧರ್ಮಾಧಿಕಾರಿ

ಆರ್ಥಿಕ ಸುಧಾರಣೆಗಳನ್ನು ತಾನು ತಂದಾಗ 
ಸಂಸತ್ತಿನಲ್ಲಿ ಬುದ್ಧಿವಂತರೆನಿಸಿಕೊಂಡ ಕೆಲವರು ಕೆಟ್ಟದಾಗಿ ನಿಂದಿಸಿದರು. ಭಾರತ ಅಶಿಕ್ಷಿತರ ದೇಶ. ಅಶಿಕ್ಷಿತ ಬಡಜನರು ಡಿಜಿಟಲ್‌ ಅಥವಾ ಕ್ಯಾಶ್‌ಲೆಸ್‌ ವ್ಯವಹಾರ ಹೇಗೆ ನಡೆಸಿಯಾರು? ಎಲ್ಲರಲ್ಲೂ ಮೊಬೈಲ್‌ ಇದೆಯಾ ಎಂದೆಲ್ಲ ವ್ಯಂಗ್ಯವಾಡಿದರು. ಈ ಪ್ರಶ್ನೆಗಳಿಗೆ ಹೆಗ್ಗಡೆ ಅವರು ಅನುಷ್ಠಾನಿಸಿದ ಯೋಜನೆಗಳೇ ಉತ್ತರ. 
-ನರೇಂದ್ರ ಮೋದಿ, ಪ್ರಧಾನ ಮಂತ್ರಿ

– ಮನೋಹರ ಪ್ರಸಾದ್

Advertisement

Udayavani is now on Telegram. Click here to join our channel and stay updated with the latest news.

Next