ಸಿರುಗುಪ್ಪ: ತಾಲೂಕಿನಲ್ಲಿ ಮಳೆಗಾಲದಲ್ಲಿ ಜನರಿಗೆ ನೀರಿನ ಕೊರತೆ ಉಂಟಾಗಿದ್ದು, ಜನರಿಗೆ ನೀರು ಪೂರೈಕೆ ಮಾಡುವ ನೀರಿನ ಮೂಲಗಳು ಖಾಲಿಯಾಗಿರುವುದರಿಂದ ಜನ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಚನ್ನಪಟ್ಟಣ, ದೊಡ್ಡರಾಜುಕ್ಯಾಂಪ್, ಸಿರಿಗೇರಿ, ಕರೂರು, ಕೆ.ಬೆಳಗಲ್ಲು, ಹಳೇಕೋಟೆ, ಬಿ.ಎಂ.ಸೂಗೂರು ಹಳೇಕೆರೆ, ಹೆಚ್.ಹೊಸಳ್ಳಿ ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಬಹುಗ್ರಾಮ ಕೆರೆಗಳಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿದ್ದು, ಈ ಗ್ರಾಮಗಳಲ್ಲಿ ಬೋರ್‌ವೆಲ್ ನೀರನ್ನು ಜನ ಬಳಸುವ ಅನಿವಾರ್ಯತೆ ನಿರ್ಮಾಣವಾಗಿದೆ.
ಅಗಸನೂರು, ಮುದೇನೂರು, ಬಂಡ್ರಾಳ್, ಕೆ.ಸೂಗೂರು, ಉಪ್ಪಾರಹೊಸಳ್ಳಿ, ತಾಳೂರು, ಬೂದುಗುಪ್ಪ, ಬೊಮ್ಮಲಾಪುರ, ರಾವಿಹಾಳ್, ಶ್ರೀಧರಗಡ್ಡೆ, ಕೊತ್ತಲಚಿಂತೆ, ಎ.ಕೆ.ಹಾಳು ಮುಂತಾದ ಗ್ರಾಮಗಳಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಕೆರೆಗಳಲ್ಲಿರುವ ನೀರು 10 ರಿಂದ 15ದಿನಗಳಲ್ಲಿ ಖಾಲಿಯಾಗುವ ಹಂತದಲ್ಲಿವೆ. ರಾರಾವಿ, ಬಗ್ಗೂರು, ನಾಡಂಗ, ಬಿ.ಎಂ.ಸೂಗೂರು, ಬೀರಳ್ಳಿಯಲ್ಲಿರುವ ಕೆರೆಗಳಲ್ಲಿ ಸಂಗ್ರಹವಿರುವ ನೀರು ಒಂದು ವಾರಕ್ಕಾಗುವಷ್ಟು ಮಾತ್ರ ಸಂಗ್ರಹವಿದೆ. ತಾಲೂಕಿನಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಕೆರೆಗಳಲ್ಲಿ ಸಂಗ್ರಹವಾಗಿದ್ದ ನೀರು ಇಲ್ಲಿಯವರೆಗೆ ಜನರಿಗೆ ಪೂರೈಕೆ ಮಾಡಲು ಸಾಧ್ಯವಾಗಿದ್ದು, ಕೆಲವು ಕೆರೆಗಳಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿರುವುದರಿಂದ ಬೋರ್‌ವೆಲ್ ನೀರನ್ನು ಜನರಿಗೆ ಪೂರೈಕೆ ಮಾಡಲಾಗುತ್ತಿದೆ.
ಆದರೆ ತಾಲೂಕಿನಾದ್ಯಂತ ಸಮರ್ಪಕವಾಗಿ ಮಳೆಯಾಗದ ಕಾರಣ ತುಂಗಭದ್ರ ನದಿ ಮತ್ತು ವೇದಾವತಿ ಹಗರಿನದಿ, ದೊಡ್ಡ ಹಳ್ಳ, ಗರ್ಜಿಹಳ್ಳದಲ್ಲಿಯೂ ನೀರು ಸಂಪೂರ್ಣವಾಗಿ ಬತ್ತಿ ಹೋಗಿರುವುದರಿಂದ ತುಂಗಭದ್ರ ನದಿ ದಂಡೆಯಲ್ಲಿರುವ ನಡಿವಿ 14ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಹಾಗೂ ಕೆಂಚನಗುಡ್ಡ, ದೇಶನೂರು, ಹಚ್ಚೊಳ್ಳಿ, ಮಾಟೂರು, ಚಳ್ಳೆಕೂಡ್ಲೂರು, ಶ್ರೀಧರಗಡ್ಡೆ, ಹೊನ್ನಾರಹಳ್ಳಿ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿಯುವ ನೀರಿನ ಮೂಲವಾಗಿರುವ ತುಂಗಭದ್ರ ನದಿಯಲ್ಲಿ ನೀರು ಬತ್ತಿರುವುದರಿಂದ ನದಿ ದಂಡೆಯಲ್ಲಿರುವ ಗ್ರಾಮಗಳ ಜನರು ನೀರಿಗಾಗಿ ಪರದಾಡುವುದು ಸಾಮಾನ್ಯವಾಗಿದೆ.
ಅಲ್ಲದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಯಲ್ಲಿ ಬರುವ ಕೊಂಚಿಗೇರಿ, ದಾಸಾಪುರ, ನಾಗರಹಾಳು, ಅಲಬನೂರು, ಟಿ.ರಾಂಪುರ, ತಾಳೂರು, ಊಳೂರು, ಭೈರಾಪುರ, ಗೋಸ್ಬಾಳು, ಬಂಡ್ರಾಳ್ ಗ್ರಾಮಗಳಲ್ಲಿ ಈಗಾಗಲೇ ನೀರಿನ ಕೊರತೆ ಉಂಟಾಗಿದ್ದು, ಬೋರ್‌ವೆಲ್ ನೀರೆ ಅನಿವಾರ್ಯವಾಗಿದೆ.
ತಾಲೂಕಿನಲ್ಲಿರುವ ಬಹುತೇಕ ಕೆರೆಗಳಲ್ಲಿ ನೀರು ಖಾಲಿಯಾಗಿದ್ದು, ಕೆಲವು ಕೆರೆಗಳಲ್ಲಿ ಇನ್ನೂ 10ರಿಂದ 15ದಿನ ಸಾಕಾಗುವಷ್ಟು ನೀರು ಮಾತ್ರ ಸಂಗ್ರಹವಿದ್ದು, ಸದ್ಯ ಕೆರೆಗಳನ್ನು ತುಂಬಿಸಲು ಕಾಲುವೆಗೆ ನೀರು ಬಿಟ್ಟರೆ ಅನುಕೂಲವಾಗುತ್ತದೆ. ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಬಳಕೆ ನೀರನ್ನು ಬೋರ್‌ವೆಲ್ ಮೂಲಕ ನೀಡಲಾಗುತ್ತಿದೆ. ಕೆಲವು ಬೋರ್‌ವೆಲ್ಗಳು ಬತ್ತಿಹೋಗಿದ್ದು, ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎ.ಇ.ಇ. ಪಕ್ಕೀರಸ್ವಾಮಿ ತಿಳಿಸಿದ್ದಾರೆ.