Advertisement

ಕಾಲೇಜಿಗೆ ಹೋಗಲು ಕಾಲ್ನಡಿಗೆ ಅನಿವಾರ್ಯ

06:25 PM Jan 29, 2020 | Naveen |

ಸಿರುಗುಪ್ಪ: ಕೊಂಚಿಗೇರಿ, ಸಿದ್ದರಾಮಪುರ, ದಾಸಾಪುರ, ಸಿಂದಿಗೇರಿ, ಕ್ಯಾದಿಗಿಹಾಳ್‌, ಗುಂಡಿಗನೂರು, ಹಾವಿನಾಳು, ಮುದ್ದಟನೂರು ಮುಂತಾದ ಗ್ರಾಮಾಂತರ ಪ್ರದೇಶಗಳಿಂದ ವಿದ್ಯಾರ್ಥಿಗಳು ತಾಲೂಕಿನ ಸಿರಿಗೇರಿ ಗ್ರಾಮದ ಹೊರವಲಯದಲ್ಲಿರುವ ಪದವಿಪೂರ್ವ ಕಾಲೇಜಿಗೆ ಪ್ರತಿನಿತ್ಯವೂ ಕಾಲ್ನಡಿಗೆಯೇ ಗತಿಯಾಗಿದೆ.

Advertisement

ಗ್ರಾಮದಿಂದ ಮೂರು ಕಿ.ಮೀ ದೂರದಲ್ಲಿ ಕಂಪ್ಲಿ-ಮುದ್ದಟನೂರು ರಸ್ತೆಯ ಪಕ್ಕದಲ್ಲಿರುವ ಕಾಲೇಜಿಗೆ ಸುಮಾರು 120 ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಆದರೆ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಓಡಾಡುತ್ತಿರುವ ಸರ್ಕಾರಿ ಬಸ್‌ಗಳಲ್ಲಿ ಹತ್ತುವಂತಿಲ್ಲ. ಏಕೆಂದರೆ ಕಾಲೇಜು ಹತ್ತಿರ ಬಸ್‌ ನಿಲುಗಡೆಯ ಅನುಮತಿಯನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನೀಡಿಲ್ಲದ ಕಾರಣ ಯಾವುದೇ ಸರ್ಕಾರಿ ಬಸ್‌ ಕಾಲೇಜು ಹತ್ತಿರ ನಿಲ್ಲಿಸುತ್ತಿಲ್ಲ. ಇದರಿಂದಾಗಿ ಕಾಲ್ನಡಿಗೆಯಲ್ಲಿಯೇ ಪ್ರತಿನಿತ್ಯ ವಿದ್ಯಾರ್ಥಿಗಳು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕಾಲೇಜು ಹತ್ತಿರ ಯಾವುದೇ ಸರ್ಕಾರಿ ಬಸ್‌ ನಿಲ್ಲಿಸದ ಕಾರಣ ಗ್ರಾಮದವರೇ ಆದ ಜಿ.ಪಂ ಸದಸ್ಯೆ ರತ್ನಮ್ಮ ಅಡಿವೆಯ್ಯಸ್ವಾಮಿ ಮತ್ತು ತಾ.ಪಂ ಸದಸ್ಯ ರೇಣುಕಪ್ಪ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳನ್ನು ಟ್ರ್ಯಾಕ್ಟರ್‌ ಮೂಲಕ ಕಾಲೇಜು ಪ್ರಾರಂಭವಾದ ಮೂರು ತಿಂಗಳವರೆಗೆ ಕರೆದುಕೊಂಡು ಹೋಗಿ ಕಾಲೇಜಿಗೆ ಬಿಟ್ಟು, ಕಾಲೇಜು ಮುಗಿದ ನಂತರ ಗ್ರಾಮಕ್ಕೆ ಕರೆದುಕೊಂಡು ಬರುತ್ತಿದ್ದರು. ಆದರೆ ಟ್ರ್ಯಾಕ್ಟರ್‌ ಚಾಲಕರು ಮತ್ತು ಡೀಸೆಲ್‌ ಸಮಸ್ಯೆಯಿಂದ ಈ ಇಬ್ಬರು ಜನಪ್ರತಿನಿ ಧಿಗಳು ಟ್ರ್ಯಾಕ್ಟರ್‌ ಓಡಿಸುವುದನ್ನು ನಿಲ್ಲಿಸಿರುವುದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತೆರಳಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಕಾಲೇಜು ಹತ್ತಿರವೇ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಬಸ್‌ಗಳು ಸಂಚರಿಸುತ್ತವೆ. ಆದರೆ ಬಸ್‌ ನಿಲುಗಡೆಗೆ ಅನುಮತಿ ಇಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳನ್ನು ಬಸ್‌ನಲ್ಲಿ ಹತ್ತಿಸಿಕೊಳ್ಳಲು ಚಾಲಕ ಮತ್ತು ನಿರ್ವಾಹಕರು ನಿರಾಕರಿಸುತ್ತಿದ್ದಾರೆ. ಇಲ್ಲಿ ಸರ್ಕಾರಿ ಬಸ್‌ ನಿಲುಗಡೆಗೆ ಅನುಮತಿಯನ್ನು ತಮ್ಮ ಇಲಾಖೆಯ ಮೇಲಾಧಿ ಕಾರಿಗಳು ನೀಡಿದರೆ ಮಾತ್ರ ಬಸ್‌ ನಿಲ್ಲಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸರ್ಕಾರಿ ಬಸ್‌ಗಳ ಚಾಲಕ ಮತ್ತು ನಿರ್ವಾಹಕರು.

ಕಾಲೇಜು ಸಮೀಪ ಸರ್ಕಾರಿ ಬಸ್‌ ನಿಲುಗಡೆಯಾಗದಿರುವುದರಿಂದ ನಿತ್ಯವೂ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಬರಲು ಅನಾನುಕೂಲವಾಗುತ್ತಿದೆ. ಆದ್ದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸರ್ಕಾರಿ ಬಸ್‌ ನಿಲ್ಲಿಸಲು ಸಾರಿಗೆ ಅಧಿಕಾರಿ ಗಳು ಕ್ರಮ ಕೈಗೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲ ವಿಶ್ವನಾಥಗೌಡ ತಿಳಿಸಿದ್ದಾರೆ.

ಪ್ರತಿನಿತ್ಯ ಕಾಲೇಜಿಗೆ ಹೋಗಿಬರಲು 6 ಕಿಮೀ ನಡೆದುಕೊಂಡು ಹೋಗಬೇಕಾಗಿದೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ನಡೆದುಕೊಂಡು ಹೋಗುವುದರಿಂದ ವಿದ್ಯಾಭ್ಯಾಸಕ್ಕೆ ಕಷ್ಟವಾಗುತ್ತದೆ. ಅಲ್ಲದೆ ಗ್ರಾಮಕ್ಕೆ ತೆರಳುವ ಬಸ್‌ಗಳು ಸಮಯಕ್ಕೆ ಸರಿಯಾಗಿ ದೊರೆಯುವುದಿಲ್ಲ, ನಮ್ಮ ಈ ಸಮಸ್ಯೆಗೆ ಕಾಲೇಜು ಹತ್ತಿರ ಬಸ್‌ ನಿಲುಗಡೆ ಮಾಡುವುದೊಂದೆ ಪರಿಹಾರವಾಗಿದೆ ಎಂದು ವಿವಿಧ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ತಿಳಿಸಿದ್ದಾರೆ.

Advertisement

ಕಾಲೇಜು ಹತ್ತಿರ ಬಸ್‌ ನಿಲುಗಡೆ ಮಾಡಲು ಸ್ಥಳೀಯ ಜನಪ್ರತಿನಿಧಿಗಳು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ನಂತರ ಪರಿಶೀಲನೆ ನಡೆಸಿ ಬಸ್‌ ನಿಲುಗಡೆಗೆ ಕ್ರಮ
ಕೈಗೊಳ್ಳಲಾಗುವುದು.
. ತಿರುಮಲೇಶ್‌,
ಡಿಪೋ ಮ್ಯಾನೇಜರ್‌, ಸಿರಗುಪ್ಪ.

„ಆರ್‌.ಬಸವರೆಡ್ಡಿ ಕರೂರ

Advertisement

Udayavani is now on Telegram. Click here to join our channel and stay updated with the latest news.

Next