ಶಿರಸಿ: ಜೀವ ಜಲ ಕಾರ್ಯಪಡೆಯ ನೇತೃತ್ವದಲ್ಲಿ ಪುನರುಜ್ಜೀವನಗೊಂಡ ಎರಡು ಎಕರೆ ಮೂರು ಗುಂಟೆ ಕ್ಷೇತ್ರದ ತಾಲೂಕಿನ ಕರಸುಳ್ಳಿ ಕೆರೆಯ ಸಮರ್ಪಣೆ ಸಮಾರಂಭ ಗುರುವಾರ ನಡೆಯಲಿದ್ದು, ಗ್ರಾಮಸ್ಥರು ಸಿದ್ದತೆ ನಡೆಸಿದ್ದಾರೆ.
ಬೆಳಗ್ಗೆ 11 ಕ್ಕೆ ಪ್ರಸಿದ್ಧ ಚಿತ್ರ ನಟ, ಗೋಲ್ಡನ್ ಸ್ಟಾರ್ ಗಣೇಶ್ ಕೆರೆಯನ್ನು ನಾಮಫಲಕ ಅನಾವರಣಗೊಳಿಸಿ ಉದ್ಘಾಟನೆ ನಡೆಸಲಿದ್ದಾರೆ. ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಹೇಮಾ ಹೆಬ್ಬಾರ್ ಅವರನ್ನು ಗ್ರಾಮಸ್ಥರ ಪರವಾಗಿ ಆತ್ಮೀಯವಾಗಿ ಸಮ್ಮಾನಿಸಲಾಗುತ್ತಿದೆ.
ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನು ವಿಸ್ತಾರ ಚಾನಲ್ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಆಡಲಿದ್ದಾರೆ. ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ವಿಸ್ತಾರ ಮೀಡಿಯಾದ ಎಂಡಿ ಎಚ್.ವಿ.ಧರ್ಮೇಶ, ಮೈಸೂರು ಮರ್ಕಂಟೈಲ್ ನ ಚೇರ್ ಮನ್ ಶ್ರೀನಿವಾಸ ಶೆಟ್ಟಿ, ಯಡಹಳ್ಳಿ ಗ್ರಾ.ಪಂ.ಸದಸ್ಯ ಕೇಶವ ಹೆಗಡೆ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಹಿರಿಯ ಸಹಕಾರಿ ದೇವರು ಭಟ್ ಕರಸುಳ್ಳಿ ವಹಿಸಿಕೊಳ್ಳಲಿದ್ದಾರೆ.
ಕಳೆದ 45 ದಿನಗಳಿಂದ ಕೆರೆಯನ್ನು ಅಭಿವೃದ್ದಿಗೊಳಿಸಲಾಗಿದೆ. ಅದರ ಉದ್ಘಾಟನೆ ಹಾಗೂ ಹೆಬ್ಬಾರ ಸಮ್ಮಾನ ಸಮಾರಂಭಕ್ಕೆ ಕರಸುಳ್ಳಿ ಕೆರೆ ಪ್ರದೇಶದಲ್ಲಿ ಸಂಭ್ರಮ ಮನೆ ಮಾಡಿದೆ.