Advertisement

ಆರು ಸಾವಿರ ಸಸಿ ನೆಟ್ಟ ಪರಿಸರ ಪ್ರೇಮಿ

04:06 PM Jun 05, 2022 | Team Udayavani |

ಮೂಡಲಗಿ: ಸಸಿ ನೆಟ್ಟು ಅವುಗಳಿಗೆ ನೀರು ಹಾಕಿ, ಪಾಲನೆ-ಪೋಷಣೆ ಮಾಡುವ ಮೂಲಕ ಇಡೀ ದೇಶಕ್ಕೆ ಸಾಲು ಮರದ ತಿಮ್ಮಕ್ಕನೇ ಮಾದರಿಯಾಗಿದ್ದಾರೆ. ಸಾಲು ಮರದ ತಿಮ್ಮಕ್ಕನ ಪ್ರೇರಣೆಯಿಂದ ಪಟ್ಟಣದ ಈರಪ್ಪ ಢವಳೇಶ್ವರ ಎಂಬಾತ ಸುಮಾರು 6000 ಸಸಿ ನೆಟ್ಟು ಅವುಗಳ ಪಾಲನೆ-ಪೋಷಣೆ ಮಾಡಿ ಪರಿಸರ ಪ್ರೇಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಹೌದು, ಪಟ್ಟಣದ ಗಂಗಾ ನಗರದ ನಿವಾಸಿ ಈರಪ್ಪ ಢವಳೇಶ್ವರ ಸತತ 8 ವರ್ಷಗಳಿಂದ ಪಟ್ಟಣದ ವಿವಿಧ ಸ್ಥಳಗಳಲ್ಲಿ ಸಸಿ ನೆಟ್ಟು ಅವುಗಳಿಗೆ ನೀರು ಹಾಕಿ, ಪೋಷಣೆ ಮಾಡಿ ಗಿಡ-ಮರ ಬೆಳೆಸುತ್ತ ಪರಿಸರ ಪ್ರೇಮ ಬೆಳೆಸಿಕೊಂಡಿದ್ದಾರೆ. ಅರಣ್ಯ ಇಲಾಖೆ ಹಾಗೂ ಪುರಸಭೆ ಸಹಕಾರದಿಂದ ಪಟ್ಟಣದ ಕಸ ವಿಲೇವಾರಿ ಘಟಕ, ಜಲ ಶುದ್ಧೀಕರಣ ಘಟಕ, ದೇವಸ್ಥಾನಗಳು, ಅಂಗನವಾಡಿ ಕೇಂದ್ರಗಳು, ಗುರ್ಲಾಪುರ ಗ್ರಾಮದ ಎರಡು ರುದ್ರಭೂಮಿಗಳು, ಶಾಲಾ-ಕಾಲೇಜುಗಳ ಆವರಣ ಹೀಗೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸುಮಾರು 6000 ಸಸಿ ನೆಟ್ಟ ಈರಪ್ಪ ಢವಳೇಶ್ವರ ಕಾರ್ಯ ಇತರರಿಗೆ ಮಾದರಿ.

ಆರು ವರ್ಷಗಳ ಹಿಂದೆ ಬಣಗುಡುತ್ತಿದ್ದ ಪಟ್ಟಣದ ರುದ್ರಭೂಮಿ ಈರಪ್ಪ ಅವರ ಪರಿಸರ ಕಾಳಜಿಯಿಂದ ಈಗ ರುದ್ರಭೂಮಿಯಲ್ಲಿ ನೂರಾರು ಗಿಡಗಳಿಂದ ಕಂಗೊಳಿಸುತ್ತಿದ್ದು, ಸ್ಮಶಾನದ ಆವರಣಕ್ಕೆ ಹಸಿರು ತೋರಣ ಕಟ್ಟಿದಂತಾಗಿದೆ. ಸೂತಕದ ಭಾರ ಹೊತ್ತು ಸ್ಮಶಾನಕ್ಕೆ ಬರುವ ಜನರಿಗೆ ಗಿಡಗಳೆಲ್ಲ ನೆರಳಾಗಿ ತಂಪು ನೀಡುತ್ತಲಿವೆ. ಪ್ರತಿಯೊಂದು ಗಿಡಗಳಿಗೂ ಪಿವಿಸಿ ಪೈಪ್‌ ಜೋಡಣೆ ಜೊತೆಗೆ ಡ್ರಿಪ್‌ ಅಳವಡಿಸಿ ಪ್ರತಿದಿನ ನೀರು ಬಿಡುವ ಜೊತೆಗೆ ಗಿಡಗಳ ಸುತ್ತ ಇರುವ ಕಸ ತೆಗೆಯುವ ಕಾಯಕ ಮಾಡುತ್ತಿದ್ದಾರೆ.

ಇನ್ನೂ ಪಟ್ಟಣದ ಸಾರ್ವಜನಿಕರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರಿಂದ ಕಾಣಿಕೆ ರೂಪದಲ್ಲಿ ಸಸಿ ಸಂಗ್ರಹಿಸಿ, ಅವುಗಳನ್ನು ನೆಟ್ಟು ಪಾಲನೆ-ಪೋಷಣೆ ಮಾಡುವ ಕಾಯಕದಲ್ಲಿ ಈರಪ್ಪ ತೊಡಗಿಕೊಂಡಿದ್ದಾರೆ.

ಇವತ್ತಿನ ದಿನಗಳಲ್ಲಿ ಪರಿಸರ ನಾಶದಿಂದ ಅಂತರ ಜಲಮಟ್ಟ ಕುಸಿತವಾಗಿದೆ ಮತ್ತು ಬಿಸಿಲಿನ ತಾಪಮಾನ ಹೆಚ್ಚಾಗಿದೆ, ಇದ್ದನ್ನು ಹೊಗಲಾಡಿಸಲು ಪ್ರತಿಯೊಬ್ಬರು ಜವಾಬ್ದಾರಿಯಿಂದ ಗೀಡ ಮರಗಳನ್ನು ಬೆಳೆಸಿ ಆರೋಗ್ಯಕರ ಹಾಗೂ ಸ್ವಚಂದವಾದ ಪರಿಸರ ನಿರ್ಮಿಸಲು ಸಾಧ್ಯ –ಈರಪ್ಪ ಢವಳೇಶ್ವರ, ಗಂಗಾ ನಗರ ನಿವಾಸಿ

Advertisement

„ಕೆ.ಬಿ. ಗಿರೆನ್ನವರ

Advertisement

Udayavani is now on Telegram. Click here to join our channel and stay updated with the latest news.

Next