Advertisement

ಸಿರುಗುಪ್ಪ: ಕುಡಿವ ನೀರಿನ ಕೆರೆ ಲೋಕಾರ್ಪಣೆಗೆ ಸಿದ್ಧತೆ

06:29 PM Nov 28, 2022 | Team Udayavani |

ಸಿರುಗುಪ್ಪ: ಕುಡಿಯುವ ನೀರು ಪೂರೈಕೆ ಮಾಡುವ ಕೆರೆ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ಶೇ.15ರಷ್ಟು ಕಾರ್ಯ ಮಾತ್ರ ಬಾಕಿಯಿದ್ದು, ಡಿಸೆಂಬರ್‌ 2ನೇ ವಾರದೊಳಗೆ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೆರೆಯನ್ನು ಲೋಕಾರ್ಪಣೆ ಮಾಡಲು ಅಧಿ ಕಾರಿಗಳು ಸಿದ್ಧತೆ ನಡೆಸಿದ್ದಾರೆ.

Advertisement

1999ರಿಂದ ಸಿರುಗುಪ್ಪ ನಗರಕ್ಕೆ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡಬೇಕೆಂಬ ಕನಸಿಗೆ ಶಾಸಕರಾಗಿದ್ದ ದಿವಂಗತ ಎಂ.ಶಂಕರರೆಡ್ಡಿ ಜೀವ ತುಂಬಿದ್ದರು. ನಂತರ ಶಾಸಕರಾಗಿದ್ದ ಎಂ.ಎಸ್‌. ಸೋಮಲಿಂಗಪ್ಪನವರು ಕೆರೆ ನಿಮಾರ್ಣಕ್ಕೆ ಬೇಕಾದ ಸ್ಥಳವನ್ನು ಗುರುತಿಸಿ ಕೆರೆ ನಿರ್ಮಾಣ ಕಾರ್ಯಕ್ಕೆ ಬೇಕಾದ ರೂ. 28 ಕೋಟಿ ಅನುದಾನವನ್ನು ಮಂಜೂರು ಮಾಡಿಸಿದರು.

ಆದರೆ ಕೆರೆ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಶಾಸಕ ಬಿ.ಎಂ.ನಾಗರಾಜ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ನೆರವೇರಿಸಿದರು. ನಂತರ ಮಾತನಾಡಿದ ಮುಖ್ಯಮಂತ್ರಿಗಳು 2 ವರ್ಷದೊಳಗೆ ಕೆರೆ ನಿರ್ಮಾಣ ಕಾರ್ಯ ಮುಗಿಸಿ ನಗರದ ಜನರಿಗೆ ನೀರು ಪೂರೈಕೆ ಮಾಡಲು ಕ್ರಮತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕರಾಗಿ ಎಂ.ಎಸ್‌. ಸೋಮಲಿಂಗಪ್ಪ ಆಯ್ಕೆಯಾದರು.

ಆದರೆ ಕೆರೆ ನಿರ್ಮಾಣ ಕಾರ್ಯ ಮಾತ್ರ ನಿಧಾನಗತಿಯಲ್ಲಿ ಸಾಗಿದ್ದನ್ನು ಗಮನಿಸಿದ ಹಾಲಿ ಶಾಸಕ ಸೋಮಲಿಂಗಪ್ಪನವರು ಮುತುವರ್ಜಿ ವಹಿಸಿ ಕೆರೆ ನಿರ್ಮಾಣಕ್ಕೆ ಬೇಕಾದ ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿ ರೂ. 38 ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಾಣ ಕಾರ್ಯ ಭಾಗಶಃ ಮುಗಿದಿದ್ದು, ಕಳೆದ 2 ತಿಂಗಳಿನಿಂದ ಕೆರೆ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳಿಂದ ಮಾಡಿಸಲು ಶಾಸಕರು ಸಿದ್ಧತೆ ಮಾಡಿಕೊಂಡಿದ್ದಾರೆ.

128 ಎಕರೆ ಪ್ರದೇಶವನ್ನು ಕೆರೆ ನಿರ್ಮಾಣ ಕಾರ್ಯಕ್ಕೆ ಗುರುತಿಸಲಾಗಿದ್ದು, 100 ಎಕರೆಯಲ್ಲಿ ರೂ. 38 ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಾಣವಾಗಿದ್ದು, ಅಲ್ಪಸ್ವಲ್ಪ ಕಾಮಗಾರಿಗಳು ಬಾಕಿ ಇದ್ದು, ಡಿಸೆಂಬರ್‌ ತಿಂಗಳಲ್ಲಿ ಕೆರೆಯನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ. ಇದಕ್ಕಾಗಿ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ.

Advertisement

ಈಗಾಗಲೇ ಕೆರೆಗೆ ಶೇ. 60ರಷ್ಟು ನೀರನ್ನು ತುಂಬಿಸಲಾಗಿದೆ. ಈ ಕೆರೆಯು ಮಣ್ಣಿನ ಒಡ್ಡಿನಿಂದ ನಿರ್ಮಿಸಲಾದ ಕೆರೆಯಾಗಿರುವುದರಿಂದ ಕೆರೆಗೆ ಮೊದಲಬಾರಿ ಶೇ. 60ರಷ್ಟು, 2ನೇ ಬಾರಿ ಶೇ.80ರಷ್ಟು, 3ನೇ ಬಾರಿ ಶೇ.100ರಷ್ಟು ನೀರನ್ನು ಶೇಖರಣೆ ಮಾಡಲಾಗುತ್ತದೆ.

ಕೆರೆ ಹತ್ತಿರ ಪೈಪ್‌ಲೈನ್‌ ಅಳವಡಿಸುವ ಕಾರ್ಯ ಮುಗಿದಿದ್ದು ವಿದ್ಯುತ್‌ ಸಂಪರ್ಕ ಪಡೆದು ಜೆಸ್ಕಾಂ ಇಲಾಖೆಗೆ ಹಣವನ್ನು ತುಂಬಲಾಗಿದೆ. ಬಾಕಿ ಶೇ. 15ರಷ್ಟು ಕಾಮಗಾರಿಗಳನ್ನು ಡಿಸೆಂಬರ್‌ 15ನೇ ತಾರೀಖೀನೊಳಗೆ ಮುಗಿಸಲಾಗುವುದು.
ಎ.ಇ. ಬಸವರಾಜ, ಕೆಯುಡಬ್ಲೂಎಸ್‌ಡಿಬಿ

ಸಿರುಗುಪ್ಪ ನಗರಕ್ಕೆ ಕುಡಿಯುವ ನೀರಿನ ಕೆರೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಮಾಡಿಸಲಾಗುವುದು.
ಎಂ.ಎಸ್‌. ಸೋಮಲಿಂಗಪ್ಪ, ಶಾಸಕ

ಆರ್‌. ಬಸವರೆಡ್ಡಿ ಕರೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next