ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ಧವಾಗುತ್ತಿದ್ದ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ನ ಮೈತ್ರಿ ಬಹುತೇಕ ಮುರಿದುಬಿದ್ದಿದೆ. ಉಭಯ ಪಕ್ಷಗಳ ನಡುವೆ ಸೀಟು ಹೊಂದಾಣಿಕೆ ಬಗ್ಗೆ “ನೀ ಕೊಡೆ-ನಾ ಬಿಡೆ’ ಎಂಬಂತಾಗಿದ್ದು, ಮೈತ್ರಿ ಉಳಿಸಿ ಕೊಳ್ಳಲು ಕೊನೆಯ ಕಸರತ್ತುಗಳು ನಡೆಯುತ್ತಿವೆ.
ಶನಿವಾರ ಪತ್ರಕರ್ತರ ಜತೆ ಎಸ್ಪಿಯ ಹಿರಿಯ ಮುಖಂಡ ನರೇಶ್ ಅಗರ್ವಾಲ್ ಮಾತನಾಡಿ, ಸಿಎಂ ಅಖೀಲೇಶ್ ಯಾದವ್ ಕಾಂಗ್ರೆಸ್‌ಗೆ 100 ಸೀಟುಗಳನ್ನು ಹಂಚಿಕೊಳ್ಳಲು ಕೇಳಿಕೊಂಡಿದ್ದರು. ಆದರೆ, ಕಾಂಗ್ರೆಸ್ 120 ಸೀಟುಗಳನ್ನು ಪಟ್ಟುಹಿಡಿದು ಕೇಳುತ್ತಿದೆ. ಅದಕ್ಕಿಂತ ಒಂದು ಸೀಟೂ ಕಡಿಮೆಯಾದರೂ ಮೈತ್ರಿಗೆ ಮುಂದಾಗುವುದಿಲ್ಲ ಎಂದು ಹೇಳುತ್ತಿದೆ ಎಂದರು.
ಉತ್ತರ ಪ್ರದೇಶದಲ್ಲಿ ಈಗಾಗಲೇ ಸಮಾಜ ವಾದಿ ಪಕ್ಷದ 234 ಶಾಸಕರಿದ್ದಾರೆ. ಅವರೆಲ್ಲರಿಗೂ ಟಿಕೆಟ್ ನೀಡಲೇಬೇಕು. ನಮ್ಮ ಪಕ್ಷ 300 ಸೀಟುಗಳನ್ನು ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಕಾಂಗ್ರೆಸ್ ತನಗೆ ಈ ರಾಜ್ಯದಲ್ಲಿ ದೊಡ್ಡ ಪ್ರಭಾವ ಇರುವಂತೆ ಬಿಂಬಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಹೀಗೆ ಪಟ್ಟು ಹಿಡಿದಿರುವುದು ಅಖೀಲೇಶ್ ಯಾದವ್ ಅವರಿಗೂ ಬೇಸರ ತರಿ ಸಿದೆ. 100 ಟಿಕೆಟ್‌ಗಳಿಗೆ ಒಪ್ಪಿಕೊಳ್ಳದ ಕಾಂಗ್ರೆಸ್, ಮೈತ್ರಿಯ ಯಾವುದೇ ನಿರ್ಬಂಧಗಳನ್ನು ಒಪ್ಪಿ ಕೊಳ್ಳಲೂ ಸಿದ್ಧವಿಲ್ಲ. ಈ ಮೈತ್ರಿ ರಚನೆಗೊಳ್ಳು ವುದೇ ಬಹುತೇಕ ಅನುಮಾನ ಎಂದು ಅಗರ್ವಾಲ್ ಹೇಳಿದ್ದಾರೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಎಸ್ಪಿ ಜತೆಗಿನ ಮೈತ್ರಿಯ ಆಲೋಚನೆಗಳನ್ನು ಪಕ್ಷ ಕೈಬಿಡುತ್ತಿದೆ. ಪಕ್ಷ ಸ್ವಂತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಮೊದಲ 2 ಹಂತಗಳ ಚುನಾವಣೆಗೆ ಸ್ಪರ್ಧಾಳು ಗಳ ಪಟ್ಟಿ ತಯಾರುಗೊಳ್ಳುತ್ತಿದೆ ಎನ್ನಲಾಗಿದೆ.
ಇಷ್ಟಾಗಿಯೂ ಮೈತ್ರಿ ಉಳಿಸಲು ಹಿಂಬಾಗಿಲ ಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.