ಬೆಂಗಳೂರು: ವಿಮಾನ ನಿಲ್ದಾಣಕ್ಕೆ ಹೋಗಲು ಬಿಎಂಟಿಸಿ ಬಸ್‌ಗೆ ಕಾಯುತ್ತಿದ್ದ ರಾಜಸ್ತಾನ್ ಮೂಲದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಐಪೋನ್, ಹಣ ಕಸಿದು ಪರಾರಿಯಾಗಿದ್ದ ಆರು ಮಂದಿ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ತಿಪ್ಪಸಂದ್ರದ ಗುಲನ್(20), ಇಂದಿರಾನಗರದ ಶಿವಪ್ರಸಾದ್(21), ಪ್ರವೀಣ್, (27), ಗೋವಿಂದ (19), ಅಭಿ(23), ಆನೇಕಲ್‌ನ ಸುನೀಲ್ (20), ಬಂಧಿತರು. ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾ. 14ರಂದು ಇಂದಿರಾನಗರದ ಬಿಎಸ್‌ಎನ್‌ಎಲ್ ಸಿಗ್ನಲ್ ಬಳಿ ರಾಜಸ್ತಾನ್‌ನ ಜೈಪುರ್ ಮೂಲದ ಅಜಯ್ ಯದುವಂಶಿ ಎಂಬುವರು ಬಸ್‌ಗಾಗಿ ಕಾಯುತ್ತಿದ್ದಾಗ ಇನೋವಾ ಕಾರಿನಲ್ಲಿ ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಗಂಭೀರವಾಗಿ ಹಲ್ಲೆ ನಡೆಸಿ ಐಫೋನ್, ಹಣ ಹಾಗೂ ಇತರೆ ದಾಖಲೆಗಳನ್ನು ಕಳವು ಮಾಡಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು.
ಖಾಸಗಿ ಕಂಪನಿಯಲ್ಲಿ ಸಂದರ್ಶನಕ್ಕೆಂದು ಮಾ. 13ರಂದು ಬೆಂಗಳೂರಿಗೆ ಬಂದಿದ್ದ ಅಜಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಮಾ. 14ರ ಮುಂಜಾನೆ 3.30ರ ಸುಮಾರಿಗೆ ಇಂದಿರಾನಗರದ 80 ಅಡಿ ರಸ್ತೆ ಬಿಎಸ್‌ಎನ್‌ಎಲ್ ಸಿಗ್ನಲ್ ಬಳಿ ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಇನೋವಾ ಕಾರಿನಲ್ಲಿ ಬಂದ 8 ಮಂದಿ ದರೋಡೆಕೋರರು ಅಜಯ್ ಮೇಲೆ ಚಾಕು ಮತ್ತು ಲಾಂಗ್‌ನಿಂದ ಗಂಭೀರವಾಗಿ ಹಲ್ಲೆ ನಡೆಸಿ ಐಫೋನ್ ಸೇರಿದಂತೆ ಹಣ ಮತ್ತಿತರ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ನೆಟ್‌ವರ್ಕ್‌ಗಳನ್ನು ಸಂಗ್ರಹಿಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇನ್ನೊಂದೆಡೆ ಚಿಕಿತ್ಸೆ ಬಳಿಕ ರಾಜಸ್ತಾನ್‌ಗೆ ವಾಪಸಾಗಿದ್ದ ಅಜಯ್ ಆ್ಯಪಲ್ ಕಂಪನಿಯನ್ನು ಸಂಪರ್ಕಿಸಿ ತಮ್ಮ ಐಫೋನ್ ಕಳವಾಗಿದ್ದ ಬಗ್ಗೆ ದೂರು ನೀಡಿ ದಾಖಲೆ ಪರಿಶೀಲಿಸಿದಾಗ ತಮಿಳುನಾಡಿನ ತಿರುಪತ್ತೂರು ಸಿಗ್ನಲ್ ಬಳಿ ಕಾರ್ಯನಿರ್ವಹಿಸುತ್ತಿದ್ದ ಮಾಹಿತಿ ಆಧಾರಿಸಿ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಮೊದಲಿಗೆ ಶಿವಪ್ರಸಾದ್‌ನನ್ನು ಬಂಧಿಸಿದ್ದಾರೆ. ಆತ ನೀಡಿದ ಮಾಹಿತಿ ಮೇರೆಗೆ ಉಳಿದವರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಒಂದೇ ರಾತ್ರಿ ಮೂರು ಕಡೆ ದರೋಡೆ: ಗುಲನ್ ಇಂದಿರಾನಗರ ಆರ್‌ಟಿಒ ಕಚೇರಿಯಲ್ಲಿ ಗುಮಾಸ್ತ. ಇಬ್ಬರು ವಿದ್ಯಾರ್ಥಿಗಳಾಗಿದ್ದರೆ, ಇತರರು ಬೇರೆ ಬೇರೆ ವೃತ್ತಿಲ್ಲಿದ್ದಾರೆ. ಎಲ್ಲರೂ ಪರಿಚಿತರಾಗಿದ್ದು, ಮಾ.14ರ ರಾತ್ರಿ ಅತ್ತಿಬೆಲೆಯಲ್ಲಿ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದಾಗ ಗುಲನ್ ಮತ್ತು ಶಿವಪ್ರಸಾದ್ ಇತರೆ ಸ್ನೇಹಿತರಿಗೆ ದರೋಡೆಗೆ ಪ್ರೇರಣೆ ನೀಡಿದ್ದರು. ಅದರಂತೆ ಒಂದೇ ರಾತಿ ಇಂದಿರಾನಗರ, ಬೈಯಪ್ಪನಹಳ್ಳಿ ಹಾಗೂ ಜೀವನ್ ಭೀಮಾನಗರ ಠಾಣೆಗಳ ವ್ಯಾಪ್ತಿಯ ಮೂರು ಕಡೆಗಳಲ್ಲಿ ದರೋಡೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಾರಿನ ಮಾಲೀಕರಿಗೆ ಗೊತ್ತಿಲ್ಲ: ಟ್ರಾವೆಲ್ಸ್‌ವೊಂದರ ಇನೋವಾ ಕಾರನ್ನು ಪ್ರವೀಣ್ ಚಾಲನೆ ಮಾಡುತ್ತಿದ್ದು, ರಾತ್ರಿ ವೇಳೆ ಕಾರನ್ನು ಮಾಲೀಕರ ಮನೆಗೆ ಬೀಡದೆ ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದ. ನಂಬಿಕಸ್ಥನಾಗಿದ್ದರಿಂದ ಅವರೂ ಈ ಬಗ್ಗೆ ಕೇಳುತ್ತಿರಲಿಲ್ಲ. ಹೀಗಾಗಿ ಸ್ನೇಹಿತ ಶಿವಪ್ರಸಾದ್ ಜತೆ ಮದ್ಯ ಸೇವಿಸಿ ರಾತ್ರಿಯೆಲ್ಲ ನಗರ ಸುತ್ತಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.