Advertisement

Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ಪಡೆದು ಕಾಂಗ್ರೆಸ್‌ ಸರಕಾರದಿಂದ ಅಪರಾಧ: ಕಾಗೇರಿ

06:25 PM Oct 13, 2024 | Team Udayavani |

ಶಿರಸಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ ವಿವಿಧ ಘಟನೆಗಳಲ್ಲಿನ ಆರೋಪಿಗಳ ಮೇಲಿನ ಪೊಲೀಸ್ ಪ್ರಕರಣ ವಾಪಸ್ ಪಡೆದು ರಾಜ್ಯ ಕಾಂಗ್ರೆಸ್ ಸರಕಾರ ಅಪರಾಧ ಮಾಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

Advertisement

ಭಾನುವಾರ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತ ಬ್ಯಾಂಕ್ ಉಳಿಸಿಕೊಳ್ಳಲು ಮುಖ್ಯವಾಹಿನಿಗೆ ಅಲ್ಪ ಸಂಖ್ಯಾತರು ಬಾರದಂತೆ ಮಾಡುವ ಜೊತೆಗೆ ಪ್ರತ್ಯೇಕತೆ ಭಾವನೆ ಬೆಳೆಸುತ್ತಿದೆ. ಕಾಂಗ್ರೆಸ್ ನ ಈ ಷಡ್ಯಂತ್ರಕ್ಕೆ ಅಲ್ಪ ಸಂಖ್ಯಾತರು ಬಲಿಯಾಗಬಾರದು. ಕಾಂಗ್ರೆಸ್ ರಾಜಕಾರಣ ದೇಶಕ್ಕೆ ಮಿತಿ‌ ಮೀರಿ ಅಪಾಯವಾಗುವ ಸಾಧ್ಯವಿದೆ. ಹಿಂದುಗಳ ಬಗ್ಗೆ ಬೇರೆಯಾಗಿ, ಅಲ್ಪ ಸಂಖ್ಯಾತರ ಬಗ್ಗೆ ಮಾತನಾಡುವಾಗ ಇಡಿಯಾಗಿ ಮಾತನಾಡುತ್ತದೆ ಎಂದು ಆಕ್ಷೇಪಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರ 157 ಮಂದಿ ಮೇಲಿನ ದೊಂಬಿ, ಅಪರಾಧಿಗಳಿಗೆ‌ ನಾವಿದ್ದೇವೆ ಎಂಬ ಸ್ಪಷ್ಟ ಸಂದೇಶ ನೀಡಿ ಪ್ರಕರಣ ವಾಪಸ್ ಪಡೆದಿದೆ. ರಾಷ್ಟ್ರ ದ್ರೋಹಿಗಳಿಗೆ ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ, ಪೊಲೀಸರ ಜೀವಕ್ಕೇ ಕಂಟಕ ತಂದವರಿಗೂ ನೇರ ಬಲ ಕೊಟ್ಟಂತಾಗಿದೆ. ಕಾಂಗ್ರೆಸ್ ಗೆ ನ್ಯಾಯಾಂಗ, ಕಾನೂನು ಯಾವ ಅಂಶಕ್ಕೂ ಗಂಭೀರತೆ ಇಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲ. ಕಾಂಗ್ರೆಸ್ ದೇಶ ದ್ರೋಹಿಗಳಿಗೆ‌ ಬಲ ನೀಡುವ ಹೀನ ಸ್ಥಿತಿಗೆ ಇಳಿದಿದೆ.
ಸರಕಾರವಿದೆ, ಆಡಳಿತ ಇಲ್ಲ. ಭ್ರಷ್ಟಾಚಾರ‌ ಮಿತಿ ಮೀರಿದೆ, ಸರಕಾರೀಕರಣಗೊಳಿಸಿದೆ ಎಂದು‌ ಜರಿದರು.

ಮುಡಾ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಗಾಗಿ ಸಿಎಂ‌ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು.  ಸ್ವಾರ್ಥಕ್ಕಾಗಿ ಅಧಿಕಾರ ಬಳಸಿಕೊಳ್ಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಸರಿಯಾಗಿಲ್ಲ, ರಾಜ್ಯದ ಬೊಕ್ಕಸ ಬರಿದಾಗಿ ರಸ್ತೆಯ ಹೊಂಡ ತುಂಬಲೂ ಹಣವಿಲ್ಲದಂತೆ ಆಗಿದೆ. ಅತಿ‌ ಮಳೆಗೆ ಎಲ್ಲೆಡೆ ಹಾನಿಯಾಗಿದ್ದರೂ ಒಂದು‌ ರೂಪಾಯಿ ಪರಿಹಾರ ಇಲ್ಲ, ಅಭಿವೃದ್ಧಿ, ಮನೆ ಬಿದ್ದವರಿಗೂ ನೆರವಿಲ್ಲ ಎಂದು ಹೇಳಿದರು.

ಈ ವೇಳೆ ವಕ್ತಾರ ಸದಾನಂದ ಭಟ್ಟ, ನಗರಸಭೆ ಅಧ್ಯಕ್ಷೆ ಶರ್ಮಿಲಾ‌ ಮಾದನಗೇರಿ, ನಾಗರಾಜ ನಾಯ್ಕ, ಶ್ರೀಕಾಂತ ನಾಯ್ಕ, ಆನಂದ ಸಾಲೇರ, ರಮಾಕಾಂತ ಭಟ್ಟ, ನಂದನ ಸಾಗರ, ರವಿ ಶೆಟ್ಟಿ, ಮಂಜುನಾಥ ಭಂಡಾರಿ ಇತರರಿದ್ದರು‌.

Advertisement
Advertisement

Udayavani is now on Telegram. Click here to join our channel and stay updated with the latest news.

Next