ಸಿರುಗುಪ್ಪ: ತಾಲೂಕಿನಲ್ಲಿ ಅಂಗಡಿಗಳ ಬಾಗಿಲು ಮುಚ್ಚಿ ಮನೆ ಸೇರಿಕೊಂಡಿರುವ ಕ್ಷೌರಿಕರು ಸಂಕಷ್ಟದಲ್ಲಿ ದಿನದೂಡುವಂತಾಗಿದೆ. ಆದರೆ, ದಾಡಿ ಮತ್ತು ಕಟ್ಟಿಂಗ್ ಮಾಡಲು ಕನಿಷ್ಠ ಒಂದು ಗಂಟೆ ಗ್ರಾಹಕರ ಸಂಪರ್ಕವಿರುತ್ತದೆ. ಆದ್ದರಿಂದ ಸೋಂಕು ಹರಡುವ ಭೀತಿಗೆ ಕ್ಷೌರದ ಅಂಗಡಿಗಳಿಗೆ ಸರ್ಕಾರ ಪರವಾನಗಿ ನೀಡಿಲ್ಲ.
ತಾಲೂಕಿನಲ್ಲಿ ಸುಮಾರು 120ಕ್ಕೂ ಹೆಚ್ಚು ಕ್ಷೌರದ ಅಂಗಡಿಗಳಿದ್ದು, ಅವುಗಳ ಮೂಲಕ ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಕೇಂದ್ರ ಸರ್ಕಾರ ಕೋವಿಡ್ ಭೀತಿಯಿಂದ ಘೋಷಿಸಿದ ಲಾಕ್‌ಡಾನ್ ಮೊದಲ ದಿನದಿಂದ ಕ್ಷೌರದ ಅಂಗಡಿಗಳ ಬಾಗಿಲಿಗೆ ಬೀಗ ಹಾಕಿದ್ದು, ನಿತ್ಯದ ದುಡಿಮೆ ನಂಬಿದವರ ಬದುಕು ಇದೀಗ ಸಂಕಷ್ಟ ಎದುರಿಸುವಂತಾಗಿದೆ. ಸಾಮಾನ್ಯವಾಗಿ ಕನಿಷ್ಠ 500ರಿಂದ 1000 ರೂ. ದುಡಿಯುತ್ತಿದ್ದ ಕ್ಷೌರಿಕರಿಗೆ ಲಾಕ್‌ಡೌನ್‌ನಿಂದ ದೊಡ್ಡ ಹೊಡೆತ ಬಿದ್ದಿದೆ.
ನಿತ್ಯ ಸಂಸಾರ ನಡೆಸಲು ಕಷ್ಟದಾಯಕವಾಗಿದೆ. ನಗರಪ್ರದೇಶ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಒಂದೊಂದು ಅಂಗಡಿಯಲ್ಲಿ ಇಬ್ಬರಿಂದ ಮೂವರು ಕಾರ್ಮಿಕರು ಕೆಲಸ ಮಾಡುತ್ತಾರೆ. ಬಹುತೇಕ ಮಳಿಗೆಗಳಲ್ಲಿ ಕಾರ್ಮಿಕರು ತಾವು ದುಡಿದ ಹಣದಲ್ಲಿ ಅರ್ಧದಷ್ಟು ಸೆಲ್ಯೂನ್ ಮಾಲೀಕರಿಗೆ ನೀಡುತ್ತಿದ್ದರು. ಸದ್ಯ ಕಾರ್ಮಿಕರಾದಿಯಾಗಿ ಮಾಲೀಕರು ಲಾಕ್ ಡೌನ್ ಯಾವಾಗ ಮುಗಿಯುತ್ತದೆಂದು ಜಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.
ಅನೇಕರಿಗೆ ಮನೆಗೆ ಬಂದು ಕಟ್ಟಿಂಗ್ ಮಾಡುವಂತೆ ಗ್ರಾಹಕರಿಂದ ಕರೆ ಬರುತ್ತಿವೆ. ಆದರೆ ಕೊರೊನಾ ಸೋಂಕು ತಗಲುವ ಭೀತಿಯಿಂದ ಕ್ಷೌರಿಕರು ಗ್ರಾಹಕರ ಮನೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೋದ ಕೆಲವರು ಪೊಲೀಸರಿಂದ ಹೊಡೆತ ತಿಂದ ಉದಾಹರಣೆಗಳಿವೆ. ನಮ್ಮ ಕುಟುಂಬದಲ್ಲಿ 7ಜನ ಸದಸ್ಯರಿದ್ದೇವೆ. ಜೀವನ ಮಾಡುವುದು ಕಷ್ಟವಾಗಿದೆ. ನಿತ್ಯ 500-600 ರೂ. ಸಂಪಾದಿಸಿ ಅದರಲ್ಲೇ ಬದುಕುತ್ತಿದ್ದೇವು. ಅಂಗಡಿ ಬಾಗಿಲು ಮುಚ್ಚಿದ ಬಳಿಕ ಹೇಳಲಾರದಷ್ಟು ಕಷ್ಟವಾಗಿದೆ ಎಂದು ನಗರದ ಕ್ಷೌರಿಕ ನಾಗಪ್ಪ ತಿಳಿಸಿದ್ದಾರೆ.
ನಮ್ಮನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಲಾಗಿದೆ. ಆದರೆ ಅವರಿಗೆ ನೀಡುವ ಯಾವ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ. ಕಟ್ಟಡ ಕೂಲಿ ಕಾರ್ಮಿಕರಿಗೆ ಸರ್ಕಾರ 2 ಸಾವಿರ ರೂ.
ನೀಡುತ್ತಿದ್ದು, ನಮಗೂ ಈ ಸೌಲಭ್ಯ ನೀಡಿದರೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಕ್ಷೌರಿಕರ ಬದುಕು ಮತ್ತಷ್ಟು ಹದಗೆಡುತ್ತದೆ ಎಂದು ಕರೂರು ಗ್ರಾಮದ ಕ್ಷೌರಿಕ ವಿರುಪಾಕ್ಷಿ ತಿಳಿಸಿದ್ದಾರೆ.