Advertisement

ಕಚೇರಿಯಲ್ಲಿ ಕುಳಿತರೆ ಸಮಸ್ಯೆ ಬಗೆಹರಿಯಲ್ಲ; ಶಾಸಕ ಟಿ. ರಘುಮೂರ್ತಿ

04:42 PM Sep 12, 2022 | Team Udayavani |

ಚಿತ್ರದುರ್ಗ: ಅಧಿಕಾರಿಗಳು ಸಮಸ್ಯೆ ಇರುವ ಕಡೆ ತೆರಳಿ ಪರಿಹಾರ ಹುಡುಕಬೇಕು. ಕಚೇರಿಯಲ್ಲಿ ಕುಳಿತು ಪತ್ರ ವ್ಯವಹಾರ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತುರುವನೂರು ಹೋಬಳಿಯ 6 ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದು, ಏನೇನು ಸಮಸ್ಯೆ ಇದೆ ಎಂಬುದನ್ನು ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಜನರಿಗೆ ಪರಿಹಾರ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸಬೇಕು ಎಂದರು.

ಗ್ರಾಮ ಪಂಚಾಯತಿ ಪಿಡಿಒಗಳು ರಾಜಕಾರಣ ಮಾಡಬಾರದು. ಕಾನೂನು ಪ್ರಕಾರ ಸರ್ಕಾರಿ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ನಿಮ್ಮ ಹಂತ ಮೀರಿದ ಸಮಸ್ಯೆಗಳನ್ನು ತಾಲೂಕು ಪಂಚಾಯಿತಿ ಇಒ, ತಹಶೀಲ್ದಾರ್‌ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ಸಮಸ್ಯೆ ನಿಮ್ಮಲ್ಲೇ ಇದ್ದರೆ ಯಾರಿಗೂ ಪರಿಹಾರ ಸಿಗುವುದಿಲ್ಲ ಎಂದು ಕಿಡಿ ಕಾರಿದರು.

ತುರುವನೂರು ಹೋಬಳಿಯ ಮಾಡನಾಯಕನಹಳ್ಳಿ, ಸುಲ್ತಾನಿಪುರ, ಬೋಗಳರಹಟಗಟ್ಟಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಕೂಡಲೇ ಕೊಳವೆಬಾವಿ ಕೊರೆಸಬೇಕು ಎಂದು ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗೆ ಸೂಚಿಸಿದರು. ಪಿಡಿಒಗಳು ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಪಟ್ಟಿ ತಯಾರಿಸಿ. ಕೆಲವು ಕಡೆಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳಿಗೆ ಬೇಡಿಕೆ ಇದೆ. ಬೆಸ್ಕಾಂ ತುರ್ತಾಗಿ ಟ್ರಾನ್ಸ್‌ಫಾರ್ಮರ್‌ ಪೂರೈಸಬೇಕು. ಪ್ರತಿ ಹಳ್ಳಿಗೆ ಭೇಟಿ ನೀಡಿ ಮಳೆಯಿಂದ ಬಾಗಿರುವ, ಮುರಿದು ಬಿದ್ದಿರುವ ವಿದ್ಯುತ್‌ ಕಂಬಗಳನ್ನು ಸರಿಪಡಿಸಬೇಕೆಂದರು.

ಮಾಡನಾಯಕನಹಳ್ಳಿ ಗ್ರಾಪಂ ಪಿಡಿಒ, ರೈತರ ಕೊಳವೆಬಾವಿಗಳನ್ನು ತಿಂಗಳಿಗೆ 4200 ರೂ. ನೀರಿನ ಬಾಡಿಗೆಗೆ ಪಡೆಯಲಾಗಿದೆ ಎಂದು ತಿಳಿಸಿದಾಗ ಸಿಡಿಮಿಡಿಗೊಂಡ ಶಾಸಕರು, ಯಾರನ್ನು ಕೇಳಿ ಬಾಡಿಗೆಗೆ ನೀರನ್ನು ಸರಬರಾಜು ಮಾಡಿದ್ದೀರಿ, ತಾಪಂ ಇಒ ಗಮನಕ್ಕೆ ತಂದಿಲ್ಲ. ಯಾವ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಬಾಡಿಗೆ ಕೊಡಬೇಕು ಎನ್ನುವುದೂ ತಿಳಿದಿಲ್ಲವೇ, ಸರ್ಕಾರದ ಹಣವನ್ನು ಏನೆಂದು ತಿಳಿದುಕೊಂಡಿದ್ದೀರಿ, ಮಳೆಗಾಲದಲ್ಲಿ ನೀರಿನ ಸಮಸ್ಯೆ ಇದೆ ಎಂದು ಬಾಡಿಗೆ ಕೊಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು.

Advertisement

ಚಳ್ಳಕೆರೆ-ಚಿತ್ರದುರ್ಗ ರಸ್ತೆ ಸಂಪೂರ್ಣ ಹಾಳಗಿದ್ದು ಅದಷ್ಟು ಬೇಗ ಕಾಮಗಾರಿ ಮಾಡಬೇಕು. ಹುಣಸೆಕಟ್ಟೆ, ಮಾಡನಾಯಕನಹಳ್ಳಿ, ಚಿಕ್ಕಪ್ಪನಹಳ್ಳಿ ರಸ್ತೆಗಳನ್ನು ಮಾಡಬೇಕು. ತುರುವನೂರು, ಚಿಕ್ಕಗೊಂಡನಹಳ್ಳಿ, ಯಳಗೋಡು, ಮುದ್ದಾಪುರ ರಸ್ತೆ ತುರ್ತಾಗಿ ಮಾಡಬೇಕು ಎಂದು ಸೂಚಿಸಿದರು. ಮುದ್ದಾಪುರದಲ್ಲಿ ನಬಾರ್ಡ್‌ ವತಿಯಿಂದ 6 ಶಾಲಾ ಕೊಠಡಿಗಳನ್ನು ನೀಡಿದ್ದು ಕೆಲವರು ತಕರಾರು ಮಾಡಿದ್ದಾರೆ. ಕೂಡಲೇ ಸಮಸ್ಯೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಾರಂಭಿಸಲು ತಹಶೀಲ್ದಾರ್‌ಗೆ ತಿಳಿಸಿದರು.ಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ಹನುಮಂತಪ್ಪ, ತಹಶೀಲ್ದಾರ್‌ ಜಿ.ಎಚ್‌. ಸತ್ಯನಾರಾಯಣ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next