Advertisement

ಪ್ರೇಕ್ಷಕರಿಗೆ ಹೊಸತನದ ಅನುಭವ ನೀಡಿದ ಸೀತಾಂತರಾಳ

03:00 PM Mar 30, 2017 | |

ಧಾರ್ಮಿಕ ಮಹಾ ಕಾವ್ಯಗಳಾದ ರಾಮಾಯಣ  ಹಾಗೂ ಮಹಾಭಾರತ ಇವುಗಳನ್ನು ಮನನ ಮಾಡಿದಷ್ಟೂ  ಅಡಕವಾಗಿರುವ ಗಹನ ವಿಚಾರಗಳನ್ನು ಅರ್ಥೈಸುವಲ್ಲಿ ಸಾಧ್ಯವಾಗುತ್ತದೆ. ಆದರೆ ಇವುಗಳಲ್ಲಿ ಬರುವ ವಿಭಿನ್ನ ಪಾತ್ರಗಳ ಬಗ್ಗೆ ವೈಚಾರಿಕ ವಿಶ್ಲೇಷಣೆಗಳನ್ನು ನಡೆಸುತ್ತಾ ಹೋದಂತೆ ಪ್ರತಿಯೊಬ್ಬರೂ ಅವರವರಿಗೆ ಕಂಡಂತೆ ವಿಭಿನ್ನ ದೃಷ್ಟಿಕೋನದೊಂದಿಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ರುವುದನ್ನು  ಕಾಣಬಹುದಾಗಿದೆ. ಇದೇ ರೀತಿ ಕನ್ನಡ ಸಂಘ ಪುಣೆಯ ಕೇತ್ಕರ್‌ ರಸ್ತೆಯಲ್ಲಿರುವ ಕನ್ನಡ ಮಾಧ್ಯಮ ಹೈಸ್ಕೂಲ್‌  ಸಭಾಗೃಹದಲ್ಲಿ ಮಾ. 15 ರಂದು ಪ್ರಸ್ತುತಗೊಂಡ ಜಾಗತಿಕ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ  ಕರ್ನಾಟಕದ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಕಲಾವಿದೆ ಮಂಜುಳಾ ಬಾದಾಮಿಯವರಿಂದ ಪ್ರದರ್ಶನಗೊಂಡ ಏಕಪಾತ್ರಿ ನಾಟಕ ಸೀತಾಂತರಾಳ  ವಿಭಿನ್ನ ವಿಶ್ಲೇಷಣೆಯನ್ನು ಪ್ರಸ್ತುತಪಡಿಸಿದ್ದು ಪ್ರೇಕ್ಷಕರನ್ನು ಹೊಸತೊಂದು ಚಿಂತನೆಗೆ ಹಚ್ಚಿದೆ.

Advertisement

ರಾಮಾಯಣದಲ್ಲಿ ತುಂಬು ಬಸುರಿ ಸೀತೆಯನ್ನು ರಾಮ ವನವಾಸಕ್ಕೆ ಕಳುಹಿಸುವ ಮತ್ತು ಆಕೆ  ಕಾನನದಲ್ಲಿ ಅನುಭವಿಸುವ ಯಾತನೆಯನ್ನು ಧೈರ್ಯದಿಂದ  ಮನಮುಟ್ಟುವಂತೆ ಪ್ರತಿಬಿಂಬಿಸುವ ಈ ನಾಟಕ ಅಂದಿನ ಕಾಲದಲ್ಲೂ ಮಹಿಳಾ ಸಬಲೀಕರಣಕ್ಕಾಗಿ ಸೀತೆಯ ಆದರ್ಶವನ್ನು ಸಾರುವ ಮಾರ್ಮಿಕ ನಾಟಕವೆಂಬುದು ಲೇಖಕರ ಅಭಿಪ್ರಾಯವಾದರೂ ರಾಮನನ್ನು ಅತಿಯಾಗಿ ವೈಭವೀಕರಿಸುವ ಜನರಿಗೆ ಅಥವಾ ಶ್ರೀ ರಾಮಚಂದ್ರನನ್ನು  ಸರ್ವೋತ್ತಮ ದಾರ್ಶನಿಕ ವ್ಯಕ್ತಿತ್ವವೆಂದು ನಂಬಿರುವ ಜನರಿಗೆ ಇದು ಮನಸ್ಸಿಗೆ ಹಿತ ನೀಡಿಲ್ಲ ಎಂಬುದನ್ನು ನಾಟಕದ ನಂತರ ಕೆಲವೊಂದು ಪ್ರೇಕ್ಷಕರ ಮಾತಿನಿಂದ ಕೇಳಿಬಂತು.

ಇಲ್ಲಿ ಸೀತೆ ರಾಮನ ಬಗ್ಗೆ ಅತಿಯೆನಿಸುವ ಹಾಗೆ ದ್ವೇಷಿಸುವ ಹಂತಕ್ಕೆ ತನ್ನ ಮನೋವೇದನೆಯನ್ನು ಪರಿಪರಿಯಾಗಿ ತೆರೆದಿಟ್ಟಿರುವುದೇ  ಕಾರಣವೆನ್ನಬಹುದಾಗಿದೆ. ವಸ್ತುಸ್ಥಿತಿಯ ಅಭಿನಯಕ್ಕೆ ಬರುವುದಾದರೆ ಮಂಜುಳಾ ಬಾದಾಮಿಯವರ ಮನೋಜ್ಞ ಅಭಿನಯಕ್ಕೆ ಮಾರುಹೋಗಬೇಕಾಗಿದೆ.  ಅರ್ಥಗರ್ಭೀತವಾಗಿ ಪಾತ್ರವನ್ನು ನಿರೂಪಿಸಿದ ರೀತಿ, ಮಾತುಗಳ ಸ್ಪಷ್ಟತೆ  ಅದ್ಭುತವಾಗಿತ್ತು.

ಈ ನಾಟಕದ ಲೇಖಕ ಪ್ರಸಿದ್ಧ ಪತ್ರಕರ್ತ, ಲೇಖಕ  ಶಶಿಕಾಂತ ಯಡಹಳ್ಳಿಯವರು ಕನ್ನಡ ರಂಗಭೂಮಿಯ ಒಬ್ಬ ಕ್ರಿಯಾಶೀಲ ನಿರ್ದೇಶಕ  ವೈ. ಡಿ. ಬಾದಾಮಿಯವರ ನಿರ್ದೇಶನ ಹಾಗೂ ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾರ್ಗದರ್ಶನದಲ್ಲಿ ಪ್ರದರ್ಶನಗೊಂಡಿತು. ನಾಟಕದ ಕೊನೆಗೆ ಕನ್ನಡ ಸಂಘದ ಉಪಾಧ್ಯಕ್ಷೆ  ಇಂದಿರಾ ಸಾಲ್ಯಾನ್‌ ಸಂಘದ ವತಿಯಿಂದ ಮಂಜುಳಾ ಬಾದಾಮಿಯವರನ್ನು ಗೌರವಿಸಿದರು.

ಈ ಸಂದರ್ಭ ಸಂಘದ ಕೋಶಾಧಿಕಾರಿ ಬಾಬು  ರಾವ್‌, ಜನಸಂಪರ್ಕಾಧಿಕಾರಿ ರಾಮದಾಸ ಆಚಾರ್ಯ, ಕನ್ನಡ ಮಾಧ್ಯಮ ಹೈಸ್ಕೂಲ್‌  ಪ್ರಾಚಾರ್ಯ ಚಂದ್ರಕಾಂತ ಹರ್ಕುಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು, ಶಿಕ್ಷಕ  ವೃಂದ ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಈ ವಿಶೇಷ ಪ್ರಯೋಗವು ಕಲಾಭಿಮಾನಿಗಳಿಗೆ ಹೊಸತೊಂದು ಅನುಭವವನ್ನು ನೀಡಿರುವುದಂತು ಅಕ್ಷರಶಃ ನಿಜ.

Advertisement

ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next