ಸಿಂಧನೂರು: ಖಾಸಗಿಯಾಗಿ ದುಬಾರಿ ಬಡ್ಡಿ ಸಾಲ ಪಡೆಯುವ ಬದಲು ಸಹಕಾರಿ ಸಂಸ್ಥೆಗಳಲ್ಲಿ ನೆರವು ಪಡೆಯಬೇಕು. ಇದೇ ಉದ್ದೇಶದೊಂದಿಗೆ 2020-21ನೇ ಸಾಲಿಗೆ 6 ಕೋಟಿ ರೂ. ಸಾಲವನ್ನು ನೀಡಲಾಗುತ್ತಿದೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಎಂ.ದೊಡ್ಡಬಸವರಾಜ್ ಹೇಳಿದರು.
ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿಂಧನೂರಿನ ಪಿಎಲ್‌ಡಿ ಬ್ಯಾಂಕ್ ಸಾಲ ನೀಡಿ, ವಸೂಲಾತಿಯಲ್ಲಿ ಉತ್ತಮ ಸಾಧನೆ ತೋರಿ, ಜಿಲ್ಲೆಯಲ್ಲಿ ನಂಬರ್ ಒನ್ ಸ್ಥಾನ ಗಳಿಸಿದೆ. 30 ವರ್ಷದ ಆಡಿಟ್ ವರದಿಯ ಪೈಕಿ ಇದೇ ಮೊದಲ ಬಾರಿಗೆ ಎ ಕೆಟಗರಿ ಗಳಿಸಲಾಗಿದೆ. ಮೊದಲು ಸಾಲ ವಸೂಲಾತಿ ಶೇ.50ರಿಂದ ಶೇ.75 ರಷ್ಟಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ಶೇ.81ರಷ್ಟು ಸಾಲ ವಸೂಲಾತಿಯೊಂದಿಗೆ ಸಹಕಾರಿ ಬ್ಯಾಂಕ್ ಬಲವರ್ಧಿಸಲಾಗಿದೆ ಎಂದರು.
ಕಾಸ್ಕರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಕೃಷ್ಣಕುಮಾರ್ ಮಾತನಾಡಿ, ಕಳೆದ ವರ್ಷ 411 ಕೋಟಿ ರೂ. ಸಾಲ ನೀಡಲಾಗಿತ್ತು. ಈ ವರ್ಷ 545 ಕೋಟಿ ರೂ. ಸಾಲ ಒದಗಿಸಲಾಗಿದೆ. ಕಳೆದ ವರ್ಷ 80 ಕೋಟಿ ರೂ. ವಾಪಸ್ ಮಾಡಲಾಗಿತ್ತು. ಈ ವರ್ಷ ಸಂಪೂರ್ಣ ಸಾಲವನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮಾತನಾಡಿ, ಸಹಕಾರಿ ಕ್ಷೇತ್ರ ಇರುವುದು, ಪರಸ್ಪರ ಸಹಕಾರಿ ತತ್ವದ ಮೂಲಕ ಬಡವರು, ದುರ್ಬಲರಾದ ರೈತರನ್ನು ಮೇಲೆತ್ತುವುದಕ್ಕಾಗಿ ಎಂಬುದು ಎಲ್ಲರಿಗೂ ಗೊತ್ತಿದೆ. ಆ ನಿಟ್ಟಿನಲ್ಲಿ ಮುನ್ನಡೆದ ಹಿನ್ನೆಲೆಯಲ್ಲಿ ಪಿಎಲ್‌ಡಿಬಿಗೆ ಈ ಸ್ಥಾನಮಾನ ಪ್ರಾಪ್ತಿಯಾಗಿವೆ ಎಂದರು.
ಕಾಸ್ಕರ್ಡ್ ಬ್ಯಾಂಕಿನ ಉಪಾಧ್ಯಕ್ಷ ಮಹಾಂತೇಶ್ ಮಮದಾಪುರ, ನಿರ್ದೇಶಕರಾದ ರಾಯಪ್ಪಗೌಡ ದರ್ಶನಾಪುರ, ದೊಡ್ಡಪ್ಪ ದೇಸಾಯಿ, ಮಲ್ಲನಗೌಡ, ಪಿಕಾರ್ಡ್ ಉಪಾಧ್ಯಕ್ಷ ಸಿದ್ದನಗೌಡ ಮಾಟೂರು ಸೇರಿದಂತೆ ಇತರರು ಇದ್ದರು. ಈ ವೇಳೆ ಸಕಾಲಕ್ಕೆ ಸಾಲ ಮರುಪಾವತಿ ಮಾಡಿದ ರೈತರು ಮತ್ತು ಪಿಎಲ್‌ಡಿ ಬ್ಯಾಂಕಿನಲ್ಲಿ ಠೇವಣಿ ಇಟ್ಟ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು.