Advertisement

ಅತ್ತಿಗೆ-ನಾದಿನಿ ಒಂದೇ

02:22 PM Dec 15, 2017 | |

ಡಿಸೆಂಬರ್‌ ಬಂದಿತೆಂದರೆ ನನಗೆ ಬಹಳ ಖುಶಿ. ನನ್ನ ಕಾಲೇಜಿನ ಗೆಳತಿಯರಿಬ್ಬರೂ ಒಂದು ವಾರ ರಜೆ ಪಡೆದು ಊರಿಗೆ ಬರುತ್ತಾರೆ. ಅವರಿಬ್ಬರು ಅತ್ತಿಗೆ-ನಾದಿನಿಯರಾಗಿರುವುದು ಇನ್ನೊಂದು ವಿಶೇಷ. ಬೆಂಗಳೂರಿನಲ್ಲಿರುವ ಸಬಿತಾ ಸಾಫ್ಟ್ವೇರ್‌ ಕಂಪೆನಿಯ ಉದ್ಯೋಗಿ. ಅವಳ ತವರೂರಾದ ಶಿರಸಿಗೆ ಹೋಗದೇ ತನ್ನ ಗೆಳತಿ ಅಲಿಯಾಸ್‌ ನಾದಿನಿಯೊಂದಿಗೆ ಸಮಯ ಕಳೆಯಬೇಕೆಂದು ಅವಳು ಬರುವುದು ನಮ್ಮೂರಿಗೆ, ಐದಾರು ದಿನ ಒಟ್ಟಾಗಿ ಕಳೆದು ತವರೂರಿನತ್ತ ಪಯಣ ಬೆಳೆಸುತ್ತಾಳೆ. ನನ್ನ ಮಕ್ಕಳಿಗಾಗಿ, ನಾದಿನಿ ಮಕ್ಕಳಿಗಾಗಿ ಸಾಕಷ್ಟು ತಿಂಡಿತಿನಿಸುಗಳನ್ನು ಹೊತ್ತು ತರುತ್ತಾಳೆ.

Advertisement

ಅನಿತಾಳ ಗಂಡನ ಮನೆ ಹೈದರಾಬಾದ್‌. ಅಲ್ಲಿಂದ ಮಕ್ಕಳ ಕ್ರಿಸ್ಮಸ್‌ ರಜೆಗೆಂದು ಪ್ರತಿವರ್ಷ ತವರೂರಿಗೆ ಬರುತ್ತಾಳೆ. ಕರಾಚಿ ಬಿಸ್ಕತ್ತು, ಮಾವಿನಹಣ್ಣಿನ ಕಜ್ಜಾಯ ಇತ್ಯಾದಿಗಳನ್ನು ನಮಗಾಗಿ ತರುತ್ತಾಳೆ. ಮದುವೆಯವರೆಗೂ ಊರಿನಲ್ಲಿ ಕಾಲೇಜಿನಲ್ಲಿ ತಾತ್ಕಾಲಿಕ ಅಧ್ಯಾಪಕಿಯಾಗಿ ದುಡಿದವಳು, ಮದುವೆಯ ನಂತರ ಹೆರಿಗೆ, ಬಾಣಂತನವೆಂದು ವಿರಾಮ ನೀಡಿದವಳು, ಮತ್ತೆ ಆ ಕಡೆ ತಲೆಹಾಕಲಿಲ್ಲ. ಈಗ ಅಲ್ಪಸ್ವಲ್ಪ ಲೇಖನ, ಕವನವನ್ನು ಬರೆಯಲು ಶುರುಮಾಡಿದ್ದಾಳೆ ಎಂದು ಅವಳ ವಾಟ್ಸಾಪ್‌ ಸ್ಟೇಟಸ್‌ ಹೇಳುತ್ತಿತ್ತು.

ಊರಿಗೆ ಬಂದವರು ಮನೆಕೆಲಸವನ್ನೆಲ್ಲ ಮುಗಿಸಿ, ಮಕ್ಕಳ ಊಟ-ತಿನಿಸುಗಳು ಮುಗಿದು ಅವರನ್ನು ಮಲಗಿಸಿ ನಮ್ಮ ಮನೆಗೆ ಇಬ್ಬರೂ ಮಾತನಾಡಲು ಬರುತ್ತಾರೆ. ಚಹಾ ಕುಡಿಯುತ್ತ ಮಾತನಾಡುತ್ತ ಕುಳಿತರೆ ನಮಗೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಹಳೆಯ ನೆನಪುಗಳು, ಮಕ್ಕಳು, ಅವರ ವಿದ್ಯಾಭ್ಯಾಸ, ಹೊಸ ಚಲನಚಿತ್ರ- ಹೀಗೆಲ್ಲ ಮಾತನಾಡಲು ನಮಗೆ ನೂರಾರು ವಿಷಯ.

ಸಬಿತಾ ಬೆಳಿಗ್ಗೆ ಫೋನಾಯಿಸಿ, “ನಿನ್ನೊಂದಿಗೆ ಪರ್ಸನಲ್ಲಾಗಿ ಮಾತನಾಡಬೇಕು’ ಎಂದು ಹತ್ತು ಗಂಟೆಗೆ ಮನೆಗೆ ಬರುವುದಾಗಿ ತಿಳಿಸಿದಳು. ಮನೆಗೆ ಬಂದವಳು ಚಹಾ ಕುಡಿಯುತ್ತ ಬಡಬಡನೆ ಮಾತನಾಡಲು ಶುರುಮಾಡಿದವಳು. ಮನೆಯ ಸುದ್ದಿಯನ್ನೆಲ್ಲ ಮಾತನಾಡುತ್ತ ಕುಳಿತಳು. ಅನಿತಾಳ ಮಕ್ಕಳು ಶಾಂತ ಸ್ವಭಾವದವರಾಗಿ ಸಬಿತಾಳ ಮಕ್ಕಳು ಮಾಡುವ ತೀಟೆಗಳು ಅವಳಿಗೆ ಇಷ್ಟವಾಗುತ್ತಿರಲಿಲ್ಲ. ಅವರಿಬ್ಬರಿಗೂ ಆ ವಿಷಯದಲ್ಲಿ ಸ್ವಲ್ಪ  ವಾದ-ವಿವಾದವಾದಂತಿತ್ತು. ಕೆಲಸಕ್ಕೆ ಹೋಗುವ ಭರದಲ್ಲಿ ಸ್ವಲ್ಪ ಮುದ್ದಾಗಿ, ಲಲ್ಲೆ ಹೊಡೆದು ತಿನ್ನಿಸದಿರೆ ತಿನ್ನದಿರುವ ಮಕ್ಕಳನ್ನು ಅವಳದೇ ಶೈಲಿಯಲ್ಲಿ ಬೆಳೆಸಿದ್ದಳು. ಕಿಟಕಿ ಹತ್ತುವುದು, ಸ್ಕೂಟರ್‌ ಮೇಲೆ ಹತ್ತಿ ಕೂರುವುದು, ಸಾಮಾನುಗಳನ್ನು ಎಳೆದು ಹಾಕುವುದು ಒಂದೇ ಎರಡೇ ನೂರಾರು ತೀಟೆಗಳು. ಕೆಲವೊಮ್ಮೆ ಮನೆಯಿಂದಲೇ ಕಚೇರಿ ಕೆಲಸ ಮಾಡುವಾಗ ಮಕ್ಕಳು ತೊಂದರೆ ನೀಡಬಾರದೆಂದು ತರಕಾರಿಯ ಬುಟ್ಟಿ, ಬಕೆಟು, ಪಾತ್ರೆಪಗಡಿ  ಇತ್ಯಾದಿ ನೀಡಿ ಅವರು ಆಟವಾಡುವಾಗ ಇವಳು ಕಚೇರಿ ಕೆಲಸ ಮಾಡುವಳು. “ಆ ಬೆಂಗಳೂರಿನಲ್ಲಿ ನಾನೊಬ್ಬಳೇ ಎಲ್ಲ ಮಾಡ್ಕೊಳ್ಳಬೇಕಲ್ವೇನೆ’ ಎಂದು ಹೇಳಿದಳು. ಈ ತೀಟೆಗಳನ್ನೇ ಇಲ್ಲಿ ಅಜ್ಜಿ ಮನೆಯಲ್ಲಿ ಮುಂದುವರಿಸಲು ಅನಿತಾಳ ಮಕ್ಕಳಿಗೆ ತೊಂದರೆಯಾಗುತ್ತಿತ್ತು.

 ತಮಗೆ ಬೇಕಾದ ಸಾಮಾನುಗಳಿಗಾಗಿ ಸಬಿತಾಳ ಮಕ್ಕಳು ಆ ಮಕ್ಕಳೊಂದಿಗೆ ಕಾದಾಟ, ಕಿತ್ತಾಟಗಳನ್ನು ಕಂಡು ಅನಿತಾಳಿಗೆ ಸಹಿಸಲು ಕಷ್ಟವಾಗುವಂತಾಯಿತು. ದಿನಾಲೂ ಈ ಬಗ್ಗೆ ಚರ್ಚೆ ನಡೆದರೆ ಅತ್ತೆಗೆ ಸೊಸೆಯ ಪರ ಮಾತನಾಡುವ ಮನಸ್ಸಿದ್ದರೂ ಮಗಳ ಗಂಡನ ಮನೆಯವರು ಅವರ ಮೊಮ್ಮಕ್ಕಳಿಗೆ ಏನಾದರೂ ಅಂದರೆ ಬೇಸರಿಸಿಕೊಂಡಾರೆಣಿಸಿ ಮಗಳ ಪರವೇ ಸ್ವಲ್ಪ ವಹಿಸಿ ಮಾತನಾಡುತ್ತಿದ್ದರು. ಆದರೂ ನನಗೆ ಅವಳೊಂದಿಗೆ ಜಗಳವಾಡಲು ಇಷ್ಟವಿಲ್ಲ, “ಏನಾದರೂ ಸಲಹೆ ನೀಡು’ ಎಂದು ಕೇಳಿದಳು.

Advertisement

ಅವಳ ವಯಸ್ಸಿನವಳೇ ಆದ ನನಗೇನು ಜಾಸ್ತಿ ಅನುಭವವಿರಲು ಸಾಧ್ಯ. ಒಬ್ಬನೇ ಮಗನಿರುವ ಸಂಬಂಧ ಬಂದಾಗ ಅಕ್ಕ ತಂಗಿಯರೊಂದಿಗೇ ಬೆಳೆದವನಿರಬೇಕೆಂದು ಅರಸುತ್ತಿರುವಾಗ ಗೆಳತಿಯ ಅಣ್ಣನ ಜಾತಕವೇ ಬಂದಾಗ ಬಲು ಸಂತಸಪಟ್ಟವಳವಳು. ಅವಳಿಗೆ ನಾನೇನು ಉಪದೇಶ ಮಾಡುವುದು. ಅನಿತಾಳ ಬಗ್ಗೆ ಏನಾದರೂ ಕೆಡಕು ಮಾತನಾಡಿದರೂ ನಾಳೆ ಅತ್ತಿಗೆ-ನಾದಿನಿ ಒಂದೇ, ನನ್ನನ್ನು ದೂರವಿಡುವುದರಲ್ಲಿ ಸಂಶಯವಿಲ್ಲ.

ಆದರೂ ನಾನು ನಿನ್ನ ಮಕ್ಕಳು ಅವರಿಗೂ ಸಂಬಂಧವಲ್ಲವೇನು?! ಅತ್ತೆಗೆ ಮೊಮ್ಮಕ್ಕಳು, ಅನಿತಾಗೆ ಸೋದರ ಅಳಿಯ, ಸೊಸೆ, ಅವರು ನಾಲ್ಕು ಮಾತನಾಡಿ ನಿನ್ನ ಮಕ್ಕಳು ತಿದ್ದುಕೊಳ್ಳಲುಬಹುದು, ಅವರ ಒಳ್ಳೆಯದಕ್ಕೆ ಎಂದುಕೊ. ಇಂದು ಮಾತನಾಡಿದವರು ನಾಳೆ ಮುದ್ದು ಮಾಡುತ್ತಾರೆ. ನಿನಗೆ ಅನ್ನಿಸಿದನ್ನು ಅವರೊಂದಿಗೆ ಮನಬಿಚ್ಚಿ ಮಾತನಾಡು. ಅವರ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಬಹುದು- ಹೀಗೆ ಮನಬಂದಂತೆ ಮಾತನಾಡಿ ಅಷ್ಟು ಮಾತನಾಡಿದೇನಾ ಎಂದು ಆಶ್ಚರ್ಯಪಟ್ಟೆ.

ಇಷ್ಟೆಲ್ಲ ಕೇಳಿ ಸಬಿತಾ, “ನಾನು ಅವಳಿಗೆ ಪತ್ರ ಬರೆದು ಎಲ್ಲ ವಿವರಿಸೋಣ ಎಂದುಕೊಂಡಿದ್ದೇನೆ ಏನಂತಿಯಾ ನೀನು’ ಎಂದು ನನ್ನ ಕೇಳಲು ಹೂಂಗುಟ್ಟಿದೆ. ಅವಳು ಪತ್ರ ಬರೆದಳ್ಳೋ ಇಲ್ಲವೋ ತಿಳಿಯಲಿಲ್ಲ. ಸಂಜೆ ಇಬ್ಬರೂ ಒಟ್ಟಾಗಿ ನಾಲ್ಕು ಮಕ್ಕಳನ್ನು ಸೇರಿಸಿ ನಗುನಗುತ್ತ ಎಲ್ಲಿಗೋ ಹೊರಟಂತಿತ್ತು. ಬೆಳಿಗ್ಗೆ ಜಗಳವಾಡಿದ್ದು ಇವಳೇನಾ ಎಂದುಕೊಂಡೆ !

ಸಾವಿತ್ರಿ ಶ್ಯಾನುಭಾಗ್‌ 

Advertisement

Udayavani is now on Telegram. Click here to join our channel and stay updated with the latest news.

Next