ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿರುವ ಜೈಲು ಸೇರಿರುವ ಮಾಜಿ ಸಚಿವ ಮನೀಷ್ ಸಿಸೋಡಿಯ ಅವರ ಕುಟುಂಬದವರಿಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ದೆಹಲಿ ಸರ್ಕಾರ ಸೂಚಿಸಿದೆ.
ಈ ಬಂಗಲೆಯನ್ನು ದೆಹಲಿ ನೂತನ ಶಿಕ್ಷಣ ಸಚಿವೆ ಆತಿಶಿ ಮರ್ಲೆನಾ ಅವರಿಗೆ ಹಂಚಿಕೆ ಮಾಡಲಾಗಿದೆ. ಮಾಧ್ಯಮಗಳಿಗೆ ಈ ವಿಷಯ ಸೋರಿಕೆ ಆಗಿರುವ ಕುರಿತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನ ಅವರ ಮೇಲೆ ಆಮ್ ಆದ್ಮಿ ಪಕ್ಷ ಮುಗಿಬಿದ್ದಿದೆ.
“ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ 15 ದಿನಗಳಲ್ಲಿ ಸರ್ಕಾರಿ ನಿವಾಸ ತೆರವು ಮಾಡಬೇಕೆಂಬುವ ಕಾನೂನು ಇದೆ. ಅದರಂತೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ದೆಹಲಿ ಮಾಜಿ ಡಿಸಿಎಂ ಮನೀಷ್ ಸಿಸೋಡಿಯ ಕುಟುಂಬದವರು ನಿವಾಸ ಖಾಲಿ ಮಾಡಲಿದ್ದಾರೆ. ಇದು ಸಾಮಾನ್ಯ ಪ್ರಕ್ರಿಯೆ ಆಗಿದೆ. ಆದರೆ ಈ ವಿಷಯವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವ ಮೂಲಕ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನ ಸಾಂವಿಧಾನಿಕ ಹುದ್ದೆಯ ಘನತೆಗೆ ಧಕ್ಕೆ ತರುತ್ತಿದ್ದಾರೆ’ ಎಂದು ಆಪ್ ಕಿಡಿಕಾರಿದೆ.