Advertisement

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

11:02 PM May 21, 2024 | Team Udayavani |

ಬೆಂಗಳೂರು: ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಇದುವರೆಗೆ ದಾಖಲಾಗಿರುವ 4 ಎಫ್ಐಆರ್‌ಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯ ಕಲೆ ಹಾಕುವ ಕಾರ್ಯವನ್ನು ವಿಶೇಷ ತನಿಖಾ ತಂಡವು (ಎಸ್‌ಐಟಿ) ಚುರುಕುಗೊಳಿಸಿದೆ.

Advertisement

ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾದ ಎಫ್ಐಆರ್‌ಗೆ ಸಂಬಂಧಿಸಿದಂತೆ ಸಂತ್ರಸ್ತೆಯರ ಹೇಳಿಕೆ ದಾಖಲಿಸಿಕೊಂಡು ಮಹಜರು ಪ್ರಕ್ರಿಯೆ ಮುಗಿಸಲಾಗಿದೆ. ಕೃತ್ಯ ನಡೆದಿರುವ ಸ್ಥಳಗಳಿಗೆ ತೆರಳಿ ನಡೆದ ಘಟನೆ ಬಗ್ಗೆ ಸಂತ್ರಸ್ತೆಯರಿಂದ ಮಾಹಿತಿ ಕಲೆ ಹಾಕಲಾಗಿದೆ. ತಾಂತ್ರಿಕ ಕಾರ್ಯಾಚರಣೆ ನಡೆಸಿ ಕೆಲವು ಟೆಕ್ನಿಕಲ್‌ ಪುರಾವೆಗಳನ್ನು ಎಸ್‌ಐಟಿ ಸಂಗ್ರಹಿಸಿಕೊಂಡಿದ್ದು ಇನ್ನೂ ಕೆಲವು ಮಹತ್ವದ ಸಾಕ್ಷ್ಯಗಳು ಸಿಗಬೇಕಿದೆ. ಇದಕ್ಕಾಗಿ ಪ್ರಕರಣದ ಸಾಕ್ಷ್ಯ ಸಂಗ್ರಹ ಕಾರ್ಯವನ್ನು ಎಸ್‌ಐಟಿಯು ಇನ್ನಷ್ಟು ಚುರುಕುಗೊಳಿಸಿದೆ.

ವರದಿ ಬರಬೇಕಿದೆ
ಇನ್ನು ಪೆನ್‌ಡ್ರೈವ್‌ ಸೇರಿ ಜಪ್ತಿ ಮಾಡಿರುವ ಕೆಲವು ಎಲೆಕ್ಟ್ರಾನಿಕ್‌ ವಸ್ತುಗಳಿಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದಿಂದ (ಎಫ್ಎಸ್‌ಎಲ್‌) ವರದಿಗಳು ಬರಬೇಕಿದೆ. ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೂ ಸೇರಿದಂತೆ ಪ್ರಜ್ವಲ್‌ ವಿರುದ್ಧ ಇದುವರೆಗೆ 4 ಎಫ್ಐಆರ್‌ ದಾಖಲಾಗಿದೆ. ಪ್ರಜ್ವಲ್‌ ವಿಚಾರಣೆ ನಡೆಸದೆ ಬಲವಾದ ಸಾಕ್ಷ್ಯ ಸಂಗ್ರಹಿಸಿ ದಾಖಲಿಸಿಕೊಳ್ಳುವುದು ಎಸ್‌ಐಟಿಗೆ ಸವಾಲಾಗಿದೆ. ಪ್ರಜ್ವಲ್‌ ವಿಚಾರಣೆ ನಡೆಸದೆ ಪ್ರಕರಣದ ತನಿಖೆ ವೇಗವಾಗಿ ಸಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ವಿದೇಶದಿಂದ ಕರೆತರುವುದು
ಎಸ್‌ಐಟಿ ಪೊಲೀಸರಿಗೆ ಸುಲಭವಲ್ಲ
ಪ್ರಜ್ವಲ್‌ ರೇವಣ್ಣ ಅವರನ್ನು ವಿದೇಶದಿಂದ ಕರೆ ತರುವುದು ಅಷ್ಟು ಸುಲಭದ ಮಾತಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕಾನೂನು, ವಿದೇಶದಲ್ಲಿರುವ ಆರೋಪಿಯ ಪತ್ತೆ ಹಚ್ಚುವ ಪ್ರಕ್ರಿಯೆಗಳು, ಭಾರತ ಹಾಗೂ ಆರೋಪಿ ಇರುವ ದೇಶದ ನಡುವಿನ ಪರಸ್ಪರ ಒಪ್ಪಂದಗಳು ಎಲ್ಲವನ್ನೂ ನೋಡಿಕೊಂಡು ಮುಂದುವರಿಯಬೇಕಾಗುತ್ತದೆ. ಹೀಗಾಗಿ ಇದಕ್ಕೆ ಸಾಕಷ್ಟು ಕಾಲಾವಕಾಶ ಹಿಡಿಯುತ್ತದೆ. ಅವರು ಎಲ್ಲಿದ್ದಾರೆ ಎಂಬುದು ಗೊತ್ತಾದ ಕೂಡಲೇ ಆ ದೇಶಕ್ಕೆ ತೆರಳಿ ಏಕಾಏಕಿ ಕರೆತರಲು ಸಾಧ್ಯವಾಗುವುದಿಲ್ಲ. ಕಾನೂನು ಪ್ರಕ್ರಿಯೆ ಮೂಲಕ ಪ್ರಜ್ವಲ್‌ ರೇವಣ್ಣ ಅವರನ್ನು ಕರೆತರಲು ಎಲ್ಲ ರೀತಿಯ ಪ್ರಯತ್ನಗಳೂ ನಡೆಸುತ್ತಿದ್ದೇವೆ. ಜರ್ಮನಿಯ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹೀಗಾಗಿ ಪ್ರಜ್ವಲ್‌ ರೇವಣ್ಣ ಅವರನ್ನು ಕರೆತರಲು ಎಸ್‌ಐಟಿ ಪರದಾಟ ಮುಂದುವರಿಸಿದೆ.

ಪ್ರಜ್ವಲ್‌ ಮುಂದಿನ ನಡೆ ಏನು?
ಪ್ರಜ್ವಲ್‌ ರೇವಣ್ಣ ಬರುವಿಕೆಗಾಗಿ ಕಾದು ಕುಳಿತು ಎಸ್‌ಐಟಿ ತಂಡವು ಸುಸ್ತಾಗಿದ್ದು ಸದ್ಯಕ್ಕೆ ಭಾರತಕ್ಕೆ ಬರುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ. ಇತ್ತ ಕುಟುಂಬಸ್ಥರಿಂದ ವಿಚಾರಣೆ ಎದುರಿಸುವಂತೆ ಒತ್ತಡಗಳು ಬಂದರೂ, ಪ್ರಜ್ವಲ್‌ ಮಾತ್ರ ಇನ್ನೂ ನಿಗೂಢವಾಗಿದ್ದು ಅವರ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಭಾರತಕ್ಕೆ ವಾಪಸಾದ ತತ್‌ಕ್ಷಣ ಎಸ್‌ಐಟಿ ಅವರನ್ನು ಬಂಧಿಸಲಿದೆ ಎಂಬುದನ್ನು ಅರಿತಿರುವ ಪ್ರಜ್ವಲ್‌ ಈ ಕಾರಣಕ್ಕಾಗಿ ಬೆಂಗಳೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಪೊಲೀಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next