Advertisement

ಆಂಧ್ರ ನಕ್ಸಲ್‌ ನಿಗ್ರಹ ತಜ್ಞರ ಮೊರೆ ಹೋದ ಎಸ್‌ಐಟಿ

07:10 AM Sep 10, 2017 | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ
ಆಂಧ್ರಪ್ರದೇಶದಿಂದ ಬಂದಿರುವ ಎಎನ್‌ಎಸ್‌ (ನಕ್ಸಲ್‌ ನಿಗ್ರಹ ಪಡೆ) ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದೆ.

Advertisement

ಗೌರಿ ಹತ್ಯೆ ಪ್ರಕರಣದಲ್ಲಿ ಕೆಲ ನಕ್ಸಲರ ಕೈವಾಡವಿದೆ ಎಂಬ ಬಲವಾದ ಶಂಕೆ ಮೇಲೆ ಆಂಧ್ರಪ್ರದೇಶ ಎಎನ್‌ಎಸ್‌ ಅಧಿಕಾರಿಗಳನ್ನು ನಗರಕ್ಕೆ ಕರೆಸಿಕೊಂಡಿರುವ ತನಿಖಾ ತಂಡ, ಸದ್ಯ ರಾಜ್ಯದ ನಾಲ್ಕೈದು ಜಿಲ್ಲೆಗಳಲ್ಲಿ ಅಡಗಿರುವ ನಕ್ಸಲೀಯರ ಪಟ್ಟಿಯನ್ನು ನೀಡಿದೆ. ಇದರೊಂದಿಗೆ ಹೈದರಾಬಾದ್‌ನಿಂದ ಬಂದಿರುವ ನಾಲ್ಕೈದು ಮಂದಿ ನಕ್ಸಲ್‌ ತಜ್ಞರು ಪಶ್ಚಿಮ ಘಟ್ಟ ಪ್ರದೇಶದ ಪೊಲೀಸ್‌ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಮಧ್ಯೆ ಪ್ರಕರಣದ ವಿಶೇಷ ತನಿಖಾ ತಂಡ ಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಗೆ ತೆರಳಿದ್ದು, ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಆಂಧ್ರ ನಕ್ಸಲರ ಮೇಲೆ ಶಂಕೆ: ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಉಡುಪಿ, ಶೃಂಗೇರಿ ಮತ್ತು ಚಿಕ್ಕಮಗಳೂರಿನ ಅರಣ್ಯ ಪ್ರದೇಶಗಳಲ್ಲಿ ಅಡಗಿದ್ದ 12 ಮಂದಿ ನಕ್ಸಲ್‌ಗ‌ಳ ಪೈಕಿ ಇಂದು ಕೇವಲ 7 ಮಂದಿ ಮಾತ್ರ ಇದ್ದಾರೆ. ಹೀಗಾಗಿ ಇಲ್ಲಿರುವ ನಕ್ಸಲ್‌ಗಳಿಗೆ ನಗರಕ್ಕೆ ಬಂದು ಹತ್ಯೆ ಮಾಡುವಷ್ಟು ಆರ್ಥಿಕ ಶಕ್ತಿಯಾಗಲಿ, ಶಸ್ತ್ರಾಸ್ತ್ರವಾಗಲಿ ಇಲ್ಲ. ಆದರೆ, ಈ 7 ಮಂದಿ ಆಂಧ್ರಪ್ರದೇಶದ ನಕ್ಸಲರ ಜತೆ ನಿರಂತರ ಸಂಪರ್ಕದಲ್ಲಿದ್ದರು. ಈ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುತ್ತಿದ್ದ ಗೌರಿ ಅವರ ನಡೆ ಬಗ್ಗೆ ಅಸಮಾಧಾನವಿದ್ದ ನಕ್ಸಲರ ಒಂದು ಗುಂಪು ಆಂಧ್ರ ಪ್ರದೇಶದಲ್ಲಿರುವ ನಕ್ಸಲ್‌ ಗಳ ಜತೆ ಮಾತುಕತೆ ನಡೆಸಿ, ಕೃತ್ಯವೆಸಗಿದ್ದರೆ ಎಂಬ ಅನುಮಾನ ಬಲವಾಗಿದೆ. ಹೀಗಾಗಿ ನಕ್ಸಲ್‌ ಆಯಾಮದಲ್ಲಿ ಹೆಚ್ಚು ಆಸಕ್ತಿ ವಹಿಸಿರುವ ತನಿಖಾ ತಂಡ ಆಂಧ್ರಪ್ರದೇಶದ ಅಧಿಕಾರಿಗಳನ್ನು ಇನ್ನೂ ಕೆಲ ದಿನಗಳ ಕಾಲ ಇಲ್ಲಿಯೇ ಇರುವಂತೆ ಮನವಿ ಮಾಡಿದೆ. ಇನ್ನು ನಕ್ಸಲ್‌ ತಜ್ಞರು ಕೃತ್ಯದ ಮಾದರಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಫ್ಎಸ್‌ಎಲ್‌ ವರದಿ ಶೀಘ್ರ: ಬಲಪಂಥೀಯರ ಕೃತ್ಯದ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾ ತಂಡ ಎಫ್ಎಸ್‌ಎಲ್‌ ವರದಿಗೆ ಕಾಯುತ್ತಿದೆ. ಒಂದು ವೇಳೆ ವಿಧಿ ವಿಜ್ಞಾನ ಪರೀಕ್ಷೆ ವರದಿ ಬಂದು, ಕೃತ್ಯಕ್ಕೆ 7.65 ಎಂಎಂ ಮಾದರಿಯ ಪಿಸ್ತೂಲ್‌ ಬಳಕೆ ಮಾಡಿರುವುದು ಸಾಬೀತಾದರೆ ಕೂಡಲೇ ಶಂಕಿತ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಗೌರಿ ಹಂತಕರ ಬಗ್ಗೆ ಮಹತ್ವದ ಸುಳಿವು: ರಾಮಲಿಂಗಾರೆಡ್ಡಿ
ಗೌರಿ ಕೊಲೆ ಪ್ರಕರಣದ ಆರೋಪಿಗಳ ಬಗ್ಗೆ ಕೆಲವು ಮಹತ್ವದ ಸುಳಿವು ದೊರೆತಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿಹೇಳಿದ್ದಾರೆ. ಬೆಂಗಳೂರಿನಲ್ಲಿ ಪೊಲಿಸ್‌ ಅಧಿಕಾರಿಗಳ ಸಭೆ ನಡೆಸಿ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಗೌರಿ ಹತ್ಯೆ ಪ್ರಕರಣದಲ್ಲಿ ನಕ್ಸಲ್‌ ಸಂಪರ್ಕ, ಬಲ ಪಂಥೀಯ ಸಂಘಟನೆ ಕೈವಾಡ, ವೈಚಾರಿಕ ಸಂಘರ್ಷ, ವೈಯಕ್ತಿಕ ದ್ವೇಷ ಎಲ್ಲ ಹಿನ್ನೆಲೆಯಲ್ಲಿಯೂ ತನಿಖೆ ನಡೆಯುತ್ತಿದೆ. ಈಗಾಗಲೇ ಮಹತ್ವದ ಸುಳಿವು ದೊರೆತಿರುವುದರಿಂದ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುತ್ತದೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ವಿವಾದದಲ್ಲಿ ವೈಚಾರಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಜೀವ ಬೆದರಿಕೆ ಇರುವ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ. ಜಾಮದಾರ, ವಿಧಾನ ಪರಿಷತ್‌ ಸದಸ್ಯ ಬಸವರಾಜ್‌ ಹೊರಟ್ಟಿ ಸೇರಿದಂತೆ ಯಾರಿಗೆ ಜೀವ ಭಯ ಇದೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದೆಯೋ ಅವರಿಗೆಲ್ಲ ಭದ್ರತೆ ಒದಗಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಅದರಂತೆ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು.

ಗೌರಿಗೆ ಬಂದಿತ್ತಾ ಬೆದರಿಕೆ?
ಗೌರಿ ಲಂಕೇಶ್‌ ಅವರನ್ನು ವಿರೋಧಿಸಿ ಪತ್ರ, ಇ-ಮೇಲ್‌ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಲೆನಾಡಿನ ನಕ್ಸಲ್‌ ಚಳವಳಿಯಲ್ಲಿ ಭಾಗಿಯಾಗಿದ್ದ ಹಲವರನ್ನು ಮುಖ್ಯವಾಹಿನಿಗೆ ಕರೆ ತರಲು ಗೌರಿ ಪ್ರಯತ್ನಿಸುತ್ತಿದ್ದರು. ನಾಲ್ಕೈದು ಮಂದಿಯನ್ನು ಮುಖ್ಯವಾಹಿನಿಗೂ ಕರೆತಂದಿದ್ದರು. ಇದರಿಂದ ಕೆಲವು ನಕ್ಸಲರು ಅವರ ಮೇಲೆ
ಅಸಮಾಧಾನಗೊಂಡಿದ್ದರು. ಇವರಿಂದ ಗೌರಿ ಅವರಿಗೆ ಬೆದರಿಕೆ ಪತ್ರ, ಇ-ಮೇಲ್‌ ಬಂದಿವೆ ಎನ್ನಲಾಗಿದೆ. ಆದ್ದರಿಂದ, ಆ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದು, ಸೈಬರ್‌ ತಜ್ಞರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಸ್‌ಐಟಿಗೆ ಮತ್ತಷ್ಟು ಬಲ
ಶನಿವಾರ ಕೂಡ ವಿಶೇಷ ತನಿಖಾ ತಂಡದ ಅಧಿಕಾರಿಗಳು ಗೌರಿ ಮನೆ ಮತ್ತು ಪತ್ರಿಕಾ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರೊಂದಿಗೆ ನಾಲ್ಕೈದು ದಿನಗಳ ಹಿಂದೆ ರಚನೆಯಾದ ವಿಶೇಷ ತನಿಖಾ ತಂಡಕ್ಕೆ ಸಿಬ್ಬಂದಿ ಕೊರತೆ ಇತ್ತು. ಆದರೆ, ಇದೀಗ ಅಧಿಕ 45 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗೌರಿ ಲಂಕೇಶ್‌ ಹತ್ಯೆ ಹಿಂದೆ ಆರೆಸ್ಸೆಸ್‌ ಅಥವಾ ಬಿಜೆಪಿ ಕೈವಾಡವಿದೆಯೆಂದು ಎಂದಿಗೂ ಹೇಳಿಲ್ಲ. ಆದರೆ, ಗೌರಿ ಸೈದ್ಧಾಂತಿಕ ಸಂಘರ್ಷಕ್ಕೆ ಬಲಿಯಾಗಿರುವುದಂತೂ ಖಚಿತ.
– ಮಲ್ಲಿಕಾರ್ಜುನ ಖರ್ಗೆ,
ಲೋಕಸಭೆ ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next