Advertisement

ಸರ್. ಎಂ.ವಿ.ಯವರ 162ನೇ ಜನ್ಮ ದಿನಾಚರಣೆ:ಭವ್ಯ ಭಾರತದ ಕನಸುಗಾರ, ಅಪ್ರತಿಮ ತಾಂತ್ರಿಕ ತಜ್ಞ

10:09 AM Sep 15, 2022 | Team Udayavani |

ಯಾವುದೇ ಕೆಲಸ ಕೀಳಲ್ಲ, ನಿನ್ನ ಕೆಲಸ ಈ ರಸ್ತೆಯ ಭಾಗವನ್ನು ಗುಡಿಸುವುದಾಗಿದ್ದರೆ ಅದನ್ನು ಈ ಜಗತ್ತಿನ ಅತ್ಯಂತ ಸ್ವಚ್ಛ ರಸ್ತೆಯಾಗುವಂತೆ ಗುಡಿಸು. ಅದೃಷ್ಟ ಅನ್ನುವುದು ದೇವರ ಕೈಯಲ್ಲಿ ಭಾರತದ ಭಾಗ್ಯಶಿಲ್ಪಿ ಭಾರತರತ್ನ ಸರ್‌.ಎಂ.ವಿ. ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ , ಉಡುಪಿ ನಿಷ್ಕ್ರಿಯವಾಗಿರುವ ಸಾಧನವಲ್ಲ.

Advertisement

ನಮ್ಮ ಗುರಿ, ನಮ್ಮ ವಿಧಿ, ಮನುಷ್ಯನ ಕೈಯಲ್ಲಿರುವ ಸಾಧನ’’ ಎಂದು ಬಲವಾಗಿ ಪ್ರತಿಪಾದಿಸಿ ನಂಬಿ ನಡೆದ ಮಹಾನ್‌ ಸಾಧಕ ವ್ಯಕ್ತಿ ಮೋಕ್ಷ ಗುಂಡಂ ವಿಶ್ವೇಶ್ವರಯ್ಯನವರು. ಇಂತಹ ಮಹಾನ್‌ ಸಾಧಕ ಪುರುಷನ ಬದುಕು, ಸಾಧನೆ, ಚಿಂತನೆಗಳನ್ನು ಮನನ ಮಾಡಿ ಮುನ್ನಡೆಯುವ ಸುದಿನವೇ ಎಂಜಿನಿಯರ್ ದಿನಾಚರಣೆ ಅಂದರೂ ತಪ್ಪಾಗಲಾರದು.

* ನಾವಿಂದು ತಂತ್ರಜ್ಞಾನ, ಮಾಹಿತಿರಂಗದ ತುತ್ತತುದಿಯಲ್ಲಿ ಬದುಕುತ್ತಿರಬಹುದು. ಆದರೆ ಇದರ ಬಲವಾದ ಬೇರು ಸರ್‌. ಎಂ.ವಿ. ಅಂಥವರ ಚಿಂತನೆ, ಪರಿಶ್ರಮ ಸಾಧನೆಯ ಮೂಲದಲ್ಲಿ ಅಡಗಿದೆ ಅನ್ನುವುದನ್ನು ಎಂದೂ ಮರೆಯುವಂತಿಲ್ಲ . ಸರ್‌.ಎಂ.ವಿ. ಅವರ ಸಮಯ ಪ್ರಜ್ಞೆ, ದೂರದರ್ಶಿತ್ವ, ಪ್ರಾಮಾಣಿಕ ದುಡಿಮೆ ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯವಾಗಬೇಕು. ಅವರ ಮೊಂಬತ್ತಿಯ ಕತೆ ಇಂದಿಗೂ ಜನಜನಿತವಾಗಿದೆ.

ವಿದ್ಯುತ್‌ಚ್ಛಕ್ತಿಯೇ ಇಲ್ಲದ ಆ ಕಾಲದಲ್ಲಿ ರಾತ್ರಿ ಮೊಂಬತ್ತಿಗಳನ್ನು ಬಳಸಲಾಗುತ್ತಿತ್ತು. ಸರಕಾರಿ ಸೇವೆಯಲ್ಲಿ ಈ ಮೊಂಬತ್ತಿಗಳನ್ನು ಹೇಗೆ ಬಳಸಬೇಕು ಅನ್ನುವುದಕ್ಕೆ ಸಾಕ್ಷಿಯಾಗಿ ಸರಕಾರದ ಕೆಲಸ ಮಾಡುವ ಹೊತ್ತಿನಲ್ಲಿ ಮಾತ್ರ ಸರಕಾರದಿಂದ ಪಡೆದ ಮೊಂಬತ್ತಿಯನ್ನು ಬಳಸಿ, ಅನಂತರ ಅದನ್ನು ಆರಿಸಿ ಜೋಪಾನವಾಗಿ ಇಡುತ್ತಿದ್ದರು ಹೊರತು ಅದನ್ನು ತಮ್ಮ ಸ್ವಂತ ಕೆಲಸಕ್ಕಾಗಿ ಎಂದೂ ಬಳಸಿಕೊಂಡವರು ಅವರಲ್ಲ ಎನ್ನುವುದು ಅವರ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿ. ಇಂದು ನಾವು ಸರಕಾರಿ ಸೇವೆಯನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದೇವೆ ಅನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಂದರ್ಭವೂ ಹೌದು.

* 1906ರಲ್ಲಿ ಬ್ರಿಟಿಷರ ಆಡಳಿತದ ಕಾಲ. ಆ ಕಾಲದಲ್ಲಿ ಯಮೇನ್‌ ದೇಶದ ಏಡನ್‌ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿತ್ತು. ಇದನ್ನು ಮನಗಂಡ ಅಂದಿನ ಅಲ್ಲಿಯ ಸರಕಾರ ಸರ್‌. ಎಂ.ವಿ. ಅವರನ್ನು ಅಲ್ಲಿಗೆ ವಿಶೇಷವಾಗಿ ಆಹ್ವಾನಿಸಿ, ಕುಡಿಯುವ ನೀರಿಗೊಂದು ಪರಿಹಾರ ನೀಡಬೇಕೆಂದು ವಿನಂತಿಸಿಕೊಂಡಿತು. ಗುಡ್ಡ ಬೆಟ್ಟಗಳಿಂದ ಸುತ್ತುವರಿದ ಏಡನ್‌ ನಗರದಲ್ಲಿ ಸುರಿದ ಮಳೆ, ಮರಳು ಭೂಮಿಯಲ್ಲಿ ಇಂಗಿ ಹೋಗುತ್ತಿತ್ತು. ಈ ಸ್ಥಿತಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ ಸರ್‌. ಎಂ.ವಿ. ಅವರು ಈ ಇಂಗಿ ಹೋದ ನೀರು ಎಲ್ಲಿಗೆ ಹೋಗಿ ಶೇಖರಣೆಯಾಗುತ್ತಿದೆ ಅನ್ನುವುದರ ಮೂಲವನ್ನು ಹುಡುಕಿದಾಗ ಸುಮಾರು 18 ಮೈಲುಗಳ ದೂರದಲ್ಲಿ ನೆಲದಾಳದಲ್ಲಿ ನೀರಿನ ನಿಧಿ ಶೇಖರಣೆಯಾಗಿರುವುದನ್ನು ಗುರುತಿಸಿ; ಅದನ್ನು ಕುಡಿಯುವ ನೀರಿನ ಬಳಕೆಗೆ ಬಳಸಿಕೊಳ್ಳುವ ಕಾರ್ಯಯೋಜನೆಯನ್ನು ರೂಪಿಸಿ ಕೊಟ್ಟ ಹೆಗ್ಗಳಿಕೆ ಸರ್‌. ಎಂ.ವಿ. ಅವರದ್ದು . ಇಂದಿಗೂ ಏಡನ್‌ ನಗರದ ಜನ ನಮ್ಮ ಸರ್‌.ಎಂ.ವಿ. ಅವರನ್ನು ಸದಾ ನೆನಪಿಸಿಕೊಳ್ಳುತ್ತಿದ್ದಾರೆ. ಇದು ಅವರ ದೂರದರ್ಶಿತ್ವದ ಸಂಶೋಧನಾ ಕಾರ್ಯದ ಹೆಗ್ಗುರುತು.

Advertisement

* ಸರ್‌.ಎಂ.ವಿ. ಅವರ ಕೊಡುಗೆ ಚಿಂತನೆ, ಪ್ರಾಮಾಣಿಕತನ ಎಂದಿಗಿಂತ ಇಂದು ಹೆಚ್ಚು ಪ್ರಸ್ತುತತೆ ಪಡೆದುಕೊಳ್ಳಬೇಕಾಗಿದೆ. ಬೆಂಗಳೂರಿನಂತಹ ಮಹಾನಗರ ಪ್ರದೇಶಗಳಲ್ಲಿ ಇಂದಿಗೂ ಕುಡಿಯುವ ನೀರಿಗೆ ಹಾಹಾಕಾರವಿದೆ. ಮಾತ್ರವಲ್ಲ ಮಳೆ ಬಂತು ಅಂದರೆ ಇಡೀ ನಗರ ಜàವನವೇ ಅಸ್ತವೆಸ್ತವಾಗುವ ಪರಿಸ್ಥಿತಿ.
ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ನಾವೇಕೆ ಸೋತಿದ್ದೇವೆ ಅನ್ನುವುದನ್ನು ನಮ್ಮ ಘನ ಸರಕಾರಗಳು

ಇಂಜಿನಿಯರ್ಗಳು ಮರು ಮನನ ಮಾಡಬೇಕಾಗಿದೆ. ಅಂದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಂದಿಗಿಂತ ಇಂದು ಭಾರೀ ಮುಂದಿದ್ದೇವೆ. ಆದರೆ ಪ್ರಾಮಾಣಿಕತನದ ಮಾನವಿಯತೆಯ ದುಡಿಮೆಯಲ್ಲಿ ಭಾರೀ ಹಿಂದಿದ್ದೇವೆ ಅನ್ನುವುದನ್ನು ಸಾಬೀತುಪಡಿಸುವಂತಿದೆ ಇಂದಿನ ನಮ್ಮ ಯೋಜನಾ ಕಾರ್ಯಗಳು.

* 1909ರಲ್ಲಿ ಸರ್‌. ಎಂ.ವಿ. ಅವರು ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್‌ ಆಗಿ ಕೆಲಸಕ್ಕೆ ನಿಯುಕ್ತಿಗೊಂಡರು. ಅಂದು ಅವರ ಇಲಾಖೆಗೆ ನೇಮಕಗೊಂಡಿದ್ದ ಅರ್ಹತೆ ಹೇಗಿತ್ತು ಅಂದರೆ ‘ಹಿರಿಯ ಅಧಿಕಾರಿಗಳ ಸಂಬಂಧಿಕರೇ, ಅವರ ಇಲಾಖೆಗೆ ನೇಮಕಗೊಂಡಿದ್ದರು. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಸರ್‌.ಎಂ.ವಿ. ಅವರು ಈ ನೇಮಕಾತಿ ಪಟ್ಟಿಯನ್ನು ತಿರಸ್ಕರಿಸಿ, ತಮ್ಮ ಇಲಾಖೆಗೆ ಕೇವಲ ಅರ್ಹತೆ ಮತ್ತು ವಿದ್ಯಾರ್ಹತೆಯ ಮೇಲೆ ನೇಮಕ ಮಾಡಿ ತಮ್ಮ ದಕ್ಷತೆ, ಪ್ರಾಮಾಣಿಕತನಕ್ಕೆ ಸರ್‌ ಎಂ.ವಿ. ಅವರು ಸಾಕ್ಷಿಯಾದರು.’ ಅಂದರೆ ಇಂತಹ ನಡೆ-ನಿರ್ಧಾರ ಇಂದಿನ ನಮ್ಮ ಸರಕಾರಿ ವ್ಯವಸ್ಥೆಯಲ್ಲಿ ಇದೆಯಾ ಅನ್ನುವುದನ್ನು ನಾವು ಪ್ರತಿಯೊಬ್ಬರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

* ಭಾರತದ ಭಾಗ್ಯಶಿಲ್ಪಿ ಸರ್‌.ಎಂ.ವಿ. ಅವರದು ಸಾಧನೆಯ ಮಹಾಪೂರವೂ ಹೌದು. ದಿವಾನರಾಗಿದ್ದ ಕಾಲದಲ್ಲಿ ಅವರ ಮುತುವರ್ಜಿಯಲ್ಲಿ ಸ್ಥಾಪಿತವಾದ ಪ್ರತಿಯೊಂದು ಸಂಸ್ಥೆ , ಉದ್ಯಮ ಇಂದು ಬೆಳೆದು ಹೆಮ್ಮರವಾಗಿ ನಿಂತಿವೆ. ಇದು ಈ ನಾಡಿನ ಅಭಿವೃದ್ಧಿಯ ಹೆಗ್ಗುರುತು ಎಂದೇ ಗುರುತಿಸಲಾಗುತ್ತಿದೆ.
ಉದಾ.: ಶಿವನ ಸಮುದ್ರ ವಿದ್ಯುತ್‌ ಉತ್ಪಾದನಾ ಯೋಜನೆ, ಹೆಬ್ಟಾಳದ ಕೃಷಿ ಶಾಲೆ, ಮೈಸೂರು ಬ್ಯಾಂಕ್‌, ಕನ್ನಡ ಸಾಹಿತ್ಯ ಪರಿಷತ್ತು, ರೇಷ್ಮೆ , ಸಾಬೂನು, ಗಂಧದ ಎಣ್ಣೆ , ಚರ್ಮೋದ್ಯಮ…ಮುಂತಾದ ಉದ್ಯಮಗಳಿಗೆ ಅಡಿಪಾಯ ಹಾಕಿದ ಕೀರ್ತಿ ಅವರದು. ಭದ್ರಾವತಿ ಉಕ್ಕಿನ ಕಾರ್ಖಾನೆ, ಕೃಷ್ಣರಾಜ ಸಾಗರ ಜಲಾಶಯಾಗಳು ಮೇರು ಸದೃಶ್ಯದ ಕಾರ್ಯ ಯೋಜನೆಗಳೆಂದು ಬಿಂಬಿಸಲ್ಪಟ್ಟಿವೆ. ಈ ಎಲ್ಲದರ ಫ‌ಲಾನುಭವಿಗಳಾದ ನಾವಿಂದು ಸರ್‌. ಎಂ.ವಿ. ಅವರನ್ನು ಸ್ಮರಿಸಲೇ ಬೇಕಾದ ದಿನವೂ ಹೌದು.

* ಈ ಎಲ್ಲಾ ಸಾಧನೆಗಳ ಕೃತಶಕ್ತಿ, ಇಚ್ಛಾಶಕ್ತಿಯ ಮಹಾನ್‌ ಸಾಧಕ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರನ್ನು ಈ ದೇಶ ಕಂಡ ಭಾಗ್ಯದ ಶಿಲ್ಪಿ ಮಾತ್ರವಲ್ಲ, ಈ ರಾಷ್ಟ್ರದ ಮಹಾನ್‌ ಮೂವರು ಶ್ರೇಷ್ಠ ವ್ಯಕ್ತಿಗಳಾದ ಗಾಂಧೀಜಿ, ರವೀಂದ್ರನಾಥ ಠಾಗೂರ್‌, ಸರ್‌.ಎಂ.ವಿ. ಅವರನ್ನು ಸರಿಸಮಾನವಾದ ಸ್ಥಾನ ಮಾನದಲ್ಲಿ ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಹೌದು. ಇಂದು ಅವರ ಹುಟ್ಟು ದಿನವನ್ನೂ ನಾವು ಇಂಜಿನಿಯರ್ ದಿನಾಚರಣೆಯಾಗಿ
ಆಚರಿಸುವುದರ ಜೊತೆಗೆ ಅವರು ಸಾಗಿ ಬಂದ ರೀತಿಯಲ್ಲಿ ನಮ್ಮ ಚಿಂತನೆ-ನಡೆನುಡಿ, ಕಾರ್ಯಗಳನ್ನು ಪಾಲಿಸುವುದು ನಿಜವಾದ ರೀತಿಯಲ್ಲಿ ಸರ್‌. ಎಂ.ವಿ. ಅವರಿಗೆ ಸಮರ್ಪಿಸುವ ನುಡಿನಮನವೂ ಹೌದು.

ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ , ಉಡುಪಿ
ನಿರೂಪಣೆ :
ಎಸ್‌.ಜಿ ನಾಯ್ಕ ಸಿದ್ದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next