ನಿಖಿಲ್ ಕುಮಾರಸ್ವಾಮಿ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರದ ಚಿತ್ರೀಕರಣ ಆರಂಭವಾಗಿ ಸುಮಾರು ಒಂದು ವರ್ಷ ದಾಟುತ್ತಾ ಬಂದಿದೆ. ಸತತವಾಗಿ ಚಿತ್ರೀಕರಣ ನಡೆಯುತ್ತಿರುವುದನ್ನು ಕಂಡ ಅನೇಕರು “ಯಾವಾಗ ಸಿನಿಮಾ ಮುಗಿಯುತ್ತದೆ’ ಎಂದು ಕೇಳುತ್ತಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡದ ಮೊಗದಲ್ಲಿ ಸಂಭ್ರಮ ಮನೆ ಮಾಡಿದೆ.
“ಸೀತಾರಾಮ ಕಲ್ಯಾಣ’ ಚಿತ್ರತಂಡ ಆರಂಭದಿಂದಲೂ ದೊಡ್ಡ ತಾರಾಬಳಗದ ಚಿತ್ರ ಎಂಬುದು ಬಿಂಬಿತವಾಗುತ್ತಲೇ ಬಂದಿದೆ. ಅದು ನಿಜ ಕೂಡಾ. ಬರೋಬ್ಬರಿ 130 ಜನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 130 ಜನರನ್ನಿಟ್ಟುಕೊಂಡು ಎಷ್ಟು ದಿನ ಚಿತ್ರೀಕರಣ ಮಾಡಿರಬಹುದು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಚಿತ್ರತಂಡ 130 ದಿನಗಳ ಕಾಲ ಚಿತ್ರೀಕರಣ ನಡೆಸಿದೆ.
ಈ ಸಿನಿಮಾ ಆರಂಭವಾದ ದಿನದಿಂದಲೂ ಒಂದು ಮಾತು ಕೇಳಿಬರುತ್ತಲೇ ಇತ್ತು. ಅದು ರೀಮೇಕ್ ಸಿನಿಮಾ ಎಂಬುದು. “ಇದು ರೀಮೇಕ್ ಅಲ್ಲ, ಸ್ವಮೇಕ್ ಸಿನಿಮಾ’ ಎಂದು ಆರಂಭದಿಂದಲೂ ಹೇಳುತ್ತಲೇ ಬಂದಿದ್ದ ಚಿತ್ರತಂಡ ಈಗ ಮತ್ತೂಮ್ಮೆ ಅದನ್ನು ಪುನರುತ್ಛರಿಸಿದೆ. “ಇತ್ತೀಚೆಗೆ ನಮ್ಮ ತಂಡದ ಅನೇಕರು ಸಿನಿಮಾ ನೋಡಿದ್ದಾರೆ. ಸಿನಿಮಾ ನೋಡಿದವರು ಖುಷಿಯಾಗುವ ಜೊತೆಗೆ ಇದು ಪಕ್ಕಾ ಸ್ವಮೇಕ್ ಸಿನಿಮಾ ಎಂದಿದ್ದಾರೆ.
ಮತ್ತೂಮ್ಮೆ ಹೇಳುತ್ತಿದ್ದೇನೆ, ಇದು ಪಕ್ಕಾ ಸ್ವಮೇಕ್ ಸಿನಿಮಾ. ಒಂದು ಫ್ಯಾಮಿಲಿ ಕುಳಿತು ನೋಡಬಹುದಾದ ಸಿನಿಮಾ’ ಎಂಬುದು ನಿರ್ದೇಶಕ ಹರ್ಷ ಅವರ ಮಾತು. ಈಗಾಗಲೇ “ನಿನ್ನ ರಾಜ ನಾನು ನನ್ನ ರಾಣಿ ನೀನು’ ಎಂಬ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಅದು ಕೂಡಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ.
ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಹಾಗೂ ಕನ್ನಡ ಸ್ಯಾಟ್‌ಲೈಟ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು, ಹಾಕಿದ ಬಂಡವಾಳದಲ್ಲಿ ಬಹುತೇಕ ವಾಪಾಸ್ ಆದ ಖುಷಿಯಲ್ಲಿದೆ ಚಿತ್ರತಂಡ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ, ರಚಿತಾ ರಾಮ್, ರವಿಶಂಕರ್, ಶರತ್ ಕುಮಾರ್, ಮಧುಬಾಲ, ಭಾಗ್ಯಶ್ರೀ ಸೇರಿದಂತೆ ಅನೇಕರು ನಟಿಸಿದ್ದಾರೆ. ಚನ್ನಾಂಬಿಕಾ ಫಿಲಂಸ್‌ನಡಿ ಈ ಚಿತ್ರ ನಿರ್ಮಾಣವಾಗಿದೆ.