ಇಂಗ್ಲೆಂಡಿನ ಮಧ್ಯಕಾಲೀನ ಹೀರೋಗಳ ಪೈಕಿ ಸರ್ ವಾಲ್ಟರ್ ರ್ಯಾಲಿಯೂ ಒಬ್ಬ. ಈತ ಪರಮಸಾಹಸಿ, ಮಹಾಸೇನಾನಿ, ವೀರ, ಆದರ್ಶವ್ಯಕ್ತಿ, ಅಪರಿಮಿತ ದೇಶಪ್ರೇಮಿ, ಸಾಧಕ, ಕವಿ ಎಲ್ಲವೂ ಆಗಿದ್ದವನು. ಇಂಥವನು, ಅರಮನೆಯ ರಾಜವಂಶಕ್ಕೆ ಸೇರಿದ ಕನ್ಯೆಯೊಬ್ಬಳನ್ನು ಪ್ರೇಮಿಸಿ ವಿವಾಹವಾದನೆಂಬ ಕಾರಣಕ್ಕೆ, ಎಲಿಜಬೆತ್ ರಾಣಿಯ ಕೆಂಗಣ್ಣಿಗೆ ಗುರಿಯಾಗಿ, ಟವರ್ ಆಫ್ ಲಂಡನ್ನವ ಸೆರೆಮನೆಯಲ್ಲಿ ಬಂಧಿಯಾಗಬೇಕಾಯಿತು.
ಎಲಿಜಬೆತ್ ರಾಣಿ ಕೂಡ ರ್ಯಾಲಿಯನ್ನು ಗುಪ್ತವಾಗಿ ಪ್ರೀತಿಸಿದ್ದಳು; ಹಾಗಾಗಿಯೇ ಆತ ಬೇರೊಬ್ಬಳ ಕೈಹಿಡಿದದ್ದನ್ನು ಸಹಿಸದೆ ಆತನಿಗೆ ಸೆರೆ ವಿಧಿಸಿದಳು ಎಂಬ ಅರ್ಥದ ಲಾವಣಿಗಳು ಇಂಗ್ಲೆಂಡಿನಲ್ಲಿ ಜನಜನಿತವಾಗಿದ್ದವು. ಒಂದಷ್ಟು ಕಾಲ ಸರಿದ ಮೇಲೆ, ರ್ಯಾಲಿಯನ್ನು ಜೈಲಿನಿಂದ ಬಿಡುಗಡೆಗೊಳಿಸಿದ ರಾಣಿ, ಆತನ ಶೌರ್ಯ-ಸಾಹಸಗಳಿಗೆ ತಕ್ಕ ರೀತಿಯಲ್ಲಿ ಸನ್ಮಾನಿಸಿ, ಕೈಗೆ ಒಂದಷ್ಟು ಕಾಸು ಕೊಟ್ಟು, ಆತನನ್ನು ಹೊಸ ಭೂಪ್ರದೇಶಗಳ ಅನ್ವೇಷಣೆಗಾಗಿ ಕಳಿಸಿದಳು.
ನಂತರದ ದಿನಗಳಲ್ಲಿ, ರ್ಯಾಲಿಗೆ ಮತ್ತೂಂದು ಅಗ್ನಿಪರೀಕ್ಷೆ ಎದುರಾಯಿತು. ಎಲಿಜಬೆತ್‌ಳ ಕಾಲವಾದ ಮೇಲೆ ಇಂಗ್ಲೆಂಡನ್ನು ಜೇಮ್ಸ್ ಎಂಬ ರಾಜ ಆಳಿದ. ಆತನನ್ನು ಹೊಡೆದುರುಳಿಸಿ, ಮತ್ತೂಬ್ಬನನ್ನು ಸಿಂಹಾಸನಕ್ಕೆ ತರುವ ಯತ್ನ ಗುಪ್ತವಾಗಿ ನಡೆದಿದೆ ಮತ್ತು, ಅದರ ನೇತೃತ್ವ ರ್ಯಾಲಿಯದ್ದೇ ಎಂಬ ಗುಮಾನಿ ಹತ್ತಿ ಜೇಮ್ಸ್, ರ್ಯಾಲಿಯನ್ನು ಮತ್ತೆ ಲಂಡನ್ ಗೋಪುರದಲ್ಲಿ ಬಂಧಿಯಾಗಿಟ್ಟ- ಒಂದಲ್ಲ, ಎರಡಲ್ಲ, 13 ವರ್ಷ! ದೇಶಕ್ಕಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದ ವ್ಯಕ್ತಿಗೆ, ಇದಕ್ಕಿಂತ ದೊಡ್ಡ ಅವಮಾನ ಯಾವುದಿದ್ದೀತು? ರ್ಯಾಲಿ ಸೆರೆಯಲ್ಲಿದ್ದಾಗ ಕ್ಷೌರಿಕ ಬಂದನಂತೆ. ಅದಾಗಲೇ ರ್ಯಾಲಿಯ ಮುಖದಲ್ಲಿ ಉದ್ದಕ್ಕೆ ಗಡ್ಡ ಮೀಸೆಗಳು ಬೆಳೆದಿದ್ದವು. ಸುರಸುಂದರಾಂಗನಾಗಿದ್ದ ರ್ಯಾಲಿ, ಇಲ್ಲಿ ರೋಗಿಷ್ಟನಂತೆ ಆಗಿಬಿಟ್ಟಿದ್ದ. ನಿರಂತರ ಜೈಲುವಾಸ, ಅಪಮಾನ ಅವನ ವ್ಯಕ್ತಿತ್ವದ ಮೇಲೆ ಅಳಿಸಲಾಗದಂಥ ಗೀರುಗಾಯಗಳನ್ನು ಮಾಡಿದವು ಎನ್ನಬಹುದು.
ನಾನು ಕ್ಷೌರ ಮಾಡಿಸಿಕೊಳ್ಳುವುದಿಲ್ಲ ಎಂದು ಕ್ಷೌರಿಕನಿಗೆ ಖಡಾಖಂಡಿತವಾಗಿ ಹೇಳಿಬಿಟ್ಟ ರ್ಯಾಲಿ. ಯಾಕೆ ಬುದ್ಧಿ? ನಿಮ್ಮ ಮುಖ ಗುರುತಿಗೆ ಸಿಗದಷ್ಟು ಬದಲಾಗಿಬಿಟ್ಟಿದೆ. ಗಡ್ಡ ಹೆರೆದು ನಿಮ್ಮನ್ನು ಸ್ವಚ್ಛ ಮಾಡುತ್ತೇನೆ ಎಂದು ಕ್ಷೌರಿಕ ಹೇಳಿದಾಗ ರ್ಯಾಲಿ ಹೇಳಿದನಂತೆ: ಇದು ನನ್ನ ತಲೆ ಎಂಬ ಅಧಿಕಾರವನ್ನು ಎಂದೋ ಬಿಟ್ಟುಕೊಟ್ಟಿದ್ದೇನೆ. ಇಂಗ್ಲೆಂಡಿನ ರಾಜ ಇದು ತನ್ನದು ಎಂದುಕೊಂಡಿದ್ದಾನೆ. ಇಂದೋ ನಾಳೆಯೋ ಇದನ್ನು ಅವನು ಶಾಶ್ವತವಾಗಿ ತೆಗೆದುಕೊಂಡರೂ ತೆಗೆದುಕೊಂಡನೇ. ನನ್ನದಲ್ಲದ ವಸ್ತುವಿನ ವಿಷಯದಲ್ಲಿ ನಾನ್ಯಾಕೆ ದುಗ್ಗಾಣಿ ಖರ್ಚು ಮಾಡಬೇಕು? ಹಾಗಾಗಿ ಈ ಮುಖಕ್ಕೆ ಯಾವ ಉಪಚಾರ, ಅಲಂಕಾರವನ್ನೂ ನಾನು ಮಾಡಿಸುವುದಿಲ್ಲ. ದುರ್ದೈವಕ್ಕೆ ರ್ಯಾಲಿಯ ಭಯ ಕೊನೆಗೂ ನಿಜವಾಗಿಯೇಬಿಟ್ಟಿತು. ಆತ ಸೆರೆವಾಸದಲ್ಲಿ ಇದ್ದಾಗಲೇ ಅದೊಂದು ದಿನ ರಾಜನ ಆದೇಶ ಬಂತು. ಜೈಲುಹಕ್ಕಿಯ ತಲೆಯನ್ನು ಸೈನಿಕರು ಕತ್ತಿಯಿಂದ ಒಂದೇಟಿಗೆ ಹಾರಿಸಿ ಆಜ್ಞಾಪಾಲನೆ ಮಾಡಿದರು.
-ರೋಹಿತ್ ಚಕ್ರತೀರ್ಥ