Advertisement

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

02:20 PM Apr 19, 2024 | Team Udayavani |

ಎಪ್ರಿಲ್‌ನಲ್ಲಿ ಬೇಸಗೆ ರಜೆ ಬಂದ್ರೆ ಸಾಕು ಮೊದಲು ನೆನಪಾಗುವುದು ಅಜ್ಜಿ ಮನೆ.  ಈ ವೇಳೆಗೆ ಜಾತ್ರೆಗಳ ಕಲರವವೂ ಶುರುವಾಗುವುದು.

Advertisement

ಕರ್ನಾಟಕದ ಅತೀ ದೊಡ್ಡ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ನಮ್ಮ ಉತ್ತರ ಕನ್ನಡ ಜಿÇÉೆಯ ಶಿರಸಿಯಲ್ಲಿ 2 ವರ್ಷಗಳಿಗೊಮ್ಮೆ ಮುನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದು ಬರುತ್ತಿರುವ ಮಾರಿಕಾಂಬಾ ಜಾತ್ರೆ ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಲ್ಲಿ ನಡೆಯುತ್ತದೆ. ನಾನು ಎಂಟನೇ ತರಗತಿಯಲ್ಲಿದ್ದಾಗ ಬೇಸಗೆ ರಜೆಯಲ್ಲಿ ಈ ಜಾತ್ರೆ ಬಂದಿತ್ತು. ಶಿರಸಿಯಿಂದ ಜಾತ್ರೆಗೆ ಬನ್ನಿ ಎಂದು ಕರೆ ಬರುತ್ತಿತ್ತು. ಅಮ್ಮ ಫೋನ್‌ನಲ್ಲಿ ಮಾತನಾಡುವುದನ್ನು ನಾನು ಕೇಳಿಸಿಕೊಳ್ಳುತ್ತಿದ್ದೆ. ಅಮ್ಮನಿಗೆ ಜಾತ್ರೆಗೆ ಯಾವಾಗ ಹೋಗುವುದು ಎಂದು ದಿನಾ ಕೇಳುತ್ತಿದ್ದೆ. ಆದರೆ ಅಮ್ಮ ಜಾತ್ರೆ ಬಂದಾಗ ಎಲ್ಲರೂ ಕರೆಯುತ್ತಾರೆ. ಹಾಗಂತ ಎಲ್ಲದಕ್ಕೂ ಹೋಗೋದಕ್ಕೆ ಆಗುತ್ತಾ..ನಮಗೆ ಬಿಡುವಿಲ್ಲ ಎನ್ನುತ್ತಿದ್ದಳು.

ನನಗೆ ಶಿರಸಿ ಜಾತ್ರೆ ನೋಡುವ ಆಸೆ ಮಿತಿ ಮೀರಿ ಹೋಗಿತ್ತು. ಆ ಆಸೆಗೆ ತಣ್ಣೀರೆರಚುವ ಹಾಗೆ ಅಮ್ಮ ನೀಡುತ್ತಿದ್ದ ಉತ್ತರ ಬೇಸರ ಉಂಟು ಮಾಡುತ್ತಿತ್ತು. ಜತೆಗೆ ನನ್ನಣ್ಣ ಅವನ ಗೆಳೆಯರೊಂದಿಗೆ ಜಾತ್ರೆಗೆ ಹೋಗಿ ಬಂದು ಜಾತ್ರೆಯ ವರ್ಣನೆ ಮಾಡುತ್ತಿದ್ದ. ನಿಜ ಹೇಳ್ಳೋದಾದರೆ ನಾನು ಹೋಗಿಲ್ಲ  ಎನ್ನುವ ಬೇಸರಕ್ಕಿಂತ ಅಣ್ಣ ಹೋಗಿ ಬಂದು ವರ್ಣನೆ ಮಾಡುವುದು ಹೆಚ್ಚು ಬೇಸರ ಉಂಟು ಮಾಡುತ್ತಿತ್ತು.

ಪ್ರತೀ ದಿನ ಅದನ್ನೇ ನೆನಪಿಸಿಕೊಂಡು ಮಲಗುತ್ತಿದ್ದೆ. ಜಾತ್ರೆಗೆ ಹೋಗಬೇಕು ಅನ್ನುವ ಹಂಬಲದಿಂದ ಒಂದು ದಿನ ನಾನು ಮತ್ತು ನನ್ನ ಗೆಳತಿ ಮನೆಯಲ್ಲಿ ಯಾರಿಗೂ ಹೇಳದೆ ಹೊರಟೆವು. ಬ್ಯಾಗಿನಲ್ಲಿದ್ದ 110 ರೂ. ತೆಗೆದುಕೊಂಡು ಶಿರಸಿಯತ್ತ ಪ್ರಯಾಣ ಆರಂಭಿಸಿದೆವು. ಕಂಡೆಕ್ಟರ್‌ ಬಂದು ಟಿಕೆಟ್‌ ಟಿಕೆಟ್‌ ಎಂದಾಗ ಇದ್ದ 110 ರೂ.ನಲ್ಲಿ  80 ರೂ. ಬಸ್‌ಗೆ ಕೊಟ್ಟೆವು. ಉಳಿದದ್ದು ಬರೇ ಮೂವತ್ತು ರೂ. ಎನ್ನುವ ಅರಿವು ಆಗ ನಮಗಿರಲಿಲ್ಲ.

ಬಸ್‌ನ ಕಿಟಕಿಯ ಹೊರಗೆ ಕಣ್ಣಾಡಿಸುತ್ತಾ ಶಿರಸಿ ಬರುವುದನ್ನೇ ನೋಡುತ್ತಿದ್ದೆವು. ಅಂತೂ ಶಿರಸಿ ಬಂದೇಬಿಟ್ಟಿತು. ಬಸ್ಸಿಳಿದು ಜಾತ್ರೆ ನಡೆಯುವ ಜಾಗದ ದಾರಿ ಕೇಳುತ್ತಾ ಜಾತ್ರೆ ನಡೆಯುವಲ್ಲಿಗೆ ತಲುಪಿದೆವು. ಝಗಮಗಿಸುವ ಆ ಲೈಟ್‌ಗಳು, ಮನಸೆಳೆಯುತ್ತಿರುವ ವಿವಿಧ ಅಂಗಡಿಗಳು, ದೊಡ್ಡ ದೊಡ್ಡ ಜೋಕಾಲಿಗಳು ಎಲ್ಲೆಲ್ಲೂ ಕಾಣಿಸುತ್ತಿದ್ದವು. ಕಣ್ಮನವನ್ನು ಸೆಳೆಯುವ ಶಿರಸಿ ಜಾತ್ರೆಯನ್ನು ನೋಡಲು ಎರಡು ಕಣ್ಣುಗಳು ಸಾಲದಾಗಿತ್ತು.

Advertisement

ಜಾತ್ರೆ ಎಲ್ಲ ತಿರುಗಿ ತಿರುಗಿ ಹಸಿವು ಆರಂಭವಾಯಿತು. ಕಣ್ಮುಂದೆ ಇದ್ದ ಐಸ್‌ಕ್ರೀಂ ಅಂಗಡಿಗೆ ಹೋಗಿ ಬ್ಯಾಗಿನಲ್ಲಿದ್ದ ಹಣ ತೆಗೆದಾಗ ಕೇವಲ 30 ರೂ. ಇತ್ತು. ಆಗ ನಿಜವಾದ ಭಯ, ಆತಂಕ, ಹೊಟ್ಟೆ ಹಸಿವಿನ ವೇದನೆ, ಜಾತ್ರೆಯಲ್ಲಿ ಸುತ್ತಿದ ಕಾಲುನೋವು ಎಲ್ಲ ಒಟ್ಟಿಗೆ ಬಂದ ಹಾಗೆ ಅನುಭವ

ವಾಗತೊಡಗಿತು. ಯಾರಿಗೂ ಹೇಳಿ ಬಂದಿಲ್ಲ ಎನ್ನುವ ಆತಂಕ ಶುರುವಾಯಿತು. ಇರುವ 30ರೂ. ಯಲ್ಲಿ ಹೊಟ್ಟೆ ತುಂಬಿಸುವುದೋ, ಬಸ್‌ಗೆ ನೀಡುವುದೋ, ಬಸ್‌ಗೆ 30 ರೂ. ಸಾಕಾಗುವುದಿಲ್ಲ, ಇನ್ಯಾರನ್ನು ಕೇಳುವುದು ಎನ್ನುವ ಪ್ರಶ್ನೆಗಳು ಒಂದರ ಹಿಂದೆ ಒಂದು ಹುಟ್ಟಿಕೊಂಡಿತು.  ಹೊಟ್ಟೆ ಹಸಿವಿನಿಂದ ಕಣ್ಣಿನ ದೃಷ್ಟಿಯನ್ನು ಎಲ್ಲ ಅಂಗಡಿಯತ್ತ ಹರಿಸುವ ವೇಳೆಗೆ ಯಾವುದೋ ಒಂದು ಧ್ವನಿ ಕೇಳಿಸಿತು. ಎದ್ದೇಳು..ಹೊತ್ತಾಯಿತು. ನಿನಗೆ ಸಮಯದ ಪರಿವೇ ಇಲ್ಲ ಎಂದ ಹಾಗೆ ಕೇಳಿಸುತ್ತಿತ್ತು. ಕಣ್ಣು ಬಿಟ್ಟು ನೋಡಿದರೆ ಎದುರು ಅಮ್ಮ ನಿಂತಿದ್ದಳು. ಅಮ್ಮನ ಬೈಗುಳವನ್ನು ಕೇಳಿ ಇಷ್ಟು ಹೊತ್ತು ಕಂಡಿದ್ದೆಲ್ಲ ಬರೀ ಕನಸೇ ಎಂದುಕೊಳ್ಳುತ್ತಾ ನಸುನಕ್ಕು ಹಾಸಿಗೆ ಬಿಟ್ಟು ಮೇಲೆದ್ದೆ.

-ಜ್ಯೋತಿ ಪಾಟೀಲ್‌

ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next