ಬೆಂಗಳೂರು: ಅಕ್ಕಿ, ಗೋಧಿಯ ಬಳಕೆ ಇಲ್ಲ, ಮೈದಾ ಹಿಟ್ಟು, ಕಡಲೆ ಹಿಟ್ಟು, ಹೆಸರು, ಬಟಾಣಿ, ಹುರುಳಿ ಬಳಕೆಯೇ ಇಲ್ಲ. ಆದರೂ, ಅಲ್ಲಿ ದೋಸೆಯಿದೆ, ಇಡ್ಲಿ ಇದೆ, ಚಕ್ಕುಲಿ, ಪಿಜ್ಜಾ, ಕೇಕ್, ಕುಕ್ಕಿಸ್, ಚಾಕೊಲೇಟ್, ಉಂಡೆ ಹೀಗೆ ವಿವಿಧ ಬಗೆಯ ತಿಂಡಿ ತಿನಿಸುಗಳು ಜಿಕೆವಿಕೆಯಲ್ಲಿ ನಡೆಯಲಿರುವ ಸಿರಿಧಾನ್ಯದ ಆಹಾರ ಮೇಳದಲ್ಲಿ ಸಿಗಲಿದೆ.
ಸಿರಿಧಾನ್ಯ ಆರೋಗ್ಯವಂತ ಸಮಾಜದ ಆಧಾರ ಸ್ತಂಭ. ರೈತರಿಗೆ ಮಾರುಕಟ್ಟೆ ಒದಗಿಸಲು ಹಾಗೂ ಸಿರಿಧಾನ್ಯ ಮಾರುಕಟ್ಟೆ ವಿಸ್ತರಣೆ, ಆರೋಗ್ಯಕರ ಜೀವನ ಶೈಲಿಗೆ ಸಿರಿಧಾನ್ಯಗಳ ಮಹತ್ವ ತಿಳಿಸುವ ಉದ್ದೇಶದಿಂದ ಈ ಬಾರಿ ಬೆಂಗಳೂರು ಕೃಷಿ ವಿವಿ ಆಯೋಜಿಸಿದ್ದ ಮೂರು ದಿನಗಳ ಕೃಷಿ ಮೇಳದಲ್ಲಿ ನ.18ರಂದು ಒಂದು ದಿನ “ಸಿರಿ ಧಾನ್ಯ ಆಹಾರ’ ಮೇಳವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.
ಸಿರಿಧಾನ್ಯ ಉತ್ಪನ್ನಗಳು: ಕೃಷಿ ಮೇಳದಲ್ಲಿ ನವೋದ್ಯಮಗಳಿಗೆ ಸಿರಿಧಾನ್ಯದ ಉಪ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಪ್ರತ್ಯೇಕ ವೇದಿಕೆ ಕಲ್ಪಿಸಲಾಗಿದೆ. ರಾಜ್ಯದ ಪ್ರಮುಖ ಸಿರಿಧಾನ್ಯ ಉತ್ಪನ್ನಗಳ ಮಾರಾಟ ಮಳಿಗೆ ಪ್ರದರ್ಶನದಲ್ಲಿ ಭಾಗವಹಿಸಲಿದೆ.
ಸಾಮೆ, ಊದಲು, ಕೊರಲು, ಬರಗು, ನವಣೆಯಂತಹ ವೈವಿಧಮಯ ಸಿರಿಧಾನ್ಯಗಳ ಖಾದ್ಯ ಮಳಿಗೆ ಆಹಾರ ಮೇಳದ ಕೇಂದ್ರ ಬಿಂದುವಾಗಿದೆ.
ಯಾವ ಯಾವ ಖಾದ್ಯಗಳಿವೆ!: ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ ವಿವಿಧೆಡೆಯಿಂದ ಆಗಮಿಸಿದ ಸಿರಿಧಾನ್ಯ ಉತ್ಪನ್ನಗಳ ಮಾರಾಟಗಾರರಿಗೆ ಉಚಿತ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮುಂಜಾನೆಯಿಂದ ಸಂಜೆ ವರೆಗೆ ಆಹಾರ ಮೇಳದಲ್ಲಿ ಸಿರಿಧಾನ್ಯದ ಪಕೋಡಾ, ಚಕ್ಕಲಿ, ಬಿಸ್ಕೇಟ್, ಚಾಕೊಲೇಟ್, ಪಿಜ್ಜಾ, ಕೇಕ್, ಪೇಸ್ಟರಿ, ನಿಪ್ಪಟ್ಟು, ರಾಗಿ ಲಡ್ಡು, ಸಿಹಿ ತಿನ್ನಿಸು, ಪಕೋಡಾ, ಮಸಾಲೆ ವಡೆ, ದೋಸೆ, ಪಲಾವ್, ಉಪ್ಪಿಟ್ಟು, ಹಲ್ವಾ, ಅಂಬಲಿ, ಕೇಸರಿ ಬಾತ್, ಉಂಡೆ, ಜಾಮೂನ್, ಕಿಚಡಿ, ಬμì ಸೇರಿ ನಾನಾ ಬಗೆಯ ತಿನಿಸುಗಳು ಸಿರಿಧಾನ್ಯ ಆಹಾರ ಮೇಳದಲ್ಲಿ ಇರಲಿದೆ. ಸಿರಿಧಾನ್ಯ-ಪ್ರಯೋಜನ?: ಜೋಳ, ರಾಗಿ, ಸಜ್ಜೆ, ನವಣೆ, ಬರಗು, ಕೊರಲೆ, ಸಾಮೆ, ಊದಲು, ಹಾರಕ ಇವೇ 9 ಸಿರಿ ಧಾನ್ಯಗಳು. ಇವುಗಳಲ್ಲಿ ಅಧಿಕ ನಾರಿನಾಂಶ ಮತ್ತು ಪೋಷಕಾಂಶ, ಖನಿಜಾಂಶಗಳಿವೆ. ರಕ್ತದೊತ್ತಡ, ಮಧುಮೇಹ, ಬೊಜ್ಜು, ಮಲಬದ್ಧತೆ, ಅಂಡಾಶಯ ಸಮಸ್ಯೆ, ಮುಟ್ಟಿನ ಸಮಸ್ಯೆ, ನರ ದೌರ್ಬಲ್ಯ, ಮೂಛೆì ರೋಗ, ರಕ್ತ ಹೀನತೆ, ಲಿವರ್, ಕಿಡ್ನಿ ಸಮಸ್ಯೆ, ಜೀರ್ಣಾಂಗದ ಸಮಸ್ಯೆ, ಹೃದ್ರೋಗ, ಕ್ಯಾನ್ಸರ್ ಸೇರಿದಂತೆ ಹತ್ತಾರು ಬಗೆಯ ಆರೋಗ್ಯ ಸಮಸ್ಯೆಗಳಿಗೆ ಈ ಧಾನ್ಯಗಳಲ್ಲಿ ಪರಿಹಾರವಿದೆ. ನೇರವಾಗಿ ಸಿರಿಧಾನ್ಯ ಸೇವಿಸಲು ಇಚ್ಛಿಸಿದವರು ಉಪ ಉತ್ಪನ್ನಗಳ ಇಷ್ಟಪಟ್ಟು ತಿನ್ನುತ್ತಾರೆ ಎಂದು ಜಿಕೆವಿಕೆ ಅಧಿಕಾರಿಗಳು ಮಾಹಿತಿ ನೀಡಿದರು.
2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ ಮಾಡಲಾಗಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಮಾರುಕಟ್ಟೆ ಒದಗಿಸಲು ಹಾಗೂ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿರಿಧಾನ್ಯ ಆಹಾರ ಮೇಳ ಆಯೋಜಿಸಲಾಗಿದೆ.
● ಡಾ.ಉಷಾ ರವೀಂದ್ರ, ಸಿರಿಧಾನ್ಯ ಆಹಾರ ಮೇಳದ ಸಂಯೋಜಕಿ, ಜಿಕೆವಿಕೆ ಬೆಂಗಳೂರು.
-ತೃಪ್ತಿ ಕುಮ್ರಗೋಡು