Advertisement

Sirsi; ಸ್ವರ್ಣವಲ್ಲೀಯಲ್ಲಿ ಧರ್ಮ ಸಭೆ: ಆಲೋಕಯಾಂಬ‌ ಲಲಿತೇ ಗ್ರಂಥ ಬಿಡುಗಡೆ, ಉಪನ್ಯಾಸ

08:10 PM Feb 21, 2024 | Team Udayavani |

ಶಿರಸಿ: ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವುದು ದೊಡ್ಡದಲ್ಲ. ಅದು ಸಹಜಗುಣ. ಅಪಕಾರ ಮಾಡಿದವರಿಗೂ ಉಪಕಾರ ಬಯಸುವದು ಸಾಧು, ಸಂತರ ಗುಣ. ಅಂಥ ಸದ್ಗುಣ ಎಲ್ಲರೂ ಬೆಳಸಿಕೊಳ್ಳಬೇಕು ಎಂದು ಬೆಂಗಳೂರಿನ ಕೂಡ್ಲಿ ಶೃಂಗೇರಿ ಮಠದ ಶ್ರೀವಿದ್ಯಾವಿಶ್ವೇಶ್ವರ ಭಾರತೀ ಮಹಾ ಸ್ವಾಮೀಜಿಗಳು ನುಡಿದರು.

Advertisement

ಅವರು ಬುಧವಾರ ಸ್ವರ್ಣವಲ್ಲೀಯಲ್ಲಿ ನಡೆಯುತ್ತಿರುವ ಶಿಷ್ಯ ಸ್ವೀಕಾರ ಮಹೋತ್ಸವ ಮಹೋತ್ಸವದ ನಾಲ್ಕನೇ ದಿ‌ನ ನಡೆದ ಧರ್ಮ ಸಭೆಯಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.

ಯಾರ ಮೇಲೂ ಪ್ರತೀಕಾರದಿಂದ ಬದುಕಬಾರದು. ದುಃಖ ಬಿಟ್ಟು ಸಹನೆಯಾಗಿಸಿಕೊಳ್ಳುವುದನ್ನು ಬೆಳೆಸಿಕೊಳ್ಳಬೇಕು. ಈ ಪ್ರಕ್ರಿಯೆ ದೊಡ್ಡ ಅವಸ್ಥೆ. ಇದನ್ನು ಎಲ್ಲರೂ ಸಾಧಿಸಿಕೊಳ್ಳಬೇಕು ಎಂದರು. ಮನುಷ್ಯ ಆದವನು ಸದ್ಗುಣ ಬೆಳಸಿಕೊಳ್ಳಬೇಕು. ಇದರಿಂದ ವ್ಯಕ್ತಿ ದೈವತ್ವದ ಕಡೆಗೆ ಹೋಗುತ್ತಾನೆ. ತುಳಸಿದಾಸರೂ ಇದನ್ನೇ ಹೇಳಿದ್ದಾರೆ ಎಂದ ಅವರು, ಮಾನವ ಜನ್ಮದ ಮಹತ್ವದ ಅಂಶ ಭಗವತ್ ಸಾಕ್ಷಾತ್ಕಾರ ಎಂದರು. ಗುರುಗಳ ಮಾತಿನಲ್ಲಿ ವಿಶ್ವಾಸವಿಡುವುದೇ ಶ್ರದ್ಧೆ. ಯಜ್ಞ, ದಾನ, ತಪಸ್ಸು ಇವು ಮೂರನ್ನು ಆಚರಿಸುವುದರಿಂದ ಮನುಷ್ಯ ಜನ್ಮ ಪಾವನ ಎನಿಸಿಕೊಳ್ಳುತ್ತದೆ ಎಂದೂ ಹೇಳಿದರು.

ಶಿರಳಗಿ ಶ್ರೀರಾಜಾರಾಮ ಕ್ಷೇತ್ರದ ಶ್ರೀಬ್ರಹ್ಮಾನಂದ ಭಾರತೀ ಮಹಾ ಸ್ವಾಮೀಜಿ ಅವರು ನಿದಿಧ್ಯಾಸನ ಕುರಿತು ಉಪನ್ಯಾಸ‌ ನೀಡಿ, ನಾನು ಎನ್ನುವುದಕ್ಕೆ ಅಸ್ತಿತ್ವ ಇಲ್ಲ. ಅಭಿಮಾನದಿಂದ‌ ಜೀವನ, ಇದುವೇ ದುಃಖ. ಇದನ್ನು‌ ಬದಿಗೆ ಸರಿಸಿ ಕರ್ಮಯೋಗ ಮಾಡಬೇಕು. ಇದು ಸಾಧನೆಯ‌ ಮೊದಲ‌ ಮೆಟ್ಟಿಲು ಎಂದ ಅವರು, ತ್ಯಾಗದಲ್ಲಿ ಭಗವಂತ ಪ್ರಾಪ್ತಿ ಆಗುತ್ತದೆ. ತ್ಯಾಗದ ಮಹೋನ್ನತವಾದ ಆದರ್ಶ ಸಾರುವುದೇ ಸಂನ್ಯಾಸಾಶ್ರಮವಾಗಿದೆ ಎಂದರು.

ಮನಸ್ಸನ್ನು ಪ್ರಶಾಂತಗೊಳಿಸುವದೇ ಜ್ಞಾ‌ನ. ವಿಕಾರಗೊಳಿಸುವದೇ ಅಜ್ಞಾನ. ಆಧ್ಯಾತ್ಮ ಜೀವನದ‌ ಮೂಲಕ ಭಗವಂತನಲ್ಲಿ ಸೇರಲು ಯಾರು ಸಿದ್ಧರಿದ್ದಾರೋ ಅವರೇ ಧನ್ಯ ಪುರುಷರು. ಸ್ವರ್ಣವಲ್ಲೀ ಶ್ರೀಗಳು ಶಾಸ್ತ್ರದಲ್ಲಿ ಘ‌ನ ವಿದ್ವಾಂಸರು, ತಪಸ್ಸಿ‌ನ ಆಚರಣೆಯಲ್ಲಿ‌ ಕಠೋರ ನಿಷ್ಠರಾಗಿದ್ದಾರೂ ಎಲ್ಲರೊಡನೆ ವಿಶ್ವಾಸದಿಂದ ಮಾತನಾಡಿ ಭಕ್ತರ ಮನ ಗೆದ್ದಿದ್ದಾರೆ ಎಂದರು.

Advertisement

ಸಂಸದ ಅನಂತಕುಮಾರ ಹೆಗಡೆ, ನಮ್ಮ‌ ಮಠಕ್ಕೆ ಹೊಸ ಗುರುಗಳು ಬರುತ್ತಿದ್ದಾರೆ. ಇದೊಂದು‌ ಸಂಭ್ರಮದ ಕ್ಷಣ. ಇದನ್ನು ಭಕ್ತಿಯಿಂದ ಅನುಭವಿಸಬೇಕು. ವ್ಯಾಸ ಪೀಠಗಳ‌ ಅಮೃತ ವಾಹಿನಿ ಹರಿದು ಬರಲಿ. ಈ ಕಾರಣದಿಂದ ಹೆಚ್ಚು ಮಾತನಾಡುವದಿಲ್ಲ ಎಂದರು.

ಹೊಳೆ‌ನರಸಿಪುರದ ಅಧ್ಯಾತ್ಮ ಪ್ರಕಾಶದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಮಹಾ ಸ್ವಾಮೀಜಿ, ತುರವೇಕೆರೆ ಶ್ರೀಪ್ರಣವಾನಂದ ತೀರ್ಥ ಮಹಾಸ್ವಾಮೀಜಿಗಳು ಪಾಲ್ಗೊಂಡಿದ್ದರು‌.

ಯೋಗಾಚಾರ್ಯ ಕೆ.ಎಲ್.ಶಂಕರಾಚಾರ್ಯ ಜೋಯಿಸ್ ಯತಿ ಧರ್ಮ ಹಾಗೂ ಲೋಕ ಧರ್ಮದ ಕುರಿತು ಮಾತ‌ನಾಡಿದರು.

ಸಭೆಗೆ ದರ್ಶನ ಭಾಗ್ಯ ನೀಡಿದ ಸ್ವಾಮೀಜಿ!
ಇಡೀ ದಿ‌ನ ಬಿಡುವಿಲ್ಲದ‌ ಧಾರ್ಮಿಕ ಚಟುವಟಿಕೆಗಳ ನಡುವಿನಲ್ಲಿಯೂ ಸಹ ನೆರೆದಿದ್ದ ಭಕ್ತರ ಅಪೇಕ್ಷೆಯ ಮೇರೆಗೆ ಕೆಲ ಹೊತ್ತಾದರೂ ಸಭೆಯಲ್ಲಿ ದಿವ್ಯ ಸಾನ್ನಿಧ್ಯ ನೀಡುವ ಮೂಲಕ ಶ್ರೀಮಜ್ಜಗದ್ಗುರು ಶ್ರೀ ಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿಗಳು ಭಕ್ತರ ಅಭಿಲಾಷೆ ಪೂರ್ಣಗೊಳಿಸಿ ಧನ್ಯತಾ ಭಾವ ಸೃಷ್ಟಿಸಿದರು.

ಈ ವೇಳೆ ಮಾತನಾಡಿದ ಶ್ರೀಗಳು, ಇವತ್ತಿನ ಕಾರ್ಯ ಇವತ್ತೇ ಮಾಡಬೇಕಾದ ತ್ವರೆ ಇದೆ. ಹಾಗಾಗಿ ಸಭೆಗೆ ಬರುವ ಆಲೋಚನೆ ಇರಲಿಲ್ಲ. ಆದರೂ ಭಕ್ತರ, ಕಾರ್ಯಕರ್ತರ ಅಪೇಕ್ಷೆಯಂತೆ ಬಂದಿದ್ದೇವೆ. ಬೇಗ ತೆರಳುವದು ಅನಿವಾರ್ಯ ಆಗಿದೆ. ಆದರೆ, ಸಭೆಯಲ್ಲಿ ಮಾತನಾಡಿದ ಎಲ್ಲರ ಉಪನ್ಯಾಸ ದಾಖಲಿಸಲು ಹೇಳಿದ್ದು, ಆಲಿಸುವುದಾಗಿ ಕೂಡ ಹೇಳಿದರು.

ಮಹೇಶ ಭಟ್ಟ ಜೋಯಿಡಾ, ವಿದ್ಯಾನಂದ ಭಟ್ಟ ಸುಂಕಸಾಳ ವೇದಘೋಷ ಮಾಡಿದರು. ಯಲ್ಲಾಪುರ ಸೀಮೆಯ ಮಾತೆಯರು ಪ್ರಾರ್ಥಿಸಿದರು. ಎನ್.ಜಿ.ಹೆಗಡೆ ಭಟ್ರಕೇರಿ ಸ್ವಾಗತಿಸಿದರು. ಬಿಡುಗಡೆಗೊಂಡ ಆಲೋಕಯಾಂಬ ಲಲಿತೇ ಗ್ರಂಥದ ಕುರಿತು ಡಾ. ಶಂಕರ ಭಟ್ಟ ಉಂಚಳ್ಳಿ ಪರಿಚಯಿಸಿದರು. ಅನಂತ ಭಟ್ಟ ಹುಳಗೋಳ ವಂದಿಸಿದರು.ಡಾ. ವಿನಾಯಕ ಭಟ್ಟ ಗುಂಜಗೋಡ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next