Advertisement

ಗೌರಿ ಹತ್ಯೆ ಕೇಸ್‌ನಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿಕೆ

06:45 AM Jul 24, 2018 | Team Udayavani |

ಬೆಂಗಳೂರು: ಪತ್ರಕರ್ತೆ ಗೌರಿಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣ ಸಂಬಂಧ ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಈ ಮೂಲಕ ಗೌರಿ ಹತ್ಯೆ ಕೇಸ್‌ನಲ್ಲಿ ಬಂಧಿತರಾದ ಆರೋಪಿಗಳ ಸಂಖ್ಯೆ 9ಕ್ಕೆ ಏರಿದೆ.

Advertisement

ಗೌರಿ ಹತ್ಯೆಗೆ ಸಂಚು ರೂಪಿಸಿದ ತಂಡದಲ್ಲಿದ್ದ ಹುಬ್ಬಳ್ಳಿ ಮೂಲದ ಅಮಿತ್‌ ರಾಮಚಂದ್ರ ಬದ್ದಿ (25) ಗಣೇಶ್‌ ಮಿಸ್ಕಿನ್‌ ಎಂಬುವವರನ್ನು ಎಸ್‌ಐಟಿ ಬಂಧಿಸಿದ್ದು  ತನಿಖೆ ಮುಂದುವರಿಸಿದೆ.

ಆರೋಪಿಗಳಿಬ್ಬರು ಪ್ರಮುಖ ಹಿಂದೂಪರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಗೌರಿ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದಾರೆ. ಆರೋಪಿ ಪರಶುರಾಮ್‌ ವಾಗೊ¾àರೆಯನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಗೌರಿ ಮನೆಯ ಹತ್ತಿರ ಗಣೇಶ್‌ ಕರೆದೊಯ್ದಿದ್ದು, ಹತ್ಯೆಗೆ ಬಳಸಿದ್ದ ಬೈಕ್‌ ಹಾಗೂ ಪಿಸ್ತೂಲ್‌ ವಿಲೇವಾರಿ ಮಾಡಿದ ಶಂಕೆಯ ಸಂಬಂಧ ಅಮಿತ್‌ ರಾಮಚಂದ್ರ ಅವರನ್ನು ಬಂಧಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಅಮಿತ್‌ ಹಾಗೂ ಗಣೇಶ್‌ರನ್ನು ಸೋಮವಾರ ಬೆಂಗಳೂರಿನ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಗಸ್ಟ್‌ 6ವರೆಗೆ ನ್ಯಾಯಾಲಯ ಕಸ್ಟಡಿಗೆ ನೀಡಿದೆ. ವಿಚಾರಣೆ ವೇಳೆ ಗೌರಿ ಹತ್ಯೆ ಕೇಸ್‌ನಲ್ಲಿ ಇಬ್ಬರು ಯಾವ ರೀತಿ ಪಾತ್ರವಹಿಸಿದ್ದರು ಎಂಬ ಬಗ್ಗೆ ಮತ್ತಷ್ಟು ಖಚಿತತೆ ಲಭ್ಯವಾಗಲಿದೆ ಎಂದು ಎಸ್‌ಐಟಿ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಪ್ರಕರಣದ ಪ್ರಮುಖ ಸಾಕ್ಷ್ಯ ಎಂದು ಪರಿಗಣಿತವಾಗಿರುವ ಪಿಸ್ತೂಲ್‌ ಹಾಗೂ ಬೈಕ್‌ನ್ನು  ಅಮಿತ್‌ ವಿಲೇವಾರಿ ಮಾಡಿದ್ದಾನೆ ಎಂಬ ಶಂಕೆಯಿದೆ. ಹೀಗಾಗಿ,ಅವುಗಳನ್ನು ವಶಪಡಿಸಿಕೊಳ್ಳುವ  ಸಲುವಾಗಿ ಮತ್ತಷ್ಟು ವಿಚಾರಣೆ ಹಾಗೂ ತನಿಖೆಯ ಅಗತ್ಯವಿದೆ ಎಂದೂ ಅಧಿಕಾರಿ ತಿಳಿಸಿದರು.

Advertisement

ಇತರೆ ಆರೋಪಿಗಳ ಜತೆ  ಸಂಪರ್ಕ
ಪ್ರಕರಣದ ಇತರೆ ಆರೋಪಿಗಳಾದ ಮಹಾರಾಷ್ಟ್ರದ ಅಮೂಲ್‌ ಕಾಳೆ, ಶಿವಮೊಗ್ಗದ ಸುಚಿತ್‌ಕುಮಾರ್‌ ಜತೆ ಆರೋಪಿಗಳಿಬ್ಬರಿಗೂ ನಂಟಿದೆ. ಹಿಂದೂಪರ ಧಾರ್ಮಿಕ ಸಭೆಗಳಲ್ಲಿ ಪಾಲ್ಗೊಂಡಾಗ ಪರಸ್ಪರ ಪರಿಚಿತರಾಗಿದ್ದಾರೆ. ಆ ಬಳಿಕ ನಿರಂತರ ಸಂಪರ್ಕದಲ್ಲಿದ್ದು ಗೌರಿ ಹತ್ಯೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಹತ್ಯೆ ಸಂಚಿನಲ್ಲಿ ತಮಗೆ ವಹಿಸಿದ್ದ ಪಾತ್ರವನ್ನು ನಿಭಾಯಿಸಿದ್ದ  ಇಬ್ಬರೂ, ಕೆಲದಿನಗಳ ಬಳಿಕ ತಲೆಮರೆಸಿಕೊಂಡಿದ್ದರು.

ಅಮೂಲ್‌ಕಾಳೆಯಿಂದ ವಶಪಡಿಸಿಕೊಂಡ  ಡೈರಿಯಲ್ಲಿನ ಮಾಹಿತಿ, ವಿಚಾರಣೆ ವೇಳೆ ಸಿಕ್ಕಿದ್ದ ಮಾಹಿತಿ ಪಡೆದುಕೊಳ್ಳಲಾಗಿತ್ತು. ಬಳಿಕ ಆರೋಪಿಗಳ ಚಲನವಲನಗಳ ಬಗ್ಗೆ ನಿಗಾ ಇಟ್ಟು,ವ್ಯವಸ್ಥಿತ ಕಾರ್ಯಾಚರಣೆ ಬಳಿಕ  ಭಾನುವಾರ ಆರೋಪಿಗಳನ್ನು  ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದರು.

ಗೌರಿಹತ್ಯೆ ಸಂಚನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗಿದೆ. ಸದ್ಯ ಸೆರೆಸಿಕ್ಕಿರುವ ಆರೋಪಿಗಳನ್ನು ಹೊರತುಪಡಿಸಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಸಾಧ್ಯತೆಯಿದೆ. ಈಗಾಗಲೇ ಹಲವು ಮಹತ್ವದ ಸುಳಿವು ಕೂಡ ಲಭ್ಯವಾಗಿದೆ. ತನಿಖಾ ದೃಷ್ಟಿಯಿಂದ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದರು.

ಗೌರಿ ಹತ್ಯೆ ನಡೆದ ಬಳಿಕ ಅಕ್ರಮ ಶಸ್ತ್ರಾಸ್ತ್ರ ತಡೆ ಕಾಯಿದೆ ಆರೋಪ ಪ್ರಕರಣದಲ್ಲಿ ಮಂಡ್ಯ ಮೂಲದ  ನವೀನ್‌ಕುಮಾರ್‌ ಹೊಟ್ಟೆ ಮಂಜನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಬಳಿಕ ತನಿಖೆಗೆ ಮತ್ತಷ್ಟು ವೇಗ ನೀಡಿದ ಎಸ್‌ಐಟಿ ಇದುವರೆಗೂ ಪ್ರವೀಣ್‌ ಕುಮಾರ್‌,ಅಮೋಲ್‌ ಕಾಳೆ,  ಅಮಿತ್‌ ದೇಗ್ವೇಕರ್‌, ಮನೋಹರ್‌ ಯಡವೆ, ಪರಶುರಾಮ್‌ ವಾಗೊ¾àರೆ, ಮೋಹನ್‌ ನಾಯಕ್‌, ಅಮಿತ್‌ ರಾಮಚಂದ್ರ ಬದ್ದಿ ,ಗಣೇಶ್‌ ಮಿಸ್ಕಿನ್‌ರನ್ನು ಬಂಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next