ಸಿರುಗುಪ್ಪ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ತಾಲೂಕಿನ 84 ಗ್ರಾಮಗಳಲ್ಲಿರುವ ನೂರಾರು ತೆರೆದ ಬಾವಿಗಳಲ್ಲಿ ನೀರು ಬತ್ತಿಹೋಗಿವೆ. ಆದರೆ ನಗರದ ಆದರ್ಶ ಶಾಲೆಯ ಪಕ್ಕದ ಪ್ರದೇಶದಲ್ಲಿರುವ ಜಿಗಳಾರ್ಥಿ ಬಾವಿಯು ಬಿರು ಬೇಸಿಗೆಯಲ್ಲಿಯೂ ಬತ್ತದೆ ನೀರಿರುವುದು ಅಚ್ಚರಿ ಮೂಡಿಸಿದೆ.
ಜಿಗಳಾರ್ಥಿ ಬಾವಿಯು ವಿಜಯನಗರ ವಾಸ್ತು ಶೈಲಿ ಹೋಲುತ್ತದೆ. ಈ ಬಾವಿಯು ಚೌಕಾಕಾರವಾಗಿದ್ದು, ಬಾವಿಗಿಳಿಯಲು ಅನುಕೂಲವಾಗುವಂತೆ ಮೆಟ್ಟಿಲು ನಿರ್ಮಿಸಿದ್ದು, ಕಪ್ಪು ಶಿಲೆ ಬಳಸಲಾಗಿದ್ದು, ನಕ್ಷತ್ರಾಕಾರದಲ್ಲಿ ನಿರ್ಮಾಣವಾಗಿದ್ದು, ಬಾವಿಯ ಗೋಡೆಯ ಮೇಲೆ ಗಣೇಶನ ಹಾಗೂ ನಾಗರಹಾವಿನ ಮತ್ಸಾ ಹಾಗೂ ಮಿಥುನ ಶಿಲ್ಪಗಳನ್ನು ಕೆತ್ತಿರುವುದನ್ನು ಕಾಣಬಹುದಾಗಿದೆ.
ಬಾವಿಯ ಪಕ್ಕದ ಕಲ್ಲಿನ ಗುಂಡಿನಲ್ಲಿ ಜಾನುವಾರುಗಳಿಗೆ ನೀರು ಕುಡಿಯಲು ಅನುಕೂಲವಾಗುವಂತೆ ಗುಂಡಿ ಕೆತ್ತಿರುವುದು ಕೂಡ ಇಲ್ಲಿನ ಬಾವಿಯ ನೀರನ್ನು ರೈತಾಪಿ ವರ್ಗದವರು ಹಾಗೂ ಜಾನುವಾರುಗಳಿಗೆ ಬಳಕೆಯಾಗುತ್ತಿತ್ತು ಎನ್ನುವುದು ತೋರಿಸುತ್ತದೆ.
ಈ ಬಾವಿಗೆ ಎಂದು ಬತ್ತದ ಬಾವಿ ಜಿಗಳಾರ್ಥಿ ಬಾವಿ ಎನ್ನುವ ಹೆಸರು ಮೊದಲಿನಿಂದಲೂ ಸಾರ್ವಜನಿಕರಲ್ಲಿ ಜನಜನಿತವಾಗಿದೆ. ಈ ಬಾರಿ ತಾಲೂಕಿನಲ್ಲಿ ಅತಿಹೆಚ್ಚಿನ ಬಿಸಿಲಿನ ಉಷ್ಣಾಂಶದಿಂದ ಕೊಳವೆ ಬಾವಿಗಳು ಮತ್ತು ವಿವಿಧ ಗ್ರಾಮಗಳಲ್ಲಿರುವ ನೀರಿನ ಬಾವಿಗಳು ಬತ್ತಿಹೋಗಿವೆ. ಆದರೆ ಈ ಬಾವಿಯಲ್ಲಿ ಸಮೃದ್ಧ ನೀರಿದ್ದು, 10 ಅಡಿಗೂ ಹೆಚ್ಚಿನ ಆಳದವರೆಗೂ ನೀರಿನ ಸಂಗ್ರಹವಿದೆ. ಈ ಭಾಗದಲ್ಲಿ ರೈತರು ಹಾಗೂ ಸಂಚಾರಿ ಕುರಿಗಾಹಿಗಳು ತಮ್ಮ ಕುರಿಗಳಿಗೆ ಈ ಬಾವಿಯ ನೀರನ್ನೇ ಕುಡಿಸುತ್ತಾರೆ.
ಈ ಬಾವಿಯಲ್ಲಿರುವ ಶುದ್ಧ, ತಿಳಿಯಾದ ನೀರು ಪಶು, ಪಕ್ಷಿ ಹಾಗೂ ಜಾನುವಾರುಗಳ ದಾಹ ತಣಿಸುತ್ತಿದೆ. ಸದ್ಯ ಬಾವಿಯಲ್ಲಿ ಸಂಗ್ರಹವಾಗಿರುವ ಅಲ್ಪಮಟ್ಟದ ಹೂಳನ್ನು ತೆಗೆಸಿದರೆ ನೀರಿನ ಸೆಲೆ ಹೆಚ್ಚಾಗಲು ಅನುಕೂಲವಾಗಲಿದೆ. ಇಲ್ಲಿನ ಜಮೀನಿನಲ್ಲಿ ಕಾರ್ಯನಿರ್ವಹಿಸುವ ರೈತರಿಗೂ ಹಾಗೂ ಸಾರ್ವಜನಿಕರಿಗೆ ಈ ನೀರು ಕುಡಿಯಲು ಉಪಯೋಗವಾಗಿದೆ.
ಪೂರ್ವ ಕಾಲದಲ್ಲಿ ದೂರದ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ತೆರಳಬೇಕಾಗಿತ್ತು. ದಾರಿಹೋಕರು ಇಲ್ಲಿಯೇ ತಮ್ಮ ದಾಹ ತೀರಿಸಿಕೊಳ್ಳುತ್ತಿದ್ದರೂ ಈ ಬಾವಿಯ ಕುರಿತು ಯಾವುದೇ ಶಿಲಾಶಾಸನಗಳಲ್ಲಿ ಉಲ್ಲೇಖ ಇಲ್ಲದಿರುವುದರಿಂದ ನಿಖರ ಮಾಹಿತಿಗಳು ದೊರೆತಿಲ್ಲ. ಇಂತಹ ಐತಿಹಾಸಿಕ ಬಾವಿಯನ್ನು ನಾವೆಲ್ಲರು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮದಾಗಿದೆ.
ಈ ಕುರಿತು ಪುರಾತತ್ವ ಇಲಾಖೆಯು ಸಂರಕ್ಷಿತ ಸ್ಮಾರಕವಾಗಿ ಘೋಷಿಸಿ ಮುಂದಿನ ಪೀಳಿಗೆಗೆ ರಕ್ಷಿಸುವ ಮೂಲಕ ಜಲ ಸಾಕ್ಷರತೆ ಮೂಡಿಸಬೇಕು.
•
ರಾಮಕೃಷ್ಣಯ್ಯ,
ಇತಿಹಾಸ ಸಂಶೋಧಕ.