ನವದೆಹಲಿ:ಅನಾರೋಗ್ಯಕ್ಕೊಳಗಾಗಿರುವ ಪಕ್ಷದ ಶಾಸಕ ಯೂಸೂಫ್ ತಾರಿಗಾಮಿ ಅವರನ್ನು ಭೇಟಿಯಾಗುವ ನಿಟ್ಟಿನಲ್ಲಿ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿಗೆ ಜಮ್ಮು-ಕಾಶ್ಮೀರಕ್ಕೆ ತೆರಳಲು ಸುಪ್ರೀಂಕೋರ್ಟ್ ಬುಧವಾರ ಅನುಮತಿ ನೀಡಿದೆ.
ನಾವು ನಿಮಗೆ ಜಮ್ಮು-ಕಾಶ್ಮೀರಕ್ಕೆ ತೆರಳಲು ಅನುಮತಿ ನೀಡುತ್ತೇವೆ. ನೀವು ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ..ಆದರೆ ಬೇರೆ ಯಾವುದೇ ರಾಜಕೀಯ ಉದ್ದೇಶ ಹೊಂದಿರಬಾರದು ಎಂದು ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೊಗೋಯಿ ಯೆಚೂರಿಗೆ ಸೂಚನೆ ನೀಡಿದರು.
ಯೆಚೂರಿ ಅವರು ಪಕ್ಷದ ಮುಖಂಡ ಯೂಸೂಫ್ ಅವರನ್ನು ಒಬ್ಬ ಗೆಳೆಯನಾಗಿ ಮಾತ್ರ ಭೇಟಿ ಮಾಡಬೇಕೆ ವಿನಃ ಅದರಲ್ಲಿ ಯಾವುದೇ ರಾಜಕೀಯ ಇರಬಾರದು ಎಂದು ಸುಪ್ರೀಂ ಪೀಠ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದೆ.
ನನ್ನ ಗೆಳೆಯ ಯೂಸೂಫ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಎರಡು ಬಾರಿ ಭೇಟಿಯಾಗಲು ಜಮ್ಮು-ಕಾಶ್ಮೀರಕ್ಕೆ ತೆರಳಿದಾಗ ನನ್ನ ಶ್ರೀನಗರ ವಿಮಾನ ನಿಲ್ದಾಣದಲ್ಲಿಯೇ ತಡೆದು ವಾಪಸ್ ದಿಲ್ಲಿಗೆ ಕಳುಹಿಸಲಾಗಿತ್ತು ಎಂದು ಯೆಚೂರಿ ಪರ ವಕೀಲರು ಸುಪ್ರೀಂನಲ್ಲಿ ವಾದ ಮಂಡಿಸಿದ್ದರು.
ಈ ಸಂದರ್ಭದಲ್ಲಿ ಕೇಂದ್ರ ಪರ ವಕೀಲರು, ಯೆಚೂರಿ ರಾಜಕೀಯ ಕಾರಣಕ್ಕಾಗಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಒಂದು ವೇಳೆ ಅವರು ಭೇಟಿ ನೀಡಿದರೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಪ್ರತಿವಾದ ಮಂಡಿಸಿದ್ದರು.
ವಾದ, ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್, ಅವರು ಒಂದು ವೇಳೆ ನಮ್ಮ ದೇಶದ ನಾಗರಿಕರಾಗಿದ್ದರೆ, ಅವರು ಜಮ್ಮು-ಕಾಶ್ಮೀರಕ್ಕೆ ಹೋಗಲಿ. ಒಂದು ವೇಳೆ ಯೆಚೂರಿ ಬೇರೆ ಯಾವುದೇ ಉದ್ದೇಶ ಹೊಂದಿದ್ದರೆ ಅದು ಸುಪ್ರೀಂಕೋರ್ಟ್ ನ ಆದೇಶದ ಉಲ್ಲಂಘನೆಯಾಗಲಿದೆ. ಅಷ್ಟೇ ಅಲ್ಲ ಯೆಚೂರಿ ಅವರು ಜಮ್ಮು-ಕಾಶ್ಮೀರದಿಂದ ವಾಪಸ್ ಆದ ನಂತರ ಯೂಸೂಫ್ ಅವರ ಆರೋಗ್ಯದ ಬಗ್ಗೆ ಅಫಿಡವಿತ್ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.