ಬೆಂಗಳೂರು: ಬಿಜೆಪಿ ಎರಡನೇ ಪಟ್ಟಿಯಲ್ಲಿ ಬೆಂಗಳೂರಿನ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು ಇನ್ನೂ ಆರು ಕ್ಷೇತ್ರ ಬಾಕಿ ಉಳಿಸಿಕೊಂಡಿದೆ. ಕೆಆರ್‌ಪುರ- ನಂದೀಶ್‌ರೆಡ್ಡಿ, ಶಿವಾಜಿನಗರ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬ್ಯಾಟರಾಯನಪುರ- ಎ.ರವಿ, ಮಹಾಲಕ್ಷ್ಮಿ ಲೇಔಟ್- ನೆ.ಲ.ನರೇಂದ್ರಬಾಬು, ಶಾಂತಿನಗರ- ವಾಸುದೇವಮೂರ್ತಿ, ವಿಜಯನಗರ- ಎಚ್.ರವೀಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ.
ಯಶವಂತಪುರ, ಪುಲಕೇಶಿನಗರ, ಗಾಂಧಿನಗರ, ಸರ್ವಜ್ಞನಗರ,ಚಾಮರಾಜಪೇಟೆ ಹಾಗೂ ಬಿಟಿಎಂ ಲೇ ಔಟ್ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಿಲ್ಲ. ಒಟ್ಟಾರೆ, ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ಇನ್ನೂ ಐದು ಕ್ಷೇತ್ರ ಉಳಿಸಿಕೊಂಡಿದೆ.
ಶಿವಾಜಿನಗರದಲ್ಲಿ ನಿರ್ಮಲ್‌ಕುಮಾರ್ ಸುರಾನಾ, ಮಹಾಲಕ್ಷ್ಮಿ ಲೇಔಟ್‌ನಲ್ಲಿ ಹರೀಶ್ ಹಾಗೂ ಎಂ.ನಾಗರಾಜ್, ಶಾಂತಿನಗರದಲ್ಲಿ ಶ್ರೀಧರ್‌ರೆಡ್ಡಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿದ್ದು, ಆ ಪೈಕಿ ಶ್ರೀಧರ್‌ರೆಡ್ಡಿ ಜೆಡಿಎಸ್‌ನತ್ತ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈಗಾಗಲೇ ಚಿಕ್ಕಪೇಟೆ ಟಿಕೆಟ್ ಟಪ್ಪಿದ್ದಕ್ಕೆ ಹೇಮಚಂದ್ರಸಾಗರ್ ಬಿಜೆಪಿಗೆ ಗುಡ್‌ಬೈ ಹೇಳಿ ಜೆಡಿಎಸ್ ಸೇರಲು ಮುಂದಾಗಿದ್ದಾರೆ. ಅದೇ ರೀತಿ ರಾಜರಾಜೇಶ್ವರಿ ನಗರದಿಂದ ಟಿಕೆಟ್ ವಂಚಿತರಾಗಿದ್ದ ರಾಮಚಂದ್ರ ಸಹ ಜೆಡಿಎಸ್ ಜತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.
ನೆ.ಲ.ನರೇಂದ್ರಬಾಬು ಅವರಿಗೆ ಟಿಕೆಟ್ ನೀಡಿ ಕುತಂತ್ರ ಮಾಡಲಾಗಿದೆ. ಬೇರೆ ಪಕ್ಷಕ್ಕೆ ಅನುಕೂಲ ಮಾಡಿಕೊಡಲು ಈ ರೀತಿ ಮಾಡಲಾಗಿದೆ. ಎಂ.ನಾಗರಾಜ್ ಅವರಿಗೆ ಟಿಕೆಟ್ ಕೊಡುವುದಾಗಿ ಯಡಿಯುರಪ್ಪ ಹೇಳಿದ್ದರು. ಆದರೆ, ಈಗ ನರೇಂದ್ರಬಾಬುಗೆ ಟಿಕೆಟ್ ಕೊಡಲಾಗಿದೆ.
-ಹರೀಶ್, ಮಾಜಿ ಉಪ ಮೇಯರ್
ಪಕ್ಷದ ನಾಯಕರು 3000 ಕಾರ್ಯಕರ್ತರ ಎದೆಗೆ ಚೂರಿ ಹಾಕಿದ್ದಾರೆ. ನರೇಂದ್ರಬಾಬು ಅವರನ್ನು ಬಿಜೆಪಿಗೆ ಕರೆತಂದಿದ್ದು ನಾನು, ಇದೀಗ ನನಗೇ ಟಿಕೆಟ್ ತಪ್ಪಿಸಲಾಗಿದೆ. ಹರೀಶ್ ತ್ಯಾಗ ಮಾಡಿದರೂ ನರೇಂದ್ರಬಾಬು ಕುತಂತ್ರ ಮಾಡಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ.
-ಎಂ.ನಾಗರಾಜ್, ಟಿಕೆಟ್ ಆಕಾಂಕ್ಷಿ