ಸಿರುಗುಪ್ಪ: ತಾಲೂಕಿನಲ್ಲಿ ಹರಿಯುವ ಎಲ್ಎಲ್ಸಿ ಕಾಲುವೆಗೆ ತುಂಗಭದ್ರಾ ಜಲಾಶಯದಿಂದ ನೀರು ಹರಿಸಿದ್ದು, ಎಲ್ಎಲ್ಸಿ ಕಾಲುವೆಯ ಅಚ್ಚುಕಟ್ಟು ಪ್ರದೇಶ ಮತ್ತು ತುಂಗಭದ್ರಾ ನದಿ, ವೇದಾವತಿ ಹಗರಿನದಿ, ದೊಡ್ಡಹಳ್ಳದಲ್ಲಿ ನೀರು ಹರಿಯುತ್ತಿದ್ದು ಕೃಷಿ ಚಟುವಟಿಕೆ ಜೋರಾಗಿ ನಡೆದಿವೆ. ಇದರಿಂದಾಗಿ ಭತ್ತದ ಸಸಿಮಡಿಗಳನ್ನು ಮಾಡಿದವರಿಗೆ, ಸಸಿ ನಾಟಿಮಾಡುವ ಮತ್ತು ಸಸಿ ಕೀಳುವ ಕೂಲಿಯಾಳುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಎಲ್ಎಲ್ಸಿ ಕಾಲುವೆ, ತುಂಗಭದ್ರಾ ಮತ್ತು ವೇದಾವತಿ ಹಗರಿನದಿ, ದೊಡ್ಡಹಳ್ಳದಲ್ಲಿ ಹರಿಯುವ ನೀರನ್ನು ಬಳಸಿಕೊಂಡು ಸುಮಾರು 31ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ ಈ ಬಾರಿ ತುಂಗಭದ್ರಾ, ವೇದಾವತಿ ಹಗರಿ ನದಿ, ಎಲ್ಎಲ್ಸಿ ಕಾಲುವೆ, ದೊಡ್ಡಹಳ್ಳದಲ್ಲಿ ನೀರು ತಡವಾಗಿ ನೀರು ಹರಿಯುತ್ತಿರುವುದರಿಂದ ಸದ್ಯ ತಾಲೂಕಿನಾದ್ಯಂತ 3838 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ.
ಮಳೆ ಅಭಾವದ ನಡುವೆಯೂ ಭತ್ತ ಬೆಳೆಯುವ ಅಚ್ಚುಕಟ್ಟು ಪ್ರದೇಶದ ಹೊಲಗದ್ದೆಗಳಲ್ಲಿ ಭತ್ತದ ನಾಟಿ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಗದ್ದೆಗಳಲ್ಲಿ ನಾಟಿಮಾಡುವ ಮಹಿಳೆಯರು ಮತ್ತು ನಾಟಿಗೆ ಬೇಕಾದ ಸಸಿ ಕೀಳುವ ಗಂಡಸರ ಗುಂಪು ಜಮೀನುಗಳಲ್ಲಿ ಕಂಡುಬರುತ್ತಿದ್ದಾರೆ.
31ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದರೂ ಇಷ್ಟು ಪ್ರದೇಶಕ್ಕೆ ನಾಟಿಮಾಡಲು ಬೇಕಾದ ಭತ್ತದ ಸಸಿಯನ್ನು ತಾಲೂಕಿನ ರೈತರು ಬೆಳೆಯದ ಕಾರಣ ಈಗ ಭತ್ತದ ಸಸಿಗೆ ಬೇಡಿಕೆ ಹೆಚ್ಚಾಗಿದ್ದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳೆದ ಸಸಿಯನ್ನು ಕೊಂಡು ತಂದು ನಾಟಿ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಜಲಾಶಯದಲ್ಲಿ ಈ ವರ್ಷ ನೀರು ತುಂಬುತ್ತವೊ ಇಲ್ಲವೋ ಎನ್ನುವ ಆತಂಕದಲ್ಲಿ ತಾಲೂಕಿನಲ್ಲಿ ಬೋರ್‌ವೆಲ್ ಹೊಂದಿದ ರೈತರು ಮಾತ್ರ ಸಸಿಮಡಿಗಳನ್ನು ಬೆಳೆಸಿದ್ದು, ಭತ್ತದ ಸಸಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಒಂದು ಸೆಂಟ್ಸ್ ಸಸಿಗೆ ರೂ. 1500ರಿಂದ ರೂ.2500ರ ವರೆಗೆ ಮಾರಾಟ ವಾಗುತ್ತಿದ್ದು, ಸಸಿ ಬೆಳೆಸಿದ ರೈತರು ಈ ವರ್ಷ ಬಂಪರ್ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಕಾಲುವೆ ವ್ಯಾಪ್ತಿಯ ರೈತರಿಗೆ ಸಸಿ ಬೆಳೆಯಲು ನೀರು ಸಿಗದ ಕಾರಣ ಕಾಲುವೆ ನೀರಿನ ರೈತರು ಸಸಿ ಮಡಿಗಳನ್ನು ಬೆಳೆಸಿಲ್ಲ. ಇದರಿಂದಾಗಿ ಸಸಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಾಲೂಕಿನಲ್ಲಿ ಇಲ್ಲಿಯವರೆಗೆ ಸುಮಾರು 3838 ಹೆಕ್ಟೇರ್‌ನಲ್ಲಿ ಭತ್ತದ ನಾಟಿಕಾರ್ಯ ಮುಗಿದಿದೆ. ವೇದಾವತಿ ಹಗರಿನದಿ ಮತ್ತು ದೊಡ್ಡಹಳ್ಳ, ಗರ್ಜಿಹಳ್ಳದಲ್ಲಿ ನೀರು ಹರಿಯುತ್ತಿರುವ ಕಾರಣ ಈ ಭಾಗದಲ್ಲಿಯೂ ನಾಟಿಕಾರ್ಯ ಪ್ರಾರಂಭವಾಗಿದೆ ಎಂದು ತಾ. ಸಹಾಯಕ ಕೃಷಿ ನಿರ್ದೇಶಕರ ನಜೀರ ಅಹ್ಮದ್ ತಿಳಿಸಿದ್ದಾರೆ.