ಖ್ಯಾತ ಸಿತಾರ್ ವಾದಕರಾದ ಉಸ್ತಾದ್ ಹಮೀದ್ ಖಾನ್‌ರವರು ಇತ್ತೀಚೆಗೆ ಧಾರವಾಡದಲ್ಲಿ ಕೊನೆಯುಸಿರೆಳೆದರು. ಹಮೀದ್ ಖಾನ್ ಸಾರ್, “ಹಮೀದ್ ಚಾಚಾ’ ಎಂದೇ ಧಾರವಾಡದವರಿಗೆ ಪರಿಚಯವಿದ್ದವರು. ಸ್ಟೇಷನ್ ರೋಡಿನಲ್ಲಿ ಅವರು ಇರುತ್ತಿದ್ದ ಖಾನ್ ಬಿಲ್ಡಿಂಗ್‌ಗೆ ಮುಂಜಾನೆ ಅಥವಾ ಸಂಜೆಯ ಸಮಯದಲ್ಲಿ ಹೋದರೆ ಸುತ್ತ ಮನೆಗಳಿಂದ ಬರುತ್ತಿದ್ದ ಸಿತಾರ್‌ನ ಸ್ವರಗಳೇ ನಮ್ಮನ್ನು ಸ್ವಾಗತಿಸುತ್ತವೆ. ದೇಶದ ಸುಪ್ರಸಿದ್ಧ ಇಂದೋರ್ ಬೀನ್ ಕಾರ್ ಘರಾಣೆಯ ಸಿತಾರ್ ವಾದಕರ ಎರಡು-ಮೂರು ಕುಟುಂಬಗಳು ಅಲ್ಲಿವೆ. ದಕ್ಷಿಣಭಾರತದಲ್ಲಿ ಅದರಲ್ಲೂ ಕನಾಟಕದಲ್ಲಿ ಸಿತಾರ್ ಪರಂಪರೆಯನ್ನು ಪ್ರಾರಂಭಿಸಿದ ಕೀರ್ತಿ ಖಾನ್ ಕುಟುಂಬಕ್ಕೆ ಸಲ್ಲುತ್ತದೆ. ಸಿತಾರ್ ರತ್ನ ರೆಹಮತ್ ಖಾನ್, ಉಸ್ತಾದ್ ಬಾಲೇಖಾನ್ ಪರಂಪರೆಯಲ್ಲಿ ಬಂದ ಮತ್ತೋರ್ವ ಶ್ರೇಷ್ಠ ಸಿತಾರ್ ವಾದಕರು ಹಮೀದ್ ಖಾನ್.
ಮಾತು ಬಹಳ ಕಡಿಮೆ. ಸರಳ ವ್ಯಕ್ತಿತ್ವ. ಕನಾಟಕ ವಿವಿಯ ಲಲಿತಕಲಾ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದರು. ರಾಜ್ಯದ ಹಲವು ವಿಶ್ವವಿದ್ಯಾಲಗಳ ಸಿಂಡಿಕೇಟ್ ಮೆಂಬರ್ ಆಗಿದ್ದರು. ಸ್ವಿಟ್ಜರ್‌ಲೆಂಡ್, ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳಲ್ಲಿ ಹಲವಾರು ಬಾರಿ ಸಿತಾರ್ ಕಾರ್ಯಕ್ರಮಗಳನ್ನು ನೀಡಿದ್ದರು. ಪ್ರಶಸ್ತಿ-ಪುರಸ್ಕಾರಗಳ ಗೊಡವೆಗೂ ಹೋಗದೆ ಇದ್ದಷ್ಟು ದಿನವೂ ನೂರಾರು ವಿದ್ಯಾರ್ಥಿಗಳಿಗೆ ಸಿತಾರ್ ಕಲಿಸಿದರು. ಅದಕ್ಕೇ ಅವರು ತೀರಿಕೊಂಡಾಗ ಶಬ್ದಗಳಿಗಿಂತ ಹೆಚ್ಚಾಗಿ ಸಿತಾರ್‌ನ ತಂತಿಗಳೇ ಮಿಡಿದವು.
ನಮ್ಮ ನಡುವಿನ ಶ್ರೇಷ್ಠ ಸರೋದ್ ವಾದಕರಾದ ರಾಜೀವ ತಾರಾನಾಥ್‌ರವರು ಹಮೀದ್ ಖಾನ್‌ರೊಂದಿಗಿನ ತಮ್ಮ ನೆನಪನ್ನು ಹೀಗೆ ಹಂಚಿಕೊಳ್ಳುತ್ತಾರೆ-
ನಾನು 1964-65ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿದ್ದೆ. ಅಲ್ಲಿ ಹಮೀದ್‌ಖಾನ್ ಅವರ ತಂದೆ ಅಬ್ದುಲ್ ಕರೀಂಖಾನ್ ಸಾಬ್ ಮ್ಯೂಸಿಕ್ ವಿಭಾಗದಲ್ಲಿದ್ದರು. ನನ್ನ ಮನೆಯ ಎದುರು ಭಾರತೀಯ ಸಂಗೀತ ವಿದ್ಯಾಲಯದ ಕಚೇರಿ ಇತ್ತು. ಅಲ್ಲಿಂದ ಇಬ್ಬರೂ ಒಟ್ಟಿಗೆ ಕಾಲೇಜಿಗೆ ಹೋಗುತ್ತಿದ್ದೆವು. ಅವರು ಸ್ವಲ್ಪ ಕುಳ್ಳಕ್ಕಿದ್ದರು. ನಾನು ಉದ್ದ. ಜುಲೈ ತಿಂಗಳು. ಮಳೆ. ಒಂದೇ ಛತ್ರಿಯಲ್ಲಿ ಹೋಗುತ್ತಿದ್ದೆವು. ಆಗಾಗ ಅವರ ಮನೆಗೂ ಹೋಗುತಿದ್ದೆ. ಅಲ್ಲಿ ಹಮೀದ್, ಬಾಲೇಖಾನ್, ಉಸ್ಮಾನ್‌ಖಾನ್ ಎಲ್ಲರೂ ಇರುತ್ತಿದ್ದರು. ಹಮೀದ್ ಆಗ ಚಿಕ್ಕವರು.
ಮುಂದೆ ನಾನು ಧಾರವಾಡ ಬಿಟ್ಟು ಬಂದೆ. ಆಗಾಗ ಕಾರ್ಯಕ್ರಮಗಳಿಗೆ ಹೋಗುತ್ತಿ¨ªೆ. ಒಂದು ಸಲ ಬೆಂಗಳೂರಿನಿಂದ ಧಾರವಾಡಕ್ಕೆ ಕಾರ್ಯಕ್ರಮಕ್ಕೆ ಹೋದೆ. ನನ್ನ ಸರೋದ್ ಪೆಟ್ಟಿಗೆ ತೆಗೆದು ನೋಡಿದರೆ, ತಂತಿ ಹಾಕೋ ಹುಕ್ ಕಿತ್ತು ಹೋಗಿತ್ತು. ಸಾಯಂಕಾಲವೇ ಕಾರ್ಯಕ್ರಮ. ಆಗ ಬಾಲೇಖಾನ್‌ರಿಗೆ ಫೋನ್ ಮಾಡಿದೆ. ಆಗ ಅವರು, “ನೀವೇನು ಕಾಳಜಿ ಮಾಡಬ್ಯಾಡ್ರಿ. ಹಮೀದ್ ಬರ್ತಾನೆ’ ಎಂದರು.
ಹಮೀದ್‌ಗೆ ಸರೋದ್ ಗೊತ್ತಿರಲಿಲ್ಲ. ಆದರೂ ಅದನ್ನು ಬಹಳ ಚೆನ್ನಾಗಿ ಫಿಟ್ ಮಾಡಿಬಿಟ್ಟ. ಆ ಥರದ ಮನಸ್ಸು ಅವನದು.
ನನ್ನ ಗುರುಗಳು (ಅಲೀಅಕºರ್ ಖಾನ್ ಸಾಬ್) ತೀರಿಕೊಂಡರು. ಅವರ ಹೆಸರಿನಲ್ಲಿ ಮೈಸೂರು, ಬೆಂಗಳೂರು, ಧಾರವಾಡದಲ್ಲಿ ಕಾರ್ಯಕ್ರಮ ಮಾಡಿದ್ದೆವು. ಮೈಸೂರು ಹಾಗೂ ಧಾರವಾಡದ ಕಾರ್ಯಕ್ರಮಗಳಲ್ಲಿ ಹಮೀದ್ ಖಾನ್ ಮತ್ತು ಅವರ ಮಗ ಮೊಹಸೀನ್ ಖಾನ್ ಸಿತಾರ್ ನುಡಿಸಿದ್ದರು. ಆಗ ಎರಡು-ಮೂರು ಬಾರಿ ಅವರ ಕಾರ್ಯಕ್ರಮ ಕೇಳಿದ್ದೆ. ಅದಲ್ಲದೇ ಹೀಗೆ ಪ್ರಾಕ್ಟೀಸ್ ಮಾಡುವಾಗ ಕೇಳಿದ್ದೇನೆ.
ನಾನು ಧಾರವಾಡಕ್ಕೆ ಹೋದಾಗೆಲ್ಲ ಹಮೀದ್ ಬರುತ್ತಿದ್ದ. ಕಾರ್ಯಕ್ರಮ ಮುಗಿದ ಮೇಲೆ ಒಟ್ಟಿಗೆ ಊಟ ಮಾಡುತ್ತಿದ್ದೆವು. ಬಹಳ ಮೆತ್ತನೆಯ ಮನುಷ್ಯ. ಸಜ್ಜನ. ಸ್ವಲ್ಪವೂ ಜಂಭವಿಲ್ಲ. ಅವರ ತಂದೆಯವರು ಮಕ್ಕಳನ್ನೆಲ್ಲಾ ಹಾಗೆ ಬೆಳೆಸಿದರು. ಬಹಳ ಚನ್ನಾಗಿ ಬರಮಾಡಿಕೊಂಡು ಆತಿಥ್ಯ ಮಾಡುತ್ತಿದ್ದರು.
ಬಹಳಷ್ಟು ಶಿಷ್ಯರನ್ನು ತಯಾರು ಮಾಡಿದರು. ಒಟ್ಟು ಆ ಮನೆತನ ಬಹಳಷ್ಟು ಜನರಿಗೆ ಕಲಿಸಿದೆ. ಅದರ ಮುಖಾಂತರ ಸಮಾಜಕ್ಕೆ ಬಹಳ ದೊಡ್ಡಸೇವೆ ಆಗಿದೆ.
ಚಿತ್ರಾ ವೆಂಕಟರಾಜು