ಸಿರುಗುಪ್ಪ: ದಣಿದವರ ದಾಹ ನೀಗಿಸುವ ಉದ್ದೇಶದಿಂದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅಶುದ್ಧ ನೀರು ಬರುತ್ತಿದ್ದು, ರೈತರು, ವರ್ತಕರು, ಹಮಾಲಿಗಳು ಶುದ್ಧ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದ ಎಪಿಎಂಸಿ ಆವರಣದಲ್ಲಿ 2015-16ನೇ ಸಾಲಿನ ಮುಖ್ಯಮಂತ್ರಿಗಳ ಆಯವ್ಯಯದಡಿ 3ಲಕ್ಷ ರೂ.ವೆಚ್ಚದ ಅನುದಾನದಲ್ಲಿ 2018ರಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಸೂಕ್ತ ನಿರ್ವಹಣೆ ಕೊರತೆಯಿಂದ ಅಶುದ್ಧ ನೀರು ಬರುತ್ತಿವೆ. ಬೇಸಿಗೆ ಆರಂಭಕ್ಕೆ ಮುನ್ನವೇ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅಶುದ್ಧ ನೀರು ಬರುತ್ತಿರುವುದು ರೈತರು ಮತ್ತು ಕಾರ್ಮಿಕರು ತೀವ್ರ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ.
ಎಪಿಎಂಸಿ ಆವರಣದಲ್ಲಿ ಅನೇಕ ವರ್ತಕರು ತಮ್ಮ ವಹಿವಾಟು ನಡೆಸುತ್ತಿದ್ದಾರೆ. ನಿತ್ಯ ನೂರಾರು ಜನ ರೈತರು, ಹಮಾಲಿಗಳು ಮತ್ತು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಎಪಿಎಂಸಿ ಆವರಣದಲ್ಲಿರುವ ಎಫ್‌ಸಿ ಗೋದಾಮು, ವರ್ತಕರ ಅಂಗಡಿಗಳು, ಸರ್ಕಾರಿ ಐಟಿಐ ಕಾಲೇಜು ಇದ್ದು, ಎಫ್.ಸಿ.ಯಲ್ಲಿ ನಿರಂತರವಾಗಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಈ ಘಟಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದರಿಂದ ಘಟಕದ ನೀರು ಗಬ್ಬುವಾಸನೆ ಬರುತ್ತಿವೆ.
ನಿರ್ವಹಣೆಯಲ್ಲಿ ಎಪಿಎಂಸಿ ಆಡಳಿತ ಮಂಡಳಿ ವಿಫಲ ಆಗಿರುವುದರಿಂದ ಶುದ್ಧ ಕುಡಿಯುವ ನೀರಿನ ಸೌಲಭ್ಯ ದೊರೆಯದಂತಾಗಿದೆ ಎಂಬುದು ರೈತರ ಆರೋಪ. ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಲಕ್ಷಾಂತರ ರೂ. ಅನುದಾನ ಬಿಡುಗಡೆ ಮಾಡಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸುತ್ತಿದೆ. ಆದರೆ ಸರ್ಕಾರದ ಅನುದಾನವನ್ನು ನಗರದಲ್ಲಿ ಕುಡಿಯುವ ನೀರಿನ ಘಟಕಕ್ಕೆ ಬಳಕೆ ಮಾಡಿಕೊಂಡಿದ್ದರೂ ರೈತರಿಗೆ ಎಪಿಎಂಸಿ ಆವರಣದಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.
ಎಪಿಎಂಸಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅಶುದ್ಧ ನೀರು ಬರುತ್ತಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಇಲ್ಲಿಗೆ ಬರುವ ರೈತರು ಮತ್ತು ಹಮಾಲಿಗಳು, ವರ್ತಕರು ನೀರಿಗೆ ಪರದಾಡುವುದು ಮಾಮೂಲಾಗಿದೆ. ಇದನ್ನು ಸರಿಪಡಿಸಿ ಶುದ್ಧ ನೀರೊದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರಾರಾವಿ ಗ್ರಾಮದ ರೈತ ಯಲ್ಲಪ್ಪ ಒತ್ತಾಯಿಸಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇಲ್ಲಿ ಅಶುದ್ಧ ನೀರು ಬರುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅದನ್ನು ಸರಿಪಡಿಸಿ ಶುದ್ಧ ನೀರೊದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಎಚ್.ಮಲ್ಲನಗೌಡ ತಿಳಿಸಿದ್ದಾರೆ.
ಬಸವಾರೆಡ್ಡಿ