ಬೆಳಗಾವಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಜಾಡು ಬೆನ್ನಟ್ಟಿರುವ ಎಸ್‌ಐಟಿ ಅಧಿ ಕಾರಿಗಳು ಶನಿವಾರ ಬೆಳಗಾವಿಗೆ ಆಗಮಿಸಿ ಮಾಹಿತಿ ಕಲೆ ಹಾಕಿದರು. ಎಸ್‌ಐಟಿ ಅಧಿಕಾರಿಯೂ ಆಗಿರುವ ಬೆಂಗಳೂರು ಸಿಸಿಬಿ ಡಿವೈಎಸ್‌ಪಿ ಎಸ್.ಎಂ. ನಾಗರಾಜ್ ನೇತೃತ್ವದ ಐವರ ತಂಡ ಪೊಲೀಸ್ ಕಮೀಷನರ್ ಕಚೇರಿಗೆ ಭೇಟಿ ನೀಡಿ ನಂತರ ಹನುಮಾನ ನಗರದ ಯುವತಿ ಕುಟುಂಬ ವಾಸವಾಗಿದ್ದ ಮನೆಗೆ ಭೇಟಿ ನೀಡಿತು.
ಅಲ್ಲಿ ಮನೆ ಮಾಲೀಕರನ್ನು ಭೇಟಿಯಾಗಿ ವಿಚಾರಣೆ ನಡೆಸಿತು. ಮನೆಯಲ್ಲಿ ಎಷ್ಟು ಜನ ಇದ್ದರು. ಯಾವಾಗ ಇಲ್ಲಿಂದ ಹೋಗಿದ್ದಾರೆಂಬ ಮಾಹಿತಿ ಪಡೆದರು. ಮೂರು ದಿನಗಳಿಂದ ಯುವತಿ ಕುಟುಂಬಸ್ಥರು ಮನೆಗೆ ಬಂದಿಲ್ಲ. ಎಲ್ಲಿ ಹೋಗಿದ್ದಾರೆಂಬ ಮಾಹಿತಿ ಇಲ್ಲ. ಕುಟುಂಬಸ್ಥರು ಸಂಪರ್ಕಕ್ಕೆ ಬಂದರೆ ತಿಳಿಸಲಾಗುವುದು ಎಂದು ಮನೆ ಮಾಲೀಕರು ಹೇಳಿದರು. ಮಾ.16ರಂದು ಯುವತಿ ಪಾಲಕರು ಎಪಿಎಂಸಿ ಠಾಣೆಯಲ್ಲಿ ಪುತ್ರಿಯನ್ನು ಅಪಹರಿಸಲಾಗಿದೆ.
ಮಾನಸಿಕ ಕಿರುಕುಳ ನೀಡಿ ಅಶ್ಲೀಲ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಪುತ್ರಿಯನ್ನು ಹುಡುಕಿ ಕೊಡಿ ಎಂದು ದೂರು ನೀಡಿದ್ದರು. ಈ ಪ್ರಕರಣವನ್ನು ಎಪಿಎಂಸಿಯಿಂದ ಬೆಂಗಳೂರಿನ ಆರ್ .ಟಿ. ನಗರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಎಸ್‌ಐಟಿಗೆ ವರ್ಗಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಬೆಳಗಾವಿಗೆ ಬಂದು ಮಾಹಿತಿ ಪಡೆದಿದೆ. ಆದರೆ ಯುವತಿ ಕುಟುಂಬಸ್ಥರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.