ಸಿರವಾರ: ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಸೂಕ್ತ ಗ್ರಂಥಾಲಯ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರ ಜ್ಞಾನಾರ್ಜನೆಗೆ ತೊಂದರೆಯಾಗುತ್ತಿದೆ. ರಾಜ್ಯ ಸರ್ಕಾರ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಓದಲು ಸುಸಜ್ಜಿತ ಗ್ರಂಥಾಲಯ ನಿರ್ಮಿಸಲು ಕೋಟ್ಯಂತರ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಪಟ್ಟಣ ಗ್ರಾಪಂಯಿಂದ ಪಟ್ಟಣ ಪಂಚಾಯತಿಯಾಗಿದೆ. ಮಾತ್ರವಲ್ಲದೇ ನೂತನ ತಾಲೂಕಾಗಿ ಘೋಷಣೆಯಾದರು ಅನೇಕ ವರ್ಷಗಳಿಂದ ಗ್ರಂಥಾಲಯ ವ್ಯವಸ್ಥೆ ಇಲ್ಲದಿರುವುದು ಓದುಗರಿಗೆ ನಿರಾಶೆಯಾಗಿದೆ.
ಕಟ್ಟಡ ಕೊರತೆ: ಪಟ್ಟಣದ ಅಂಚೆ ಕಚೇರಿ ಹತ್ತಿರವಿದ್ದ ಗ್ರಂಥಾಲಯವನ್ನು ಕಳೆದ 4 ತಿಂಗಳ ಹಿಂದೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ನೆಲಸಮಗೊಳಿಸಲಾಗಿತು. ನಂತರ ವಿದ್ಯಾನಗರ ಶಾಲೆ ಕೊಠಡಿಗೆ ಗ್ರಂಥಾಲಯ ಸ್ಥಳಾಂತರಿಸಲಾಗಿದೆ. ಆದರೆ ಸೂಕ್ತ ಕಟ್ಟಡದ ವ್ಯವಸ್ಥೆ ಇಲ್ಲದಂತಾಗಿದೆ.
ನಿವೇಶನ ಕೊರತೆ: ಪ್ರಸ್ತುತ ನೂತನ ಗ್ರಂಥಾಲಯದ ಕಟ್ಟಡಕ್ಕೆ ಎಸ್ ಸಿಪಿಟಿಎಸ್‌ಪಿ ಯೋಜನೆಯಡಿ 30 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಕಟ್ಟಡಕ್ಕೆ ಸೂಕ್ತ ನಿವೇಶನ ಸಿಗದಂತಾಗಿದೆ. ಈ ಕುರಿತು ಪಟ್ಟಣ ಪಂಚಾಯತಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಇನ್ನೂ ನಿವೇಶನ ಹುಡುಕುತ್ತಲೇ ಇದ್ದಾರೆ.
ಸೌಕರ್ಯ ಸಮಸ್ಯೆ: ಗ್ರಂಥಾಲಯದ ಮೇಲ್ಛಾವಣೆ ಬಿರುಕು ಬಿಟ್ಟಿದ್ದು, ಮಳೆ ಬಂದರೆ ಸೋರುತ್ತದೆ. ಅದರಲ್ಲಿಯೂ ಸರಿಯಾದ ಗಾಳಿ, ಬೆಳಕಿನ ವ್ಯವಸ್ಥೆಯಿಲ್ಲದೆ ಓದುಗರಿಗೆ ಪೂರಕ ವಾತವರಣವಿಲ್ಲದಂತಾಗಿ ಓದುಗರ ಸಂಖ್ಯೆ ನೆಲಕ್ಕೆ ಕುಸಿದಿದೆ.
ಪುಸ್ತಕ-ಸಾಮಗ್ರಿ ಮೂಲೆಗುಂಪು: ಪ್ರಸ್ತುತ ಕಟ್ಟಡದಲ್ಲಿ ಸ್ಥಳದ ಅಭಾವವಿದೆ. ಹಾಗಾಗಿ ಗಂಥಾಲಯಕ್ಕೆ ನೀಡಿದ ಸಾವಿರಾರೂ ಪುಸ್ತಕಗಳು, ಝರಾಕ್ಸ್ ಬಳಕೆಯಾಗದೇ ಮೂಲೆಗುಂಪಾಗಿವೆ. ಇದರಿಂದಾಗಿ ಓದುಗರಿಗೆ ಬೇಕಾದ ಪುಸ್ತಕಗಳು ಸಿಗದಂತಾಗಿ ನಿರುಪಯುಕ್ತವಾಗಿವೆ.
ವೇತನಕ್ಕೆ ಮನವಿ: ಗ್ರಂಥಾಲಯ ಪ್ರಾರಂಭವಾದಾಗ ಗ್ರಂಥಪಾಲಕರಿಗೆ ಮೊದಲು 300 ರೂ. ವೇತನ ನೀಡಲಾಗುತ್ತಿತ್ತು. ಪ್ರಸ್ತುತ 7000 ರೂ. ಸಂಬಳ ನೀಡಲಾಗುತ್ತಿದೆ. ಅದು ಪ್ರತಿ ತಿಂಗಳ ಸರಿಯಾಗಿ ಬರುವುದಿಲ್ಲ. ಇದರಿಂದಾಗಿ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. ಸರ್ಕಾರ
ತಿಂಗಳಿಗೆ 13,300 ರೂ. ವೇತನ ನೀಡಲು ಆದೇಶ ಹೊರಡಿಸಿದೆ. ಅದು ಇನ್ನು ನ್ಯಾಯಲಯದಲ್ಲಿದೆ. ಹಾಗಾಗಿ ಗ್ರಂಥಾಪಾಲಕರು ಹೆಚ್ಚಿನ ವೇತನಕ್ಕಾಗಿ ಪರಿತಪ್ಪಿಸುವಂತಾಗಿದೆ.