Advertisement

ಸಿಸ್ಟೆಮಿಕ್‌ ಲ್ಯೂಪಸ್‌ ಎರಿಥಮಾಟೋಸಸ್‌ 

02:01 PM Mar 23, 2019 | |

ಸಿಸ್ಟೆಮಿಕ್‌ ಲ್ಯೂಪಸ್‌ ಎರಿಥಮಾಟೋಸಸ್‌ (ಎಸ್‌ಎಲ್‌ಇ) ಎಂಬುದು ರಕ್ತಪರಿಚಲನೆಗೆ ಸಂಬಂಧಿಸಿದ ಒಂದು ಕಾಯಿಲೆಯಾಗಿದ್ದು, ತುಲನಾತ್ಮಕವಾಗಿ ಅಪರೂಪದ್ದಾಗಿದೆ. ಸಾಮಾನ್ಯವಾಗಿ ಯುವ ಸ್ತ್ರೀಯರಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ ಚರ್ಮ ಮತ್ತು ಒಳ ಅಂಗಾಂಗಗಳನ್ನು ಬಾಧಿಸುತ್ತದೆ. ಚರ್ಮದಲ್ಲಿ ಉರಿ ಅನುಭವ ಅಥವಾ ಸೂರ್ಯನ ಬಿಸಿಲಿಗೆ ಸೋಕಿದಂತಹ ಅನುಭವವನ್ನು ಉಂಟು ಮಾಡುತ್ತದೆ. ಈ ಅನುಭವ ಮುಖ ಮತ್ತು ಗಲ್ಲಗಳಲ್ಲಿ ಹೆಚ್ಚು ಉಂಟಾಗುತ್ತಿದ್ದು, ಕೆಂಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಬಿಸಿಯ ಅನುಭವವೂ ಉಂಟಾಗಬಹುದು, ಆಗದೆಯೂ ಇರಬಹುದು. ಸೂರ್ಯನ ಬಿಸಿಲು ತಾಕಿದಾಗ ಇದು ಹೆಚ್ಚುತ್ತದೆ. ಕ್ರಮೇಣ ಇದು ಕೊಂಚ ಉಬ್ಬುತ್ತದೆ, ಊದಿಕೊಳ್ಳುತ್ತದೆ. ಬಳಿಕ ಬಾಯಿಯಲ್ಲಿ ಹುಣ್ಣುಗಳು, ಕಾರಣವಿಲ್ಲದೆ ಜ್ವರ, ಸಂದುನೋವು, ದಣಿವು, ಕೂದಲು ಉದುರುವುದು, ಆಗಾಗ ದೇಹದ ಎಲ್ಲೆಡೆ ಕೆಂಬಣ್ಣದ ಗುಳ್ಳೆಗಳು ಉಂಟಾಗುತ್ತವೆ. ಇದರಿಂದ ಉಂಟಾಗುವ ಇತರ ಸಮಸ್ಯೆಗಳಲ್ಲಿ ಕೈಗಳು ಮತ್ತು ಪಾದಗಳಲ್ಲಿ ಸಣ್ಣದಾದ ಕೆಂಪು ಮಚ್ಚೆಗಳು ಕಾಣಿಸಿಕೊಂಡು ಕ್ರಮೇಣ ಹುಣ್ಣಾಗುವುದು, ಚಳಿ ಅಥವಾ ತಣ್ಣನೆಯ ನೀರು ಸೋಕಿದಾಗ ಕೈ ಮತ್ತು ಕಾಲು ಬೆರಳುಗಳಲ್ಲಿ ನೋವು ಉಂಟಾಗುವುದು ಸೇರಿವೆ. ಈ ನೋವಿನೊಂದಿಗೆ ಬೆರಳುಗಳ ತುದಿಯ ಬಣ್ಣ  ಬದಲಾಗುವುದು, ಬಣ್ಣ ಕಳೆದುಕೊಳ್ಳುವುದು, ನೀಲಿಗಟ್ಟುವುದು, ಸ್ವಲ್ಪ ಕೆಂಪಗಾಗಿ ಕೆಲವು ಕಾಲದ ಬಳಿಕ ಸಹಜ ಸ್ಥಿತಿಗೆ ಬರುವುದು ನಡೆಯುತ್ತದೆ. 

Advertisement

ಎಸ್‌ಎಲ್‌ಇ ಬಾಧೆಗೀಡಾದ ಯುವತಿಯರು ಸೈಕೊಸಿಸ್‌ (ಅಂದರೆ ಖನ್ನತೆ ಉಂಟಾಗುವುದು, ಅತಿಯಾಗಿ ಮಾತನಾಡುವುದು, ಅಸಂಬದ್ಧವಾಗಿ ಮಾತನಾಡುವುದು ಇತ್ಯಾದಿ), ಮೂತ್ರದಿಂದ ಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್‌ ನಷ್ಟವಾಗುವ ಮೂತ್ರಪಿಂಡದ ಕಾಯಿಲೆ, ರಕ್ತಸ್ರಾವ ಸಂಬಂಧಿ ಸಮಸ್ಯೆಗಳು, ರಕ್ತಹೀನತೆ ಇತ್ಯಾದಿಗಳಿಗೆ ಕಾರಣವಾಗುವ ಬಿಳಿ ಮತ್ತು ಕೆಂಪು ರಕ್ತ ಕಣಗಳ ಕೊರತೆಗಳಿಗೂ ತುತ್ತಾಗಬಹುದು. ಎಸ್‌ಎಲ್‌ಇಗೆ ತುತ್ತಾಗಿರುವ ಮಹಿಳೆಯರಿಗೆ ಗರ್ಭವತಿಯರಾಗುವುದಕ್ಕೆ ತೊಂದರೆ ಎದುರಾಗಬಹುದು; ಆದರೂ ಆಗಾಗ ಗರ್ಭಪಾತವಾಗಬಹುದು. ಆರೋಗ್ಯವಂತ ಯುವತಿಯೊಬ್ಬರು ನಿಶ್ಶಕ್ತಿ, ಬೆಳಕಿಗೆ ಅತಿಯಾದ ಸೂಕ್ಷ್ಮ ಸಂವೇದನೆ, ಮುಖದಲ್ಲಿ ಗುಳ್ಳೆಗಳು, ಕೂದಲು ನಷ್ಟ, ತೂಕ ನಷ್ಟ ಅಥವಾ ಸಂದು ನೋವು ಇತ್ಯಾದಿ ಲಕ್ಷಣಗಳನ್ನು ಬೆಳೆಸಿಕೊಂಡರೆ ಎಸ್‌ಎಲ್‌ಇ ಉಂಟಾಗಿದೆಯೇ ಎಂಬುದಾಗಿ ಸಂಶಯಿಸಬಹುದು. ಎಸ್‌ಎಲ್‌ಇ ಮತ್ತು ಸಂಬಂಧಿ ಕಾಯಿಲೆಗಳು ಅಪರೂಪಕ್ಕೆ ಕೌಟುಂಬಿಕವಾಗಿ ಹರಿದುಬರುತ್ತವೆ. ಪುರುಷರು ಈ ಅನಾರೋಗ್ಯಕ್ಕೆ ತುತ್ತಾಗುವುದು 1:10ರಷ್ಟು ಕಡಿಮೆ; ಆದರೆ ಉಂಟಾದರೆ ಪುರುಷರಲ್ಲಿ ಈ ಕಾಯಿಲೆ ತೀವ್ರ ಸ್ವರೂಪದ್ದಾಗಿರುತ್ತದೆ. 

ಎಸ್‌ಎಲ್‌ಇ  ಹೇಗೆ ಉಂಟಾಗುತ್ತದೆ?
ನಮ್ಮ ದೇಹವು ಅನೇಕ ಜೀವಕೋಶಗಳು, ಅಂಗಾಂಶಗಳು ಮತ್ತು ಅಂಗವ್ಯವಸ್ಥೆಗಳಿಂದ ಕೂಡಿರುವ ಒಂದು ಸಂಕೀರ್ಣ ಸಂರಚನೆಯಾಗಿದೆ. ಅದು ಆಗಾಗ ಗಾಯ ಮತ್ತು ಸೋಂಕುಕಾರಕ ಜೀವವ್ಯವಸ್ಥೆಗಳ ಆಕ್ರಮಣದಿಂದ ಹಾನಿಗೀಡಾಗುತ್ತಿರುತ್ತದೆ. ಇದನ್ನು ಎದುರಿಸಲು ದೇಹವು ತನ್ನದೇ ಆದ ರಕ್ಷಣಾ ವ್ಯವಸ್ಥೆಯನ್ನು ರೂಪಿಸಿಕೊಂಡಿರುತ್ತದೆ. ಈ ವ್ಯವಸ್ಥೆಯನ್ನು ರೋಗ ನಿರೋಧಕ ಶಕ್ತಿ ಎಂದು ಕರೆಯಲಾಗುತ್ತದೆ. ಲಿಂಫೊಸೈಟ್‌ಗಳು, ಪ್ಲಾಸ್ಮಾ ಕೋಶಗಳು, ನ್ಯೂಟ್ರೊಫಿಲ್‌ಗ‌ಳು, ಮ್ಯಾಕ್ರೊಫೇಗಸ್‌ನಂತಹ ಅನೇಕ ಜೀವಕೋಶಗಳು ಈ ರೋಗ ನಿರೋಧಕ ಶಕ್ತಿ ಎಂಬ ಸೈನ್ಯದ ಯೋಧರಾಗಿ ಕೆಲಸ ಮಾಡುತ್ತಿರುತ್ತವೆ. ಕೆಲವು ಸೋಂಕು ಅಥವಾ ಕಾರಣ ತಿಳಿಯದ ಯಾವುದೋ ಒಂದು ವಿದ್ಯಮಾನದಿಂದ ನಮ್ಮದೇ ಜೀವಕೋಶಗಳು ಬಾಹ್ಯವಸ್ತುಗಳಂತೆ ವರ್ತಿಸಿ, ಈ ರೋಗ ನಿರೋಧಕ ಯೋಧರಿಂದ ನಾಶವಾದಾಗ ಎಸ್‌ಎಲ್‌ಇ ಉಂಟಾಗುತ್ತದೆ. 

ಎಸ್‌ಎಲ್‌ಇ ಉಂಟಾಗಿದೆ ಎಂದು ಸಂಶಯಿಸಲ್ಪಟ್ಟ ವ್ಯಕ್ತಿಯನ್ನು ಆದಷ್ಟು ಬೇಗನೆ ಪರೀಕ್ಷಿಸಿ ಚಿಕಿತ್ಸೆಗೊಳಪಡಿಸಬೇಕು. ಎಸ್‌ಎಲ್‌ಇ ಹೌದೇ ಅಲ್ಲವೇ ಎಂಬುದನ್ನು ಎಎನ್‌ಎ ಎಂಬ ಸರಳ ರಕ್ತ ಪರೀಕ್ಷೆಯ ಮೂಲಕ ಖಚಿತಪಡಿಸಿಕೊಳ್ಳಬಹುದು. ಎಸ್‌ಎಲ್‌ಇ ಇರುವವರಲ್ಲಿ ಈ ರಕ್ತಪರೀಕ್ಷೆ ಹೆಚ್ಚು ಪಾಸಿಟಿವ್‌ ಫ‌ಲಿತಾಂಶ ಒದಗಿಸುತ್ತದೆ. ಕೆಲವೊಮ್ಮೆ ಆರೋಗ್ಯವಂತರಲ್ಲಿಯೂ ಈ ಪರೀಕ್ಷೆ ಪಾಸಿಟಿವ್‌ ಫ‌ಲಿತಾಂಶ ನೀಡಬಹುದಾದರೂ ಅಂಥ ಪ್ರಕರಣಗಳ ಸಂಖ್ಯೆ ಕಡಿಮೆ. ಸೂಕ್ಷ್ಮದರ್ಶಕ ಅಧ್ಯಯನ ಮತ್ತು ಇಮ್ಯುನೊಫ‌ುÉರೊಸೆನ್ಸ್‌ ಎಂಬ ವಿಶೇಷ ಪರೀಕ್ಷೆಗಾಗಿ ಚರ್ಮದ ಬಯಾಪ್ಸಿಯನ್ನೂ ನಡೆಸಲಾಗುತ್ತದೆ. ರಕ್ತ, ಕಣ್ಣುಗಳು, ಮಿದುಳು, ಮೂತ್ರಪಿಂಡಗಳು, ಪಿತ್ತಕೋಶದಂತಹ ಇತರ ಅಂಗಾಂಗಗಳ ಒಳಗೊಳ್ಳುವಿಕೆಯ ಶಂಕೆಯನ್ನು ನಿವಾರಿಸಲು ಇತರ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ. 

ರೋಗ ಪ್ರತಿರೋಧಕ ಶಕ್ತಿಯ ಪ್ರತಿಸ್ಪಂದನೆಯನ್ನು ಕಡಿಮೆ ಮಾಡುವುದು ಅಥವಾ ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಶಕ್ತಿಗುಂದಿಸುವುದು ಚಿಕಿತ್ಸೆಯ ಉದ್ದೇಶವಾಗಿರುತ್ತದೆ. ಇದಕ್ಕಾಗಿ ಇಮ್ಯುನೋಸಪ್ರಸೆಂಟ್ಸ್‌ ಎಂಬ ಔಷಧಗಳ ಗುತ್ಛವನ್ನು ಪ್ರಯೋಗಿಸಲಾಗುತ್ತದೆ. ಬಹಳ ಸಾಮಾನ್ಯವಾದ, ಅಗ್ಗವಾದ ಮತ್ತು ವ್ಯಾಪಕವಾಗಿ ಬಳಕೆಯಲ್ಲಿರುವಂತಹ ಇಮ್ಯುನೊಸಪ್ರಸೆಂಟ್ಸ್‌ ಎಂದರೆ ಕಾರ್ಟಿಕೊಸ್ಟಿರಾಯ್ಡಗಳು. ಕಾರ್ಟಿಕೊಸ್ಟಿರಾಯ್ಡಗಳು ಔಷಧಗಳ ಒಂದು ವರ್ಗವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹದ್ದುಬಸ್ತಿನಲ್ಲಿ ಇರಿಸಿ ದೇಹದ ಉರಿಯೂತ ಪ್ರತಿಸ್ಪಂದನೆಯನ್ನು ಕಡಿಮೆ ಮಾಡುತ್ತವೆ. ಅನೇಕ ಹಾನಿಕಾರಕ ಅಡ್ಡ ಪರಿಣಾಮಗಳನ್ನು ಹೊಂದಿದ್ದರೂ ಇವು ಎಸ್‌ಎಲ್‌ಇಯಂತಹ ರೋಗ ನಿರೋಧಕ ಶಕ್ತಿಯು ಒಳಗೊಂಡ ಕಾಯಿಲೆಗಳು ಉಂಟಾದ ಸಂದರ್ಭಗಳಲ್ಲಿ ಜೀವರಕ್ಷಕವಾಗಿ ಕೆಲಸ ಮಾಡುತ್ತವೆ. ಸ್ಟಿರಾಯ್ಡಗಳು ಎಷ್ಟು ಅಪಾಯಕಾರಿ ಔಷಧಗಳು ಎಂದರೆ, ಪರಿಣತ ವೈದ್ಯರು ಶಿಫಾರಸು ಮಾಡಿದ ಬಳಿಕವೇ; ಅದೂ ಕೂಡ ಮಧುಮೇಹ, ಅಧಿಕ ರಕ್ತದೊತ್ತಡ, ಇತರ ಸೋಂಕುಗಳಂತಹ ಸ್ಥಿತಿಗಳಿಲ್ಲ ಎಂಬುದಾಗಿ ಹಲವು ಪರೀಕ್ಷೆಗಳ ಫ‌ಲಿತಾಂಶದ ಮೂಲಕ ಖಚಿತವಾದ ಬಳಿಕವಷ್ಟೇ ಇವುಗಳನ್ನು ತೆಗೆದುಕೊಳ್ಳಬೇಕು. ಜತೆಗೆ, ನಿಯಮಿತವಾಗಿ ಫಾಲೊಅಪ್‌, ಆವಶ್ಯಕತೆಗೆ ತಕ್ಕಂತೆ ಔಷಧದ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡುವಂತಹ ವೈದ್ಯರು ಶಿಫಾರಸು ಮಾಡುವ ಕ್ರಮಗಳನ್ನು ಪಾಲಿಸಬೇಕು. ಸ್ಟಿರಾಯ್ಡಗಳ ಸಾಮಾನ್ಯ ಅಡ್ಡ ಪರಿಣಾಮಗಳಲ್ಲಿ ತೂಕ ಹೆಚ್ಚಳ, ಭಾವನಾತ್ಮಕ ಬದಲಾವಣೆಗಳು, ಚರ್ಮ ತೆಳುವಾಗುವುದು, ಸ್ಟ್ರೆಚ್‌ ಮಾರ್ಕ್‌ಗಳು ಉಂಟಾಗುವುದು, ರಕ್ತದ ಸಕ್ಕರೆಯ ಪ್ರಮಾಣ ಹೆಚ್ಚಳವಾಗುವುದು, ರಕ್ತದೊತ್ತಡ ಹೆಚ್ಚುವುದು, ಎಲುಬುಗಳು ದುರ್ಬಲವಾಗುವುದು ಮತ್ತು ಇತರ ಸೋಂಕುಗಳಿಗೆ ತುತ್ತಾಗುವುದು ಸೇರಿವೆ. ಸ್ಟಿರಾಯ್ಡಗಳಲ್ಲದೆ, ಕೆಲವು ಇತರ ಔಷಧಗಳನ್ನೂ ಎಸ್‌ಎಲ್‌ಇಗೆ ಚಿಕಿತ್ಸೆ ಒದಗಿಸಲು ಉಪಯೋಗಿಸಲಾಗುತ್ತದೆ. ಬಯಾಲಾಜಿಕಲ್ಸ್‌ ಎಂಬ ಹೊಸ ವರ್ಗದ ಔಷಧಗಳು ದುಬಾರಿಯಾಗಿದ್ದು, ಈಗ ಪ್ರಯೋಗ ಹಂತದಲ್ಲಿವೆ. ಇವುಗಳನ್ನು ಸಾಪ್ತಾಹಿಕ ಅಥವಾ ಮಾಸಿಕವಾಗಿ ಇಂಜೆಕ್ಷನ್‌ಗಳ ರೂಪದಲ್ಲಿ ನೀಡಬೇಕಾಗುತ್ತದೆ. ಇವುಗಳಿಂದ ಕೂಡ ರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದು, ಅಧಿಕ ರಕ್ತದೊತ್ತಡ, ಸೋಂಕು ತಗಲುವ ಸಾಧ್ಯತೆ ಹೆಚ್ಚುವುದು ಇತ್ಯಾದಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಆದರೆ ಈ ಅಡ್ಡ ಪರಿಣಾಮಗಳು ಸ್ಟಿರಾಯ್ಡಗಳಿಂದ ಉಂಟಾಗುವ ಅಡ್ಡ ಪರಿಣಾಮಗಳಿಗಿಂತ ಭಿನ್ನವಾಗಿರುತ್ತವೆ. ಆದರೆ, ಸ್ಟಿರಾಯ್ಡಗಳನ್ನು ಇತರ ಇಮ್ಯುನೊಸಪ್ರಸೆಂಟ್‌ ಔಷಧಗಳ ಜತೆಗೆ ಸಂಯೋಜಿಸಿ ನೀಡಿದರೆ ಎರಡೂ ಔಷಧಗಳ ಡೋಸೇಜ್‌ ಕಡಿಮೆಗೊಳಿಸಬಹುದು ಮಾತ್ರವಲ್ಲದೆ, ಆ ಮೂಲಕ ಅಡ್ಡ ಪರಿಣಾಮಗಳ ಪ್ರಮಾಣ ಮತ್ತು ತೀವ್ರತೆಯನ್ನು ಕಡಿಮೆ ಮಾಡಬಹುದು. ಎಸ್‌ಎಲ್‌ಇಗೆ ಗರ್ಭಿಣಿ ಮಹಿಳೆ ತುತ್ತಾಗಿದ್ದರೆ ಹೆಚ್ಚುವರಿ ಎಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ. ಗರ್ಭಿಣಿಯರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿ ಗರ್ಭಪಾತ ಉಂಟಾಗಬಹುದು. ಹೀಗಾಗಿ ಗರ್ಭವನ್ನು ಉಳಿಸಿಕೊಳ್ಳಲು ವೈದ್ಯಕೀಯ ಮೇಲ್ವಿಚಾರಣೆಯ ಅಡಿಯಲ್ಲಿ ಆಸ್ಪಿರಿನ್‌ ಔಷಧವನ್ನು ಸ್ಟಿರಾಯ್ಡಗಳ ಜತೆಗೆ ನೀಡಲಾಗುತ್ತದೆ. ಎಸ್‌ಎಲ್‌ಇ ರೋಗಿಗಳು ಎಷ್ಟು ಸಾಧ್ಯವೋ ಅಷ್ಟು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದಿರುವುದು ಕ್ಷೇಮಕರ. ಅವರಿಗೆ ಸನ್‌ಸ್ಕ್ರೀನ್‌ಗಳನ್ನು ನೀಡಲಾಗುತ್ತದೆ. ಸೂರ್ಯನ ಬಿಸಿಲು ತುಸುವೇ ತಾಕಿದರೂ ಉಲ್ಬಣಿಸಬಲ್ಲಂತಹ ಕಾಯಿಲೆ ಎಸ್‌ಎಲ್‌ಇ. ಹೀಗಾಗಿ ಸೂರ್ಯನ ಬೆಳಕಿಗೆ ತೆರೆದುಕೊಳ್ಳದಿರುವುದು ಅಗತ್ಯ.

Advertisement

ಎಸ್‌ಎಲ್‌ಇ ಅಪಾಯಕಾರಿ ಎನಿಸಬಹುದು; ಆದರೆ ರೋಗಿಯು ಎಚ್ಚರಿಕೆಯಿಂದ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವ ಇಚ್ಛೆ ಹೊಂದಿದ್ದರೆ, ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುವುದಾದರೆ, ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿದ್ದರೆ ಮತ್ತು ನಿಯಮಿತವಾಗಿ ಚೆಕ್‌ ಅಪ್‌ ಮಾಡಿಸಿಕೊಳ್ಳುತ್ತಿದ್ದರೆ ಅದನ್ನು ಗೆಲ್ಲಬಹುದು. ಹಿಂದೆ ಎಸ್‌ಎಲ್‌ಇ ಒಂದು ಮಾರಣಾಂತಿಕ ಕಾಯಿಲೆ ಎಂಬುದಾಗಿ ಪರಿಗಣಿತವಾಗಿತ್ತು. ಆದರೆ ಈಗ ರೋಗ ಪತ್ತೆ, ಚಿಕಿತ್ಸೆ ಮತ್ತು ಫಾಲೊ ಅಪ್‌ಗ್ಳಲ್ಲಿ ಆಗಿರುವ ಪ್ರಗತಿಯಿಂದಾಗಿ ಎಸ್‌ಎಲ್‌ಇ ರೋಗಿಗಳು ಸಾಮಾನ್ಯವೆಂಬಂತಹ ಜೀವನವನ್ನು ಸಾಗಿಸಬಹುದು.

– ಡಾ| ಸ್ಮಿತಾ ಪ್ರಭು,
ಅಸೋಸಿಯೇಟ್‌ ಪ್ರೊಫೆಸರ್‌, 
ಡರ್ಮಟಾಲಜಿ ವಿಭಾಗ, ಕೆಎಂಸಿ ಮಣಿಪಾಲ.

 

Advertisement

Udayavani is now on Telegram. Click here to join our channel and stay updated with the latest news.

Next