ನಟಿ ರಮ್ಯಾ ತಮ್ಮ “ಆ್ಯಪಲ್ ಬಾಕ್ಸ್ ಸ್ಟುಡಿಯೋ’ ಬ್ಯಾನರ್ ಮೂಲಕ ನಿರ್ಮಿಸುತ್ತಿರುವ “ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಸದ್ಯ “ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದರ ನಡುವೆಯೇ ಚಿತ್ರತಂಡ ನಾಯಕಿ ಸಿರಿ ರವಿಕುಮಾರ್ ಅವರ ಪಾತ್ರದ ಫಸ್ಟ್‌ಲುಕ್ ಬಿಡುಗಡೆಗೊಳಿಸಿದೆ.
“ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ನಾಯಕಿ ಸಿರಿ ರವಿಕುಮಾರ್ “ಪ್ರೇರಣಾ’ ಎಂಬ ಮಧ್ಯಮ ವರ್ಗದ ಯುವತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಕ್ಯಾರೆಕ್ಟರ್ ಪೋಸ್ಟರ್‌ನಲ್ಲಿ ಸೀರೆಯುಟ್ಟು, ಕೈಯಲ್ಲೊಂದು ಫೈಲ್ ಹಿಡಿದು ನಿಂತಿರುವ ಮುಗ್ಧ ಯುವತಿಯಂತೆ ಸಿರಿ ರವಿಕುಮಾರ್ ಕಾಣಿಸಿಕೊಳ್ಳುತ್ತಿರುವ ಪ್ರೇರಣಾ ಎಂಬ ಪಾತ್ರವನ್ನು ಪರಿಚಯಿಸಲಾಗಿದೆ.
“ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್ ಬಿ. ಶೆಟ್ಟಿ ನಿರ್ದೇಶನದಲ್ಲಿ “ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಮೂಡಿಬರುತ್ತಿದ್ದು, ರಾಜ್ ಬಿ. ಶೆಟ್ಟಿಸಾಮಾಜಿಕ ಜಾಲತಾಣದಲ್ಲಿ ಸಿರಿ ರವಿಕುಮಾರ್ ಅವರ ಕ್ಯಾರೆಕ್ಟರ್ ಪೋಸ್ಟರ್ ಹಂಚಿಕೊಂಡಿದ್ದಾರೆ.
ಇನ್ನು ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ನಡುವೆಯೇ ನಿಧಾನವಾಗಿ “ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಪ್ರಚಾರ ಕಾರ್ಯಗಳಿಗೂ ಚಾಲನೆ ನೀಡಿರುವ ಚಿತ್ರತಂಡ, ಹೊಸ ವರ್ಷದ ಆರಂಭದಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಎನ್ನಲಾಗಿದೆ.