ಸಿರುಗುಪ್ಪ: ತಾಲೂಕಿನ ಗಡಿಗ್ರಾಮ ಸೀಮಾಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಹೊಳಗುಂದ ಮಂಡಲದ ನೇರಣಿಕೆ ದೇವರಗುಡ್ಡದಲ್ಲಿ ಪ್ರತಿವರ್ಷದಂತೆ ಈ ವರ್ಷವು ವಿಯಜದಶಮಿಯಂದು ದೇವರ ಮೂರ್ತಿಗಳಿಗಾಗಿ ಹೊಡೆದಾಡುವ ಹಬ್ಬ ನಡೆಯಿತು.
ದೇವರಗುಡ್ಡದಲ್ಲಿನ ಮಲ್ಲಯ್ಯ ಮತ್ತು ಮಾಳಮ್ಮನ ಮೂರ್ತಿಗಳನ್ನು ಕೊಂಡ್ಯೊಯ್ಯಲು 11 ಗ್ರಾಮಗಳ ಭಕ್ತರ ನಡುವೆ ಪ್ರತಿವರ್ಷದಂತೆ ಈ ಬಾರಿಯೂ ಬಡಿಗೆಗಳಿಂದ ಹೊಡೆದಾಟವಾಯಿತು. ಹೀಗೆ ಹೊಡೆದಾಟದಲ್ಲಿ ಪರಸ್ಪರ ಗಾಯ, ರಕ್ತಸೋರಿಕೆ ಕಾಣಿಸಿದರೂ ಭಕ್ತರು ಮುನಿಸಿಕೊಳ್ಳಲಿಲ್ಲ, ಭಕ್ತಿಯ ಪರಾಕಾಷ್ಠೆಯ ಸಂಕೇತವೇ ಈ ಹಬ್ಬ.
ಸೀಮಾಂಧ್ರದ ನೇರಣಿಕಿ ಗ್ರಾಮಸ್ಥರು ವಿಜಯದಶಮಿಯ ರಾತ್ರಿ ಬಡಿಗೆಗಳ ಸಮೇತ ಪಂಜಿನ ಮೆರವಣಿಗೆಯೊಂದಿಗೆ ಉತ್ಸವ ಮೂರ್ತಿಗಳನ್ನು ಹೊತ್ತು ದೇವರಗುಡ್ಡಕ್ಕೆ ಆಗಮಿಸುತ್ತಾರೆ. ಈ ವೇಳೆ ದೇವರ ಮೂರ್ತಿಗಳನ್ನು ತಮ್ಮೂರಿಗೆ ಕೊಂಡ್ಯೊಯ್ಯಲು ಸುತ್ತಮುತ್ತಲಿನ 11 ಗ್ರಾಮಗಳ ಗ್ರಾಮಸ್ಥರು ಯತ್ನಿಸುತ್ತಾರೆ.
ಇದಕ್ಕೆ ಅವಕಾಶ ನೀಡದ ನೇರಣಿಕೆ ಗ್ರಾಮಸ್ಥರು ಬಡಿಗೆಗಳ ಮೂಲಕ ಪ್ರತಿರೋಧ ಒಡ್ಡುತ್ತಾರೆ. ಈ ವೇಳೆ ಪರಸ್ಪರ ಹೊಡೆದಾಟ ನಡೆಯುತ್ತದೆ. ಉತ್ಸವ ಮೂರ್ತಿ ಎದುರು ನಡೆಯುವ ಈ ಕಾದಾಟ ನೋಡುವ ಪೊಲೀಸರು ಈವರೆಗೂ ಮಧ್ಯ ಪ್ರವೇಶಿಸಿಲ್ಲ. ಗಾಯಗೊಂಡವರ ಮೈಯಿಂದ ರಕ್ತ ಸುರಿಯುತ್ತಿದ್ದರೂ ಇಲ್ಲಿ ಲೆಕ್ಕಕ್ಕಿಲ್ಲ. ಗಾಯಕ್ಕೆ ಭಂಡಾರ ಲೇಪಿಸಿಕೊಂಡು ಮಲ್ಲಯ್ಯ ಉಧೋ, ಉಧೋ ಚಾಂಗುಬಲ ಉಧೋ ಮಲ್ಲಯ್ಯ, ಡುರ್ರೇ
ಡುರ್ರು ಎನ್ನುವ ಘೋಷಣೆಗಳನ್ನು ಕೂಗುತ್ತಾ ಹೊಡೆದಾಡುತ್ತಾರೆ.
ಮೂರ್ತಿ ವಶಪಡಿಸಿಕೊಳ್ಳಲು ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೆ ಕಾದಾಟ ನಡೆಯಿತು. ಈ ಬಡಿಗೆ ಜಾತ್ರೆ ನೋಡಲು ಕರ್ನಾಟಕ ಮಾತ್ರವಲ್ಲ, ಸೀಮಾಂಧ್ರ, ತೆಲಂಗಾಣ, ಮಹರಾಷ್ಟ್ರದಿಂದಲೂ ಭಕ್ತರು 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.