Advertisement

Sandalwood; ಆರು ಸಿನಿಮಾಗಳ ಸುತ್ತ ನೂರು ಕನಸು: ಇಂದು ತೆರೆಗೆ

11:00 AM Feb 09, 2024 | Team Udayavani |

ಇಂದು (ಫೆ.09) ಆರು ಕನ್ನಡ ಚಿತ್ರಗಳು ತೆರೆಗೆ ಬರುತ್ತಿದೆ. ವಿಭಿನ್ನ ಶೈಲಿಯ ಆರು ಚಿತ್ರಗಳು ಇಂದು ಪ್ರೆಕ್ಷಕರ ಮುಂದೆ ಬರುತ್ತಿದೆ.

Advertisement

ವಿನಯ್‌ ಪ್ರೇಮಪುರಾಣ!

ವಿನಯ್‌ ರಾಜ್‌ಕುಮಾರ್‌ ನಾಯಕರಾಗಿ ನಟಿಸಿರುವ “ಒಂದು ಸರಳ ಪ್ರೇಮಕಥೆ’ ಚಿತ್ರ ಇಂದು ತೆರೆಕಾಣುತ್ತಿದೆ. ಸಿಂಪಲ್‌ ಸುನಿ ಈ ಸಿನಿಮಾದ ನಿರ್ದೇಶಕರು. ಸ್ವಾತಿಷ್ಠ ಕೃಷ್ಣನ್‌ ಹಾಗೂ ಹಿಂದಿಯ “ರಾಧಾಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮೈಸೂರು ರಮೇಶ್‌ ಈ ಸಿನಿಮಾದ ನಿರ್ಮಾಪಕರು.

ಮಿಡ್ಲ್ ಕ್ಲಾಸ್‌ ಹುಡುಗನೊಬ್ಬ ತನ್ನ ಕಲ್ಪನೆಯ ಹುಡುಗಿಯನ್ನು ಅರಸುತ್ತ ಊರೂರು ಅಲೆಯುವ ವಿರಳ ಕಥೆಯಿದು. ಹೀಗಾಗಿ ಕರ್ನಾಟಕ, ಬಾಂಬೆ, ರಾಜಸ್ಥಾನ… ಹೀಗೆ ಅನೇಕ ಕಡೆ ಶೂಟಿಂಗ್‌ ಮಾಡಲಾಗಿದೆ. ಆದರೆ ಅದನ್ನು ತುಂಬಾ ಕಾಂಪ್ಲಿಕೇಟ್‌ ಮಾಡದೇ ಸರಳವಾಗಿ ಹೇಳಿದ್ದೇನೆ. ನನ್ನ ಹಿಂದಿನ

ಸಿನಿಮಾಗಳಿಗಿಂತ ಇದು ಕೊಂಚ ಭಿನ್ನ ರೀತಿಯಲ್ಲಿರುತ್ತದೆ. “ಸಿಂಪಲ್ಲಾಗ್‌ ಒಂದ್‌ ಲವ್‌ಸ್ಟೋರಿ’ ಹಾಗೂ “ಚಮಕ್‌’ ಮಧ್ಯೆ ನಿಲ್ಲುವಂಥ ಸಿನಿಮಾ-ಒಂದು ಸರಳ ಪ್ರೇಮಕಥೆ. “ಸಾಮಾನ್ಯವಾಗಿ ನನ್ನ ಸಿನಿಮಾಗಳಲ್ಲಿ ಹ್ಯೂಮರ್‌ ಜಾಸ್ತಿ ಇರುತ್ತದೆ. ಆದರೆ ಈ ಚಿತ್ರದಲ್ಲಿ ಹ್ಯೂಮರ್‌ ಕಡಿಮೆ ಮಾಡಿ ಫೀಲ್‌ ಜಾಸ್ತಿ ಮಾಡಿದ್ದೀನಿ’ ಎನ್ನುವುದು ಸುನಿ ಮಾತು. ರಾಘವೇಂದ್ರ ರಾಜಕುಮಾರ್‌, ಸಾಧುಕೋಕಿಲ, ರಾಜೇಶ್‌ ನಟರಂಗ, ಅರುಣಾ ಬಾಲರಾಜ್‌ ತಾರಾಗಣದಲ್ಲಿದ್ದಾರೆ.

Advertisement

ಪೃಥ್ವಿ ಅಡುಗೆ ಶುರು

ಪೃಥ್ವಿ ಅಂಬಾರ್‌ ಮತ್ತು ರಿಷಿಕಾ ನಾಯ್ಕ ಜೋಡಿಯಾಗಿ ಅಭಿನಯಿಸಿರುವ, ವೈಭವ್‌ ಮಹಾದೇವ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಜೂನಿ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈಗಾಗಲೇ ತನ್ನ ಫ‌ಸ್ಟ್‌ಲುಕ್‌, ಟ್ರೇಲರ್‌ ಮತ್ತು ಹಾಡುಗಳ ಮೂಲಕ ಸಿನಿಪ್ರಿಯರ ಗಮನ ಸೆಳೆ ಯುವಲ್ಲಿ ಯಶಸ್ವಿಯಾಗಿರುವ “ಜೂನಿ’ ಥಿಯೇಟರ್‌ನಲ್ಲೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ಭರವಸೆಯಲ್ಲಿದೆ ಚಿತ್ರತಂಡ.

“ಬಹು ವ್ಯಕ್ತಿತ್ವ (ಸ್ಪ್ಲಿಟ್‌ ಪರ್ಸನಾಲಿಟಿ) ಹೊಂದಿರುವ ಹುಡುಗಿಯೊಬ್ಬಳ ಜೀವನದಲ್ಲಿ ನಡೆಯುವ ಒಂದಷ್ಟು ಘಟನೆಗಳ ಸುತ್ತ ಇಡೀ ಸಿನಿಮಾದ ಕಥಾ ಹಂದರ ಸಾಗುತ್ತದೆ. ಒಂದಷ್ಟು ನೈಜ ಘಟನೆಗಳನ್ನು ಪ್ರೇರಣೆ ಯಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಲವ್‌, ಥ್ರಿಲ್ಲರ್‌, ಎಮೋಶನ್ಸ್‌, ಮೆಸೇಜ್‌ ಎಲ್ಲವೂ “ಜೂನಿ’ಯಲ್ಲಿದೆ. ಎಲ್ಲ ವರ್ಗದ ಆಡಿಯನ್ಸ್‌ಗೂ ಇಷ್ಟವಾಗುವಂತ ಸಿನಿಮಾ ಮಾಡಿದ್ದೇವೆ’ ಎಂಬುದು “ಜೂನಿ’ ಚಿತ್ರತಂಡದ ಒಕ್ಕೊರಲ ವಿಶ್ವಾಸದ ಮಾತು.

“ತ್ರಿಶೂಲ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ಮೋಹನ್‌ ಕುಮಾರ್‌ ಮತ್ತು ಶ್ರೇಯಸ್‌ ವೈ. ಎಸ್‌ ನಿರ್ಮಿಸಿರುವ “ಜೂನಿ’ ಸಿನಿಮಾದಲ್ಲಿ ಪೃಥ್ವಿ ಅಂಬಾರ್‌, ರಿಷಿಕಾ ನಾಯ್ಕ ಜೊತೆಗೆ ಅವಿನಾಶ್‌, ವಿನಯಾ ಪ್ರಸಾದ್‌ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು ಸುತ್ತಮುತ್ತ “ಜೂನಿ’ ಚಿತ್ರೀಕರಣ ಮಾಡಲಾಗಿದ್ದು, ಅಜಿನ್‌ ಬಿ, ಜಿತಿನ್‌ ದಾಸ್‌ ಛಾಯಾಗ್ರಹಣ, ಶಶಾಂಕ್‌ ನಾರಾಯಣ ಸಂಕಲನವಿದೆ. ಸಿನಿಮಾದ ಹಾಡುಗಳಿಗೆ ನಕುಲ್‌ ಅಭ್ಯಂಕರ್‌ ಸಂಗೀತ ಸಂಯೋಜಿಸಿದ್ದಾರೆ. “ಜೂನಿ’ ರಾಜ್ಯಾದ್ಯಂತ ಸುಮಾರು 70ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ.

ನಗುವಿನ ಹೂಗಳ ಮೇಲೆ..

ವೆಂಕಟ್‌ ಭಾರದ್ವಾಜ್‌ ನಿರ್ದೇಶನದ “ನಗುವಿನ ಹೂಗಳ ಮೇಲೆ’ ಚಿತ್ರ ಇಂದು ತೆರೆಕಾಣುತ್ತಿದೆ. ಅಭಿದಾಸ್‌, ಶರಣ್ಯ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ರೊಮ್ಯಾಂಟಿಕ್‌ ಹಾಗೂ ಆ್ಯಕ್ಷನ್‌ ಕಥಾಹಂದರ ಒಳಗೊಂಡ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ವೆಂಕಟ್‌ ಭಾರದ್ವಾಜ್‌ ನಿರ್ದೇಶನ ಮಾಡಿದ್ದಾರೆ. ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಅಭಿದಾಸ್‌, ಶರಣ್ಯ ಶೆಟ್ಟಿ ಚಿತ್ರದಲ್ಲಿ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಬಾಲ ರಾಜವಾಡಿ, ಗಿರೀಶ್‌, ಆಶಾ ಸುಜಯ್, ನಂಜಪ್ಪ, ಅಭಿಷೇಕ್‌ ಅಯ್ಯಂಗಾರ್‌, ಹರ್ಷಿತಾ ಗೌಡ, ಹರೀಶ್‌ ಚೌಹಾನ್‌, ಹರ್ಷ ಗೋ ಭಟ್‌ ಒಳಗೊಂಡ ದೊಡ್ಡ ಕಲಾವಿದರ ಬಳಗ ಚಿತ್ರದಲ್ಲಿದೆ. ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಟಾಲಿವುಡ್‌ನ‌ಲ್ಲಿ ಬೆಂಗಾಲ್‌ ಟೈಗರ್‌, ಪಂಥಂ, ಬಾಸ್‌ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್‌ ಮೊದಲ ಬಾರಿಗೆ “ಶ್ರೀ ಸತ್ಯಸಾಯಿ ಆಟ್ಸ್ ಬ್ಯಾನರ್‌ನಡಿ ಕನ್ನಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಭಿಷೇಕ್‌ ಅಯ್ಯಂಗಾರ್‌ ಸಂಭಾಷಣೆ, ಪ್ರಮೋದ್‌ ಭಾರತಿಯ ಛಾಯಾಗ್ರಹಣ, ಚಂದನ್‌ ಪಿ ಸಂಕಲನ, ಲವ್‌ ಪ್ರಾನ್‌ ಮೆಹತಾ ಸಂಗೀತ ನಿರ್ದೇಶನ, ಟೈಗರ್‌ ಶಿವು ಸಾಹಸ ಚಿತ್ರಕ್ಕಿದೆ.

ರೊಮ್ಯಾಂಟಿಕ್‌ ಪ್ರಣಯಂ

“ಬಿಚ್ಚುಗತ್ತಿ’ ಖ್ಯಾತಿಯ ನಟ ರಾಜವರ್ಧನ್‌ ಹಾಗೂ ನೈನಾ ಗಂಗೂಲಿ ಜೋಡಿಯಾಗಿ ಅಭಿನಯಿಸಿರುವ ಇಂ ಟೆನ್ಸ್‌ ಲವ್‌ ಸ್ಟೋರಿ “ಪ್ರಣಯಂ’ ಸಿನಿಮಾ ಇಂದು ತೆರೆಕಾಣುತ್ತಿದೆ.  “ಮನಸ್ವಿ ವೆಂಚರ್’ ಹಾಗೂ “ಪಿಟು ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಪರಮೇಶ್‌ ಕಥೆ ಬರೆದು ನಿರ್ಮಿಸಿರುವ “ಪ್ರಣಯಂ’ ಸಿನಿಮಾಕ್ಕೆ ಎಸ್‌. ದತ್ತಾತ್ರೇಯ ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ನಾಯಕ ನಟ ರಾಜವರ್ಧನ್‌, “ಒಂದು ಸ್ಟ್ರಾಂಗ್‌ ಕಂಟೆಂಟ್‌ ಇಟ್ಟುಕೊಂಡು ನಾವು ಈ ಸಿನಿಮಾ ಮಾಡಿದ್ದೇವೆ. ಆಗಿನ್ನೂ ವಿದೇಶದಿಂದ ಬರುವ ಗೌತಮ್‌ ಎಂಬ ಹುಡುಗನ ಪಾತ್ರ ಮಾಡಿದ್ದೇನೆ. ವಿದೇಶದಿಂದ ಬಂದ ಗೌತಮ್‌ ತನ್ನ ಸ್ವಂತ ರಿಲೇಶನ್‌ ನಲ್ಲೇ ಹುಡುಗಿಯೊಬ್ಬಳನ್ನು ಮದುವೆಯಾಗುತ್ತಾನೆ. ಮದುವೆಯಾದ 15-20 ದಿನಗಳಲ್ಲಿ ಆ ಜೋಡಿಯ ನಡುವೆ ನಡೆಯುವಂಥ ಕಥೆ ಈ ಸಿನಿಮಾದಲ್ಲಿದೆ’ ಎಂದು ಕಥೆ ಮತ್ತು ಪಾತ್ರ ಪರಿಚಯ ಮಾಡಿಕೊಟ್ಟರು. “ಪ್ರಣಯಂ’ ಸಿನಿಮಾದಲ್ಲಿ ನಟ ರಾಜವರ್ಧನ್‌ ಹಾಗೂ ನೈನಾ ಗಂಗೂಲಿ ಅವರೊಂದಿಗೆ ಗೋವಿಂದೇ ಗೌಡ, ಮಂಥನ, ಪ್ರಶಾಂತ್‌, ಸಮೀಕ್ಷಾ, ಪ್ರಿಯಾ ತರುಣ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ ಹಾಡುಗಳಿಗೆ ಕುನಾಲ್‌ ಗಾಂಜಾವಾಲ, ಶ್ರೇಯಾ ಘೋಷಾಲ್‌ ಮುಂತಾದವರು ದನಿಯಾಗಿದ್ದಾರೆ. ಸಿನಿಮಾಕ್ಕೆ ವಿ. ನಾಗೇಶ್‌ ಆಚಾರ್ಯ ಛಾಯಾಗ್ರಹಣ, ಮದನ್‌ ಹರಿಣಿ ನೃತ್ಯ ಸಂಯೋಜನೆ, ಮತ್ತು ಥ್ರಿಲ್ಲರ್‌ ಮಂಜು, ಮಾಸ್‌ ಮಾದ ಸಾಹಸ ಸಂಯೋಜಿಸಿದ್ದಾರೆ.

ಜಸ್ಟ್‌ ಪಾಸ್‌ ಆದವರಿಗಾಗಿ…

ಈ ಹಿಂದೆ “ತರ್ಲೆ ವಿಲೇಜ್‌’, “ಪರಸಂಗ’, “ದೊಡ್ಡಹಟ್ಟಿ ಬೋರೇಗೌಡ’ ಮೊದಲಾದ ಸಿನಿಮಾಗಳಿಗೆ ಆ್ಯಕ್ಷನ್‌-ಕಟ್‌ ಹೇಳಿದ್ದ ನಿರ್ದೇಶಕ ಕೆ. ಎಂ ರಘು ನಿರ್ದೇಶನದ “ಜಸ್ಟ್‌ಪಾಸ್‌’ ಚಿತ್ರ ಇಂದು ತೆರೆಕಾಣುತ್ತಿದೆ. “ಇರುವುದೆಲ್ಲವ ಬಿಟ್ಟು’, “ಗಜಾನನ ಗ್ಯಾಂಗ್‌’ ಖ್ಯಾತಿಯ ನಟ ಶ್ರೀ ಮಹಾದೇವ್‌ ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್‌, ನವೀನ್‌ ಡಿ. ಪಡೀಲ್, ಪ್ರಕಾಶ್‌ ತುಮ್ಮಿನಾಡ್‌, ದೀಪಕ್‌ ರೈ ಮೊದಲಾದವರು “ಜಸ್ಟ್‌ ಪಾಸ್‌’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

“ರಾಯ್ಸ ಎಂಟರ್‌ಟೈನ್ಮೆಂಟ್‌’ ಬ್ಯಾನರ್‌ನಡಿ ಶಶಿಧರ್‌ .ಕೆ. ವಿ, ಶ್ರೀಧರ್‌ ಕೆ. ವಿ “ಜಸ್ಟ್‌ ಪಾಸ್‌’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣ, ಕೆ. ಎಂ. ಪ್ರಕಾಶ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಹರ್ಷವರ್ಧನ್‌ ರಾಜ್‌ ಸಂಗೀತ ಸಂಯೋಜನೆಯಿದೆ.

ಸೋಶಿಯಲ್‌ ಮಾಯೆ

ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯ ಒಳಿತು, ಕೆಡುಕುಗಳು ಅಲ್ಲದೇ ಸೈಬರ್‌ ಅಪರಾಧಗಳ ಕುರಿತಾದ ಕಥಾಹಂದರ ಇಟ್ಟುಕೊಂಡು “ಮಾಯೆ ಅಂಡ್‌ ಕಂಪನಿ’ ಎಂಬ ಚಿತ್ರ ಫೆ.09ರಂದು ತೆರೆಕಾಣುತ್ತಿದೆ. ರವೀಂದ್ರರಾವ್‌ ಈ ಸಿನಿಮಾದ ನಿರ್ಮಾಪಕರು.

ಸಾಮಾಜಿಕ ಜಾಲತಾಣಗಳ ಒಳಿತು, ಕೆಡುಕುಗಳನ್ನು ವಿಶ್ಲೇಷಣೆ ಮಾಡಿ, ಉತ್ತಮ ಸಂದೇಶ ನೀಡಿದ್ದೇನೆ. ಎಷ್ಟೇ ಚಿತ್ರಗಳಿದ್ದರೂ ನಮ್ಮ ಸಿನಿಮಾ ಜನರನ್ನು ಗೆದ್ದೇ ಗೆಲ್ಲುತ್ತೆ ಅನ್ನುವ ನಂಬಿಕೆಯಿಂದ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಸೈಬರ್‌, ಸೋಷಿಯಲ್‌ ಮೀಡಿಯಾವನ್ನು ಎಷ್ಟು ಜಾಗ್ರತೆಯಾಗಿ ಬಳಸಬೇಕು ಎಂಬ ಅಂಶವನ್ನು ಚಿತ್ರದಲ್ಲಿ ತೋರಿಸಿದ್ದೇವೆ ಎನ್ನುವುದು ನಿರ್ಮಾಪಕ ರವೀಂದ್ರ ರಾವ್‌ ಅವರ ಮಾತು. ಸಂದೀಪ್‌ ಕುಮಾರ್‌ ಈ ಚಿತ್ರದ ನಿರ್ದೇಶಕರು. ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನಮ್ಮ ಚಿತ್ರ ನೀಡಲಿದೆ ಎಂಬ ವಿಶ್ವಾಸ ಅವರದು.

ತಾರಾಗಣದಲ್ಲಿ ಅನುಷಾ, ಅರ್ಜುನ್‌ ಕಿಶೋರ್‌ ಚಂದ್ರ, ಯಶ ಶ್ರೀ, ಆನಂದ್‌ ಮುಂತಾದವರು ನಟಿಸಿದ್ದಾರೆ. ಚಿತ್ರದ ಹಾಡೊಂದಕ್ಕೆ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಸಾಹಿತ್ಯ ರಚಿಸಿದ್ದಾರೆ. ಇಂಚರ ಪ್ರವೀಣ್‌ ಅವರ ಸಂಗೀತ, ಸಿದ್ದಾರ್ಥ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next