ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂಘ-ಸಂಸ್ಥೆಗಳಿಗೆ ಸಾರಸಗಟಾಗಿ ಅನುದಾನ ನಿಲ್ಲಿಸಲಾಗುವುದು ಎಂದು ಹೇಳಿಲ್ಲ. ಇನ್ನು ಮುಂದೆ ಅನುದಾನ ನೀಡಲು ಮಾರ್ಗದರ್ಶಿ ಸೂತ್ರ ರೂಪಿಸಲಾಗುವುದು ಎಂದಷ್ಟೇ ಹೇಳಿದ್ದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನೈಜ ಸಂಘ-ಸಂಸ್ಥೆಗಳು ನಡೆಸುವ ಕನ್ನಡ ಮತ್ತು ಸಂಸ್ಕೃತಿ ವೃದ್ಧಿ ಸಂಬಂಧ ನೈಜ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ಅಕ್ರಮ ಎಸಗುತ್ತಿರುವ ಸಂಘ-ಸಂಸ್ಥೆಗಳಿಗೆ ಕಡಿವಾಣ ಹಾಕುವುದು ಇದರ ಹಿಂದಿರುವ ಉದ್ದೇಶ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೋಂದಣಿಯಾಗದ ಲೆಟರ್ ಹೆಡ್ ಸಂಸ್ಥೆಗಳು ಕಾರ್ಯಕ್ರಮ ನಡೆಸದೆ ಬಿಲ್ ಸೃಷ್ಟಿಸುತ್ತಿರುವ ಸಂಸ್ಥೆಗಳು, ಒಂದೇ ಕಾರ್ಯಕ್ರಮಕ್ಕೆ ಹಲವೆಡೆ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಕಾರ್ಯಕ್ರಮದ ಬಗ್ಗೆ ಆಡಿಟ್ ಮತ್ತಿತರ ಲೆಕ್ಕಪತ್ರ ನೀಡದ ಸಂಸ್ಥೆಗಳು ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರು ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಅನುದಾನ ಅಕ್ರಮ ಸಂಬಂಧ ಲೋಕಾಯುಕ್ತ ಎಸಿಬಿ ಮತ್ತಿತರ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದವರೆಗಿನ ಅನುದಾನವನ್ನು ಮಂಜೂರು ಮಾಡಲಾಗಿದೆ. ಹೊಸ ನಿಯಮಗಳು ಏನಿದ್ದರೂ ಪ್ರಸಕ್ತ ಸಾಲಿನಿಂದ ಅನ್ವಯ ಆಗುತ್ತದೆ ಎಂದು ಹೇಳಿದ್ದಾರೆ.
ಯಾವುದೇ ಕಾರ್ಯಕ್ರಮ ಮಾಡುವ ಮೊದಲು ಜಿಲ್ಲಾಧಿಕಾರಿಗಳ ಅನುಮತಿ ಅನಿವಾರ್ಯ. ಅವರು ತಮ್ಮ ಅಧೀನ ಅಧಿಕಾರಿಗಳ ಮೂಲಕ ಸದರಿ ಕಾರ್ಯಕ್ರಮದ ವಿಡಿಯೋ ಚಿತ್ರಣ ನಡೆಸಿ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಪಕ್ಕಾ ಮಾಡಿದ ನಂತರ ಮುಖ್ಯಮಂತ್ರಿಗಳ ಅನುಮತಿಗೆ ಒಳಪಟ್ಟು ಆಯಾ ಜಿಲ್ಲಾಧಿಕಾರಿಗಳ ಮೂಲಕವೇ ಅನುದಾನ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.