ಮಹಾನಗರ: ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ನ್ಯಾಯವಾದಿ ಸೀತಾರಾಮ ಶೆಟ್ಟಿ ಹಾಗೂ ಖ್ಯಾತ ಸಾಹಿತಿ ದರ್ಬೆ ಡಾ|ಕೃಷ್ಣಾನಂದ ಚೌಟ ಅವರಿಗೆ ನುಡಿನಮನ ಕಾರ್ಯಕ್ರಮ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ನಗರದ ಬಂಟ್ಸ್ ಹಾಸ್ಟೆಲ್ನಲ್ಲಿರುವ ಅಮೃತೋತ್ಸವ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿ, ಸೀತಾರಾಮ ಶೆಟ್ಟಿ ಅವರು ನ್ಯಾಯವಾದಿಯಾಗಿ ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಯಾಗಿ ಸಮಾಜದ ಪ್ರೀತಿಗೆ ಪಾತ್ರರಾಗಿದ್ದರು. ಡಿ.ಕೆ. ಚೌಟರು ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರ ಜತೆಗೆ ಸಮಾಜದ ವಿವಿಧ ರಂಗಗಳಲ್ಲಿ ಮಹತ್ವದ ಸಾಧನೆ ನೀಡಿ ಕೊಡುಗೆ ನೀಡಿದವರು ಎಂದರು.
ಸೀತಾರಾಮ ಶೆಟ್ಟಿ ಅವರು ಮಹಾಬಲ ಭಂಡಾರಿಯವರ ಶಿಷ್ಯರಾಗಿ ಗುರುವಿನಂತೆ ಖ್ಯಾತ ನ್ಯಾಯವಾದಿಯಾಗಿ ವೃತ್ತಿಯಲ್ಲಿ ತನ್ನ ಕಕ್ಷಿದಾರನಿಗೆ ನ್ಯಾಯ ಒದಗಿಸಿಕೊಡುವಲ್ಲಿ ಶ್ರಮ ವಹಿಸಿದ್ದರು. ತಮ್ಮ ಸಾಧನೆಯ ಮೂಲಕ ನ್ಯಾಯಾಂಗ ಕ್ಷೇತ್ರದಲ್ಲಿ ಸರಕಾರದ ವಿವಿಧ ಆಯೋಗಗಳಲ್ಲಿ ಅಭಿ ಯೋಜಕರಾಗಿಯೂ ನಿಯೋ ಜನೆ ಗೊಂಡು ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದರು ಎಂದು ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ ಹೇಳಿದರು.
ಉಪನ್ಯಾಸಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ಕಲೆ, ಸಾಹಿತ್ಯ, ಕೃಷಿ ಸೇರಿದಂತೆ ಸಮಾಜದ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಡಿ.ಕೆ. ಚೌಟರು ಮೇರು ವ್ಯಕ್ತಿತ್ವವನ್ನು ಹೊಂದಿದ್ದರು. ಸಮಾಜದ ಎಲ್ಲ ಜಾತಿ, ಧರ್ಮದ ಜನರ ಪ್ರೀತಿಗೆ ಪಾತ್ರರಾಗಿದ್ದ ಚೌಟರು ಬಹುಮುಖ ಪ್ರತಿಭೆಯನ್ನು ಹೊಂದಿದ್ದರು ಎಂದರು.
ಡಿ.ಕೆ. ಚೌಟರ ನಿಕಟವರ್ತಿ ಸತೀಶ್ ಅಡಪ ಮಾತನಾಡಿ, ಕಾಸರಗೋಡಿನ ಮೀಯಪದವಿನಲ್ಲಿ ಒಂದು ಕಡೆ ಮಂಜಲ್ತೋಡಿಯಲ್ಲಿ ಇನ್ನೊಂದು ಕಡೆ ಕಳ್ಳಿಗೆ ನಡುವೆ ಉಪ್ಪಳ ನದಿ ಹರಿಯುವ ಪ್ರದೇಶ ಅಲ್ಲಿ ದರ್ಬೆ ಎನ್ನುವ ಪ್ರದೇಶದಲ್ಲಿ ಕೃಷ್ಣಾನಂದ ಚೌಟರು ಕೃಷಿ ಭೂಮಿಯನ್ನು ಖರೀದಿಸಿ ಕೃಷಿಯಲ್ಲಿ ಮಹತ್ವದ ಸಾಧನೆ ಮಾಡಿದ್ದಿರೆ. ಅಲ್ಲದೇ ರಂಗಭೂಮಿ, ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಕೃತಿ ರಚಿಸಿ ಕೊಡುಗೆ ನೀಡಿದ ವ್ಯಕ್ತಿ ಎಂದರು.
ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಮಂಗಳೂರು ತಾಲೂಕು ಸಮಿತಿ ಸಂಚಾಲಕ ಜಯ ರಾಮ ಸಾಂತ, ಉಪ ಸಂಚಾಲಕ ಉಮೇಶ್ ರೈ ಪದವು ಮೇಗಿನ ಮನೆ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಶೆಡ್ಡೆ ಮಂಜುನಾಥ್ ಭಂಡಾರಿ, ನ್ಯಾಯವಾದಿ ಮಹಾಬಲ ಶೆಟ್ಟಿ, ಮೋನಪ್ಪ ಶೆಟ್ಟಿ, ಡಾ| ಆಶಾಜ್ಯೋತಿ ರೈ, ಸೀತಾರಾಮ ಶೆಟ್ಟಿ ಅವರ ಪುತ್ರ ಮನೋಜ್ ಶೆಟ್ಟಿ ಉಪಸ್ಥಿತರಿದ್ದರು. ವಸಂತ ಶೆಟ್ಟಿ ನಿರೂಪಿಸಿದರು.