Advertisement

ಮುಳಿಹುಲ್ಲಿನ ಕಟ್ಟಡ- ಬ್ರಿಟಿಷರ ಬಂಗ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದ ಶಾಲೆ

09:39 AM Nov 22, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1894 ಶಾಲೆ ಆರಂಭ
ಊರಿನ ಹಿರಿಯರೆಲ್ಲ ಸೇರಿ ಅರಂತ್ತಾಡಿಯಲ್ಲಿ ಆರಂಭಿಸಿದ್ದ ಶಾಲೆ

ಬಂಟ್ವಾಳ: ಹತ್ತೂರಲ್ಲೂ ಶಾಲೆಗಳೇ ಇಲ್ಲದ ದಿನಗಳಲ್ಲಿ ಹಿರಿಯರೆಲ್ಲ ಸೇರಿ ಅರಂತ್ತಾಡಿ ಎಂಬ ಪ್ರದೇಶ ದಲ್ಲೊಂದು ಶಾಲೆಯನ್ನು ಆರಂಭಿಸುತ್ತಾರೆ. 1894ರಲ್ಲಿ ಮುಳಿಹುಲ್ಲಿನ ಕಟ್ಟಡವೊಂದರಲ್ಲಿ ಪ್ರಾರಂಭಗೊಂಡ ಈ ಶಾಲೆ ಬಳಿಕ ಬ್ರಿಟಿಷರ ಕಾಲಘಟ್ಟ 1905ರಲ್ಲಿ ಬಂಗ್ಲೆಯೊಂದಕ್ಕೆ ವರ್ಗಾಯಿಸಲ್ಪಟ್ಟಿತ್ತು.

ಅದೇ ಶಾಲೆ ಬಾಳೆಪುಣಿ ಮುದುಂಗಾರುಕಟ್ಟೆ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯಾಗಿ ಬೆಳೆದು ನಿಂತಿದೆ. 1894ರ ಜ. 17ರಂದು ಶಾಲೆಗೆ ಭೇಟಿ ನೀಡಿದ ತಪಾಸಣ ಅಧಿಕಾರಿಗಳ ವರದಿಯ ಆಧಾರದಲ್ಲಿ ಶಾಲೆಯ ಪ್ರಾರಂಭದ ಕುರಿತು ತಿಳಿಯಲಾಗಿದೆ. ಕೆ. ಬುಡಾನ್‌ ಸಾಹೇಬರು
ಶಾಲೆಯ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು ಎನ್ನಲಾಗುತ್ತಿದೆ.

ಶತಮಾನೋತ್ಸವ ಸಂಭ್ರಮ
1994ರಲ್ಲಿ ಶಾಲೆಯ 100ರ ಸಂಭ್ರಮದಲ್ಲಿ ಯುವಕ ಮಂಡಲ, ಹಳೆ ವಿದ್ಯಾರ್ಥಿ ಸಂಘ, ಊರ-ಪರವೂರ ದಾನಿಗಳು, ಶತಮಾನೋತ್ಸವ ಸಮಿತಿಯ ಮೂಲಕ ಹೊಸ ಕೊಠಡಿ ರಚಿಸಲಾಗಿದ್ದು, ನೆನಪಿನ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಗಿದೆ. ಸರಕಾರದಿಂದ ನಿಯೋಜಿಸಲ್ಪಟ್ಟ 6 ಶಿಕ್ಷಕರ ಜತೆಗೆ ಓರ್ವ ಅತಿಥಿ ಶಿಕ್ಷಕರು, ಎಸ್‌ಡಿಎಂಸಿ, ವಿದ್ಯಾರ್ಥಿಗಳ ಹೆತ್ತವರ ಸಹಕಾರದಿಂದ ಮೂವರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂವರು ಅಡುಗೆ ಸಿಬಂದಿ ದುಡಿಯುತ್ತಿದ್ದಾರೆ.

Advertisement

ಹಳೆ ವಿದ್ಯಾರ್ಥಿಗಳು
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ| ವಾಮನ ನಂದಾವರ, ಜಾನಪದ ಕಲೆಯ ಮೂಲಕ ರಾಜ್ಯ-ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ್ದ ಎನ್‌. ಕೋಯಿರಾ ಬಾಳೆಪುಣಿ, ಛದ್ಮವೇಷದಲ್ಲಿ ಮಿಂಚಿದ್ದ ಶೋಭಾನಂದ ರೈ, ಸಾಧಕ ಶಿವಪ್ರಸಾದ್‌ ಆಳ್ವ ಮೊದಲಾದವರು ಈ ಶಾಲೆಯ ಹಳೆ ವಿದ್ಯಾರ್ಥಿಗಳಾಗಿದ್ದಾರೆ. ಜತೆಗೆ ಹತ್ತು ಹಲವು ಮಂದಿ ದೇಶ-ವಿದೇಶಗಳಲ್ಲಿ ಉದ್ಯೋಗ ಸಹಿತ ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ್ದಾರೆ.

ಸುತ್ತಲೂ ಔಷಧೀಯ ಗಿಡಗಳು
ಶಾಲೆಯು 3.86 ಎಕ್ರೆ ಜಾಗ ಹೊಂದಿದ್ದು, ಶಾಲಾ ಕಟ್ಟಡದ ಜತೆಗೆ ಅರಣ್ಯ ಇಲಾಖೆ, ಗ್ರಾ.ಪಂ.ನ ಸಹಕಾರದಲ್ಲಿ ಔಷಧೀಯ, ಇತರ ಉಪಯುಕ್ತ ಗಿಡಗಳನ್ನು ಬೆಳೆಸಲಾಗಿದೆ. ಶಾಲೆಯ ಆಟದ ಮೈದಾನದ ಸುತ್ತಲೂ ಇಂತಹ ಗಿಡಗಳಿವೆ. ಶಾಲೆಯಲ್ಲಿ ಶೌಚಾಲಯ, ವಿದ್ಯುತ್‌, ಶುದ್ಧ ಕುಡಿಯುವ ನೀರು, ರಂಗ ಮಂದಿರ, ಗ್ರಂಥಾಲಯ, ಕ್ರೀಡಾಂಗಣ, ಕಂಪ್ಯೂಟರ್‌ ಕೊಠಡಿಗಳು ಲಭ್ಯವಿದೆ.

ವಿದ್ಯಾರ್ಥಿಗಳಿಗೆ ಶುಚಿತ್ವದ ಪಾಠ ಮಾಡಲಾಗುತ್ತಿದೆ. ಶಾಲೆಯಲ್ಲಿ ಅಂಗನವಾಡಿ ಕೇಂದ್ರಗಳ ಜತೆ ಚಿಣ್ಣರ ಮನೆ ನರ್ಸರಿ ತರಗತಿಗಳು ಸೇರಿ 1ರಿಂದ 8ನೇ ತರಗತಿವರೆಗೆ ಒಟ್ಟು 185 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಸುತ್ತಲೂ ಸರಕಾರಿ ಸಹಿತ ಅನುದಾನಿತ, ಆಂಗ್ಲ ಮಾಧ್ಯಮ ಶಾಲೆಗಳೂ ಕಾರ್ಯಾಚರಿಸುತ್ತಿವೆ.

125 ವರ್ಷ ಪೂರೈಸಿರುವ ಶಾಲೆಯಲ್ಲಿ ಕಾರ್ಯ ನಿರ್ವಹಿಸುವುದೇ ಹೆಮ್ಮೆಯ ವಿಚಾರ. ಗುಣಮಟ್ಟದ ಶಿಕ್ಷಣ, ಶಿಸ್ತು, ಸ್ವಚ್ಛತೆ, ಸಮಯ ಪಾಲನೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಶಾಲಾಭಿವೃದ್ಧಿ ಸಮಿತಿ, ಜನಪ್ರತಿನಿಧಿಗಳ ಸಹಕಾರವೂ ಉತ್ತಮವಾಗಿದೆ.
ಉದಯಕುಮಾರಿ, ಮುಖ್ಯ ಶಿಕ್ಷಕಿ

ಗುಣಮಟ್ಟದ ಶಿಕ್ಷಣ ದೊಂದಿಗೆ ಪಠ್ಯೇತರ ವಿಚಾರಗಳಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿತ್ತು. ವೆಂಕಪ್ಪ ಪೂಜಾರಿ ಅನ್ನುವ ಶಿಕ್ಷಕರಿದ್ದು, ರಾಮಾಯಣ, ಮಹಾಭಾರತ ಮೊದಲಾದ ಪುರಾಣಗಳ ಕಥೆ ಹೇಳುತ್ತಿದ್ದರು. ಜತೆಗೆ ಗೋವಿಂದ ಮಾಸ್ಟರ್‌, ಕನ್ನಡಕ್ಕೆ ಅಮ್ಮೆಂಬಳ ಶಂಕರನಾರಾಯಣ ನಾವಡ ಅವರು ಪಾಠ ಮಾಡಿರುವುದು ನೆನಪಿದೆ.
-ಡಾ| ವಾಮನ ನಂದಾವರ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು, ಹಳೆ ವಿದ್ಯಾರ್ಥಿ

–  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next