Advertisement

ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಕೆರೆ-ಕಟ್ಟೆಗಳು

03:01 PM Oct 17, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಉತ್ತಮ ಮಳೆಯಾಗಿ ಮಳೆ ನೀರು ಬಂದು ಕೆರೆಗಳು ತುಂಬುತ್ತಿರುವ ಹರ್ಷ ರೈತರಿಗಾದರೆ ಸೂಕ್ತ ನಿರ್ವಹಣೆ ಇಲ್ಲದೇ ಕೆರೆಗಳಲ್ಲಿ ನೀರು ನಿಲ್ಲಲು ಆಗದೇ ಮುಂದೆ ಬೇಸಿಗೆಯಲ್ಲಿ ನೀರಿನ ಪಾಡು ಏನು ಎಂದು ಗ್ರಾಮಸ್ಥರು ಯೋಚಿಸು ವಂತಾಗಿದೆ. ತಾಲೂಕಿನ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಾಲಿನ ಹೆಗ್ಗಡಿಹಳ್ಳಿ ಕೆರೆಯ ಕೋಡಿ ಕಲ್ಲುಗಳು ಕಿತ್ತುಹೋಗಿವೆ.

Advertisement

ಕೆರೆಯಲ್ಲಿ ಸಂಗ್ರಹವಾಗಿರುವ ಮಳೆ ನೀರು ದೊಡ್ಡಪ್ರಮಾಣದಲ್ಲಿ ಹೋರ ಹೋಗಿ ಕೆರೆ ಬರಿದಾಗುವ ಅಪಾಯವಿದೆ. ಹೀಗಾಗಿ ಸ್ಥಳೀಯ ರೈತರು ಮಣ್ಣು ಹಾಕುವ ಮೂಲಕ ನೀರನ್ನು ತಡೆ ಹಿಡಿದಿದ್ದಾರೆ. ಆದರೆ ಮಳೆ ಹೆಚ್ಚಾದರೆ ಈ ಮಣ್ಣು ಕೊಚ್ಚಿ ಹೋಗಿ ಕೆರೆಯಲ್ಲಿನ ನೀರು ಖಾಲಿಯಾಗಲಿದೆ ಎನ್ನುವ ಆತಂಕ ರೈತರದ್ದು.

ದಂಡುದಾಸನಕೊಡಿಗೇಹಳ್ಳಿ ಕೆರೆ ಸಹ ಸೂಕ್ತ ನಿರ್ವಹಣೆ ಇಲ್ಲದೆ ಕೆರೆ ಏರಿಯ ಮಣ್ಣು ಸಡಿಲಗೊಂಡು ಸೋರುತ್ತಿದೆ. ಈ ಸೋರುವಿಕೆ ದೊಡ್ಡ ಪ್ರಮಾಣವಾದರೆ ಕೆರೆಯ ಏರಿಯ ಕಟ್ಟೆ ಹೊಡೆಯುವ ಅಪಾಯ ಎದುರಾಗಿದೆ. ಕಣಿವೆಪುರ ಕೆರೆ ನೀರು ಹರಿದು ಹೊಗುವ ಕೋಡಿಯ ರಾಜಕಾಲುವೆಯಲ್ಲಿ ನಂದಿ ಬೆಟ್ಟದ ತಪ್ಪಲಿನ ಸ್ಟಾರ್‌ ಹೋಟೆಲ್‌ಗ‌ಳ ತ್ಯಾಜ್ಯವನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತಂದು ರಾಶಿ ಹಾಕಿ ಸುಡಲಾಗಿದೆ.

ಇದನ್ನೂ ಓದಿ:- ಗಮನ ಸೆಳೆದ ವಿಶಿಷ್ಟ ವಿನ್ಯಾಸದ ಬಸ್‌ ಶೆಲ್ಟರ್‌

ಈ ತ್ಯಾಜ್ಯವು ನೀರಿನಲ್ಲಿ ಹರಿದು ಬಂದು ಈಗ ಕಣಿವೆಪುರ ಗ್ರಾಮದ ಮುಂದಿನ ಕೆರೆಗಳಲ್ಲಿನ ನೀರಿನ ಒಡಲನ್ನು ಸೇರುತ್ತಿದೆ. ಇದರಿಂದ ಕೆರೆಯಲ್ಲಿನ ಜಲಚರಗಳ ಸಾವಿಗೆ ಕಾರಣವಾಗುವುದಲ್ಲದೆ ನೀರು ಸಹ ಕಲುಸಿತವಾಗುವ ಅಪಾಯಗಳಿವೆ ಎಂದು ಸ್ಥಳೀಯ ನಿವಾಸಿ ಮಂಜುನಾಥ್‌ ದೂರಿದ್ದಾರೆ.

Advertisement

ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಕೆರೆಗಳು ಸೂಕ್ತ ನಿರ್ವಹಣೆ ಇಲ್ಲದೆ ಕೆರೆಯ ಏರಿಗಳಲ್ಲಿ ನೀರು ಸೋರಿಕೆ ಆರಂಭವಾಗಿದೆ. ನಂದಿ ಬೆಟ್ಟದಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಅರ್ಕಾವತಿ ನದಿ ಹರಿಯುವುದೇ ಸಾಲು ಸಾಸಲು ಕೆರೆಗಳ ಮೂಲಕ. ಈ ಕೆರೆಗಳು ಒಂದೊಕ್ಕೊಂದು ತುಂಬಿ ಕೋಡಿ ಬೀಳುತ್ತ ಹೆಸರಘಟ್ಟ ಸೇರುತ್ತವೆ. ಅಲ್ಲಿಂದ ಮುಂದೆ ಮಾಗಡಿ ಸಮೀಪದ ಮಂಚನಬೆಲೆ ಡ್ಯಾಂ, ಆ ನಂತರ ರಾಮನಗರ ಮೂಲಕ ಕನಕಪುರದ ಸಂಗಮದಲ್ಲಿ ಕಾವೇರಿ ನದಿ ಸೇರಿ ಮುಂದೆ ಸಮುದ್ರದತ್ತ ಸಾಗುತ್ತದೆ. ಇತ್ತೀಚೆಗೆ ಬಹಳಷ್ಟು ಬತ್ತಿ ಹೋಗಿದ್ದ ಅರ್ಕಾವತಿ ನದಿ ಈಗ ಮೂತುಂಬಿಕೊಳ್ಳುತ್ತಿದ್ದು ನೀರಿನ ಮೂಲಗಳನ್ನು ಉಳಿಸಿಕೊಳ್ಳಬೇಕಿದೆ ಎನ್ನುತ್ತಾರೆ ಪರಿಸರಪ್ರೇಮಿಗಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next