Advertisement

ಗೌರಿ ಹತ್ಯೆ ರೂವಾರಿ ವಾಗ್ಮೋರೆ ಬಂಧನ

06:00 AM Jun 13, 2018 | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಮತ್ತೂಂದು ಸ್ವರೂಪ ಪಡೆದಿದ್ದು, ಎಸ್‌ಐಟಿ ಅಧಿಕಾರಿಗಳು ವಿಜಯಪುರ ಜಿಲ್ಲೆ ಸಿಂಧಗಿಯಲ್ಲಿ ಬಂಧಿಸಿರುವ ಪರಶುರಾಮ್‌ ವಾಗ್ಮೋರೆ ಸಂಚಿನ ರೂವಾರಿ ಎಂಬುದು ಬಹಿರಂಗ ಗೊಂಡಿದೆ. ಜತೆಗೆ ಆತನೇ ಗೌರಿ ಲಂಕೇಶ್‌ಗೆ ಗುಂಡಿಕ್ಕಿದ ಶೂಟರ್‌ ಎಂದೂ ಹೇಳಲಾಗಿದೆ. ಆದರೆ ಪೊಲೀಸರು ಇದನ್ನು ಸ್ಪಷ್ಟಪಡಿಸಿಲ್ಲ. ಪರಶುರಾಮ್‌ ವಾಗ್ಮೋರೆ (26) ಶ್ರೀರಾಮ ಸೇನೆಯ ಕಾರ್ಯಕರ್ತ. ಟೈಗರ್‌ ಪಡೆಯ ಸದಸ್ಯ, ಸಂಶೋಧಕ ಡಾ| ಎಂ.ಎಂ. ಕಲಬುರಗಿ ಹತ್ಯೆಯಲ್ಲೂ ಈತನ ಕೈವಾಡ ಇದೆ ಎಂಬ ಶಂಕೆ ಇದೆ. ಇವೆಲ್ಲ ತನಿಖೆ ಬಳಿಕ ಖಚಿತವಾಗ ಬೇಕಿದೆ.

Advertisement

ವಾಗ್ಮೋರೆ ಇದೇ ಪ್ರಕರಣದಲ್ಲಿ ಬಂಧಿತನಾಗಿರುವ ಹೊಟ್ಟೆ ಮಂಜನ ಜತೆ ಗೌರಿ ಹತ್ಯೆಗೂ ಮುನ್ನ ಒಂದು ವಾರ ಬೆಂಗ ಳೂರಿನಲ್ಲಿ ವಾಸ್ತವ್ಯ ಇದ್ದ. ಒಮ್ಮೆ ದ್ವಿಚಕ್ರ ವಾಹನದಲ್ಲಿ ಗೌರಿ ಲಂಕೇಶ್‌ ಮನೆಯ ಬಳಿ ಸುತ್ತಾಡಿದ್ದ ಬಗ್ಗೆ ಎಸ್‌ಐಟಿ ಮಾಹಿತಿ ಸಂಗ್ರಹಿಸಿದೆ.  ಪರಶುರಾಮ್‌ ವಾಗ್ಮೋರೆ, ಪ್ರಕರಣದಲ್ಲಿ ಬಂಧಿತರಾಗಿರುವ ಹೊಟ್ಟೆ ಮಂಜ, ಪ್ರವೀಣ್‌, ಅಮೋಳ್‌ಕಾಳೆ, ಅಮಿತ್‌ ದೇಗ್ವೇಕರ್‌, ಮನೋಹರ್‌ ದುಂಡಪ್ಪ ಯವಡೆ ಸೇರಿ ಗೌರಿ ಹತ್ಯೆಗೆ ಸಂಚು ರೂಪಿಸಿದ್ದರು. ಗೋವಾದಲ್ಲಿ ನಡೆದಿದ್ದ ಸನಾತನ ಸಂಘಟನೆಯ ಸಭೆಯಲ್ಲಿ  ಇವರು ಜತೆ ಸೇರಿದ್ದರು.

ಫೈರಿಂಗ್‌ ತರಬೇತಿ: ಸಿಂಧಗಿ ತಾಲೂಕಿನ ಬಸವನಗರದಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ವಾಗ್ಮೋರೆ ಸದಾ ಹಿಂದೂ ಹೋರಾಟಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ. ಧರ್ಮ ರಕ್ಷಣೆಗೆ ಶಸ್ತ್ರ ಸಜ್ಜಿತ ಹೋರಾಟ ಅಗತ್ಯ ಎಂದು ಪ್ರತಿಪಾದಿಸುತ್ತಿದ್ದ. ಬೆಳಗಾವಿಯ ಖಾನಾಪುರ, ಚಾಮರಾಜನಗರ ಕೊಳ್ಳೆಗಾಲದ ಅರಣ್ಯ ಪ್ರದೇಶಗಳಲ್ಲಿ ಫೈರಿಂಗ್‌ ತರಬೇತಿ ಪಡೆದು ನೈಪುಣ್ಯತೆ ಹೊಂದಿದ್ದ. ಮನೋಹರ್‌ ಯವಡೆ, ಅಮೋಲ್‌ ಕಾಳೆ, ಅಮಿತ್‌ ದೇಗ್ವೇಕರ್‌ ಹಾಗೂ ಪ್ರವೀಣ್‌ ಅವರಿಗೂ ಈತನೇ ಫೈರಿಂಗ್‌ ತರಬೇತಿ ಕೊಟ್ಟಿದ್ದ ಎಂದು ಹೇಳಲಾಗಿದೆ.

ಪರಶುರಾಮ್‌ ವಾಗ್ಮೋರೆ ಸ್ನೇಹಿತ ಸುನಿಲ್‌ ಅಗಸ ಎಂಬವನನ್ನೂ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹೇಳಲಾಗಿದ್ದು, ಆತ ಸಹ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡು ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಪರಶುರಾಮ್‌ಗೆ ಸಹಾಯ ಮಾಡಿದ್ದಾನೆ ಎನ್ನಲಾಗಿದೆ.

ಪಾಕ್‌ ಧ್ವಜ ಹಾರಿಸಿದ್ದ: ಶೈಕ್ಷಣಿಕ ಹಂತದಲ್ಲೇ ಹಿಂದೂ ಸಂಘಟನೆ ಶ್ರೀರಾಮಸೇನೆಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿರುವ ಪರಶುರಾಮ್‌ ಕೋಮು ದ್ವೇಷ ಬಿತ್ತಲು 2012ರಲ್ಲಿ ಸಿಂಧಗಿ ಪಟ್ಟಣದಲ್ಲಿ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಪಾಕಿಸ್ಥಾನ ಧ್ವಜ ಹಾರಾಟ ಪ್ರಕರಣದಲ್ಲಿ ಬಂಧಿತನಾಗಿದ್ದ. ಸದರಿ ಪ್ರಕರಣ ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

Advertisement

ನಿಜವಾದ ಶೂಟರ್‌ “ದಾದಾ’?: ಗೌರಿ ಲಂಕೇಶ್‌ರನ್ನು ಗುಂಡಿಕ್ಕಿ ಹತ್ಯೆಗೈದಿದ್ದು ನಿಹಾರ್‌ ಅಲಿಯಾಸ್‌ ದಾದಾ ಎಂಬಾತ. ಆತ ಮಹಾರಾಷ್ಟ್ರ ಮತ್ತು ಗೋವಾ ಭಾಗದಲ್ಲಿ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಹೇಳಲಾಗಿದೆ. 

ಆರೋಪಿ ತಾಯಿ ಆಸ್ಪತ್ರೆಗೆ: ಪರಶುರಾಮ್‌ ವಾಗ್ಮೋರೆ ಬಂಧನದ ಸುದ್ದಿ ತಿಳಿದು ಕುಟುಂಬ ಸದಸ್ಯರು ಕಂಗಾಲಾಗಿದ್ದು ಎಸ್‌ಐಟಿ ಪೊಲೀಸರು ಸ್ಪಷ್ಟ ಮಾಹಿತಿ ನೀಡದ ಕಾರಣ ಆತಂಕಗೊಂಡಿದ್ದಾರೆ. ಈ ಮಧ್ಯೆ ಪರಶುರಾಮ್‌ ಬಂಧನ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಲೇ ಆತನ ತಾಯಿ ಜಾನಕಿಬಾಯಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು 14 ದಿನಗಳ ಕಾಲ ಎಸ್‌ಐಟಿ ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ.

ಪರಶುರಾಮ್‌ಗೂ ಶ್ರೀರಾಮಸೇನೆಗೂ ಸಂಬಂಧವಿಲ್ಲ. ಆತ  ನಮ್ಮ ಜತೆ ಇರಲಿಲ್ಲ. 
ಪ್ರಮೋದ್‌ ಮುತಾಲಿಕ್‌, ಶ್ರೀರಾಮಸೇನೆ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next