ಸಿರುಗುಪ್ಪ: ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡಜನತೆಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಬಡಜನತೆಗೆ ಮಾಹಿತಿ ನೀಡಿ ಅವರಿಂದ ಅರ್ಜಿ ಪಡೆದು ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ಬಡಜನತೆ ಅಭಿವೃದ್ಧಿ ಹೊಂದಿ ಸರ್ಕಾರದ ಸೌಲಭ್ಯ ಸದ್ಬಳಕೆಯಾದಂತಾಗುತ್ತದೆ ಎಂದು ಅಧಿಕಾರಿಗಳಿಗೆ ಶಾಸಕ ಎಂ.ಎಸ್. ಸೋಮಲಿಂಗಪ್ಪ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ದೇವಮ್ಮ ಪಕ್ಕೀರಪ್ಪ ಅಧ್ಯಕ್ಷತೆಯಲ್ಲಿ ನಡೆದ ತ್ತೈಮಾಸಿಕ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದ ಕಳೆದ 20 ದಿನಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ. ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ನದಿ ಪಾತ್ರದ ಜಮೀನುಗಳಿಗೆ ನದಿ ನೀರು ನುಗ್ಗಿ ಬೆಳೆ ಸಂಪೂರ್ಣ ಹಾಳಾಗಿದ್ದು, ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ನಷ್ಟವಾದ ಬಗ್ಗೆ ವರದಿ ಸಲ್ಲಿಸದೇ ಇರುವುದರಿಂದ ಇದುವರೆಗೂ ಸರ್ಕಾರದಿಂದ ರೈತರಿಗೆ ಪರಿಹಾರ ದೊರೆಯಲು ಸಾಧ್ಯವಾಗಿಲ್ಲ.
ಶೀಘ್ರವಾಗಿ ಜಂಟಿ ಸಮೀಕ್ಷೆ ನಡೆಸಿ ಕೂಡಲೇ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಸಹಾಯಕ ಕೃಷಿ ಅಧಿಕಾರಿ ನಜೀರ್ ಅಹ್ಮದ್ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿ ವಿಶ್ವನಾಥರವರಿಗೆ ಸೂಚಿಸಿದರು.
ತಹಶೀಲ್ದಾರ್ ಎಸ್.ಬಿ. ಕೂಡಲಗಿ ಮಾತನಾಡಿ, ಅ. 27ರೊಳಗಾಗಿ ಬೆಳೆಹಾನಿಯಾದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ತಿಳಿಸಿದ್ದು, ಕೂಡಲೇ ಜಂಟಿ ಸಮೀಕ್ಷೆ ನಡೆಸಬೇಕೆಂದು ಹೇಳಿದರು. ಸಹಾಯಕ ಕೃಷಿ ಅಧಿಕಾರಿ ನಜೀರ್ ಅಹ್ಮದ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಷಾಷು, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಮಹಾಂತೇಶ ಮಾತನಾಡಿದರು.
ಉಪ್ಪಾರು ಹೊಸಳ್ಳಿ, ನಡಿವಿ, ಹಳೇಕೋಟೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಒಟ್ಟಾಗಿ ಮಾತನಾಡಿ, ನಮ್ಮ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ರಸ್ತೆಯಲ್ಲಿ, ಮನೆಗಳ ಮೇಲೆ ಹೋಗಿದ್ದು, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವುದರಿಂದ ಗ್ರಾಮಸ್ಥರು ನಮ್ಮ ಪಂಚಾಯಿತಿಗೆ ಬಂದು ಗಲಾಟೆಮಾಡುತ್ತಿದ್ದಾರೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೆ ನಿಮ್ಮ ಸ್ವಂತ ಖರ್ಚಿನಿಂದ ಈ ಕೆಲಸವನ್ನು ಮಾಡಿಸಿಕೊಳ್ಳಬೇಕು ನಾವು ಮಾಡಲು ಆಗುವುದಿಲ್ಲವೆಂದು ಹೇಳುತ್ತಿದ್ದಾರೆ.
ಒಂದು ಕಂಬ ಬದಲಾವಣೆಗೆ ಕನಿಷ್ಠ 5 ಸಾವಿರ ರೂ. ಖರ್ಚು ಬರುತ್ತಿದೆ. ಇದರಂತೆ ನಮ್ಮ ಹಳೇಕೋಟೆ ಗ್ರಾಮದಲ್ಲಿ 3 ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಿದ್ದು 15 ಸಾವಿರ ಖರ್ಚು ಬಂದಿದೆ ಎಂದು ಹಳೇಕೋಟೆ ಗ್ರಾಪಂ ಅಧಿ ಕಾರಿ ರಾಜೇಶ್ವರಿ ಸಭೆಗೆ ತಿಳಿಸಿದರು.
ಜೆಸ್ಕಾಂ ಇಲಾಖೆ ಅಧಿಕಾರಿ ಮಾತನಾಡಿ, ಈ ಬಗ್ಗೆ ನಮ್ಮ ಮೇಲಧಿಕಾರಿಗಳಿಗೆ ತಿಳಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇಂಥ ಸಮಸ್ಯೆಗಳ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು. ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆ ಅನುಪಾಲನಾ ವರದಿಗಳನ್ನು ವಿವರಿಸಿದರು. ಇ.ಒ. ಶಿವಪ್ಪ ಸುಬೇದಾರ್, ಜಿ.ಪಂ.ಸದಸ್ಯರಾದ ವಿ.ಲಕ್ಷ್ಮಮ್ಮ, ಕೋಟೆಶ್ವರ ರೆಡ್ಡಿ ಇದ್ದರು.