Advertisement

Forest Department; ಚಾರಣ ಅನುಮತಿಗೆ ಏಕ ವೆಬ್‌ಸೈಟ್‌ – ಸಿದ್ಧತೆ

11:55 PM Feb 28, 2024 | Team Udayavani |

ಮಂಗಳೂರು: ಚಾರಣಾಸಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆ ಪರಿಸರ ಹಾಳಾಗುತ್ತದೆ, ಜೀವವೈವಿಧ್ಯಕ್ಕೆ ಭಂಗಬರುತ್ತದೆ ಎಂಬ ಕಾರಣದಿಂದ ಸಂಖ್ಯೆಯನ್ನು ನಿಯಂತ್ರಿಸಲು ಎಲ್ಲ ಚಾರಣ ತಾಣಗಳಿಗೆ ಒಂದೇ ವೆಬ್‌ಸೈಟ್‌ ಮೂಲಕ ಅನುಮತಿ ಒದಗಿಸಲು ಅರಣ್ಯ ಇಲಾಖೆ ಮುಂದಾಗಿದೆ.

Advertisement

ಪ್ರಸ್ತುತ ರಾಜ್ಯದ ಕೆಲವು ಪ್ರದೇಶಗಳಿಗೆ ಆಯಾ ಅರಣ್ಯ ಪ್ರದೇಶಕ್ಕೆ ಬೇಕಾದಂತೆ ಚಾರಣವನ್ನು ತಮ್ಮದೇ ಆದ ವೆಬ್‌ಸೈಟ್‌ಗಳ ಮೂಲಕ ನಿರ್ವಹಿಸಲಾಗುತ್ತಿದೆ.

ಕರ್ನಾಟಕ ಇಕೋ ಟೂರಿಸಂ ಬೋರ್ಡ್‌ ವೆಬ್‌ಸೈಟ್‌ ಮೂಲಕ ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಬೆಂಗಳೂರು, ಕಲಬುರಗಿಯ ಕೆಲವು ಪ್ರವಾಸಿ ತಾಣಗಳಿಗೆ ಮಾತ್ರ ಬುಕಿಂಗ್‌ ಮಾಡಲಾಗುತ್ತದೆ. ಅಂತೆಯೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಮೂಕಾಂಬಿಕಾ ಅಭಯಾರಣ್ಯ ಹಾಗೂ ಸೋಮೇಶ್ವರ ಅಭಯಾರಣ್ಯಗಳನ್ನು ಸೇರಿಸಿ ಕೊಂಡು ಕುದುರೆಮುಖ ನ್ಯಾಶನಲ್‌ ಪಾರ್ಕ್‌ವೆಬ್‌ಸೈಟ್‌ ಮೂಲಕ ಬುಕಿಂಗ್‌ ಮಾಡಲಾಗುತ್ತಿದೆ.

ಉಳಿದಂತೆ ಜಿಲ್ಲೆಯ ಪ್ರಮುಖ ಚಾರಣ ತಾಣ ಕುಮಾರ ಪರ್ವತ, ಶಿರಾಡಿ, ಚಾರ್ಮಾಡಿ, ಬಿಸಿಲೆ ಘಾಟಿಯ ಲ್ಲಿರುವ ಹತ್ತು ಹಲವು ಗುಡ್ಡಗಳು, ಜಲಪಾತ ಗಳಿಗೆ ಪ್ರಸ್ತುತ ಯಾವುದೇ ಆನ್‌ಲೈನ್‌ ಅನುಮತಿ ವ್ಯವಸ್ಥೆ ಇಲ್ಲ.

ಕುಮಾರಪರ್ವತದಲ್ಲಿ ಇತ್ತೀಚೆಗೆ ಸೇರಿದ್ದ 2 ಸಾವಿರಕ್ಕೂ ಅಧಿಕ ಚಾರಣಿಗರಿಂದಾಗಿ ಇಲ್ಲಿನ ಸಮಸ್ಯೆ ಅರಣ್ಯ ಸಚಿವರ ಗಮನಕ್ಕೆ ಬಂದಿತ್ತು.

Advertisement

ಮುಂದಿನ ಸೀಸನ್‌ಗೆ
ಆನ್‌ಲೈನ್‌ ಬುಕಿಂಗ್‌
ಕುಮಾರ ಪರ್ವತ ಸಹಿತ ಎಲ್ಲ ಪ್ರಮುಖ ಚಾರಣ ತಾಣಗಳಿಗೂ ಒಂದೇ ಆನ್‌ಲೈನ್‌ ವೇದಿಕೆ ಮೂಲಕ ಬುಕಿಂಗ್‌ ಮಾಡಲು ಅನುವು ಮಾಡಿಕೊಡಲು ಈಗಾಗಲೇ ಸಚಿವ ಈಶ್ವರ ಖಂಡ್ರೆ ಆಸಕ್ತಿ ತೋರಿದ್ದಾರೆ. ಒಂದೇ ವೆಬ್‌ಸೈಟ್‌ ಮೂಲಕ ಆಯಾ ಪ್ರದೇಶದ ಅಭಯಾರಣ್ಯಗಳ ವ್ಯಾಪ್ತಿಯ ಟ್ರೆಕಿಂಗ್‌ ಬುಕಿಂಗ್‌ಗೆ ಲಿಂಕ್‌ ನೀಡುವ ಸಾಧ್ಯತೆಯೂ ಇದ್ದು, ಮುಂದಿನ ಸೀಸನ್‌ಗೆ ಜಾರಿಗೆ ಬರುವ ಸಾಧ್ಯತೆ ಇದೆ.

ಕುಮಾರ ಪರ್ವತ ಚಾರಣ ಸದ್ಯಕ್ಕೆ ನೀರಿನ ಕೊರತೆ ಕಾರಣದಿಂದ ಸ್ಥಗಿತಗೊಂಡಿದೆ. ಸದ್ಯ ಕುದುರೆಮುಖ ವೆಬ್‌ಸೈಟ್‌ ಮೂಲಕ ಒಟ್ಟು 16 ಸ್ಥಳಗಳಿಗೆ ಟ್ರೆಕಿಂಗ್‌ ಹಾಗೂ ಮೂಕಾಂಬಿಕಾ ಅಭಯಾರಣ್ಯ, ಕುದುರೆಮುಖ ನ್ಯಾಶನಲ್‌ ಪಾರ್ಕ್‌ಗೆ ಸಫಾರಿ ಬುಕಿಂಗ್‌ ಮಾಡಬಹುದು. ಕೊಡಚಾದ್ರಿ, ಅರಶಿನಗುಂಡಿ, ಕುರಿಂಜಾಲು, ಗಂಗಡಿಕಲ್ಲು, ವಾಲಿಕುಂಜ, ನೇತ್ರಾವತಿ ಶಿಖರ, ಬೆಳ್ಕಲ್‌ ತೀರ್ಥ ಫಾಲ್ಸ್‌, ಕೂಸಳ್ಳಿ ಫಾಲ್ಸ್‌, ಹನುಮಾನ್‌ಗುಂಡಿ ಫಾಲ್ಸ್‌ಗಳಿಗೆ ಆನ್‌ಲೈನ್‌ ಮೂಲಕ ಅನುಮತಿ ನೀಡಲಾಗುತ್ತಿದೆ. ಬಲ್ಲಾಳರಾಯನ ದುರ್ಗ, ಬಂಡಾಜೆ ಅಬ್ಬಿ, ಬೆಂಗಳೂರಿನ ಪ್ರಮುಖ ತಾಣಗಳಾದ ಸಿದ್ದರಬೆಟ್ಟ, ಸಾವನದುರ್ಗ, ಸ್ಕಂದಗಿರಿ ಇತ್ಯಾದಿಗಳಿಗೆ ಕರ್ನಾಟಕ ಇಕೋ ಟೂರಿಸಂ ವೆಬ್‌ಸೈಟ್‌ ಮೂಲಕ ಬುಕಿಂಗ್‌, ಶುಲ್ಕ ಪಾವತಿ ಮಾಡಬಹುದು.

ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಜಿಲ್ಲೆಗಳ ಅಸಂಖ್ಯ ಚಾರಣ ತಾಣಗಳಿಗೆ ಬುಕಿಂಗ್‌ ಸೌಲಭ್ಯ ಸದ್ಯಕ್ಕಿಲ್ಲ, ಅವುಗಳೆಲ್ಲವನ್ನೂ ಒಂದೇ ಕೊಡೆಯಡಿಗೆ ತರುವ ಯೋಜನೆ ಇದೆ.
– ಈಶ್ವರ ಖಂಡ್ರೆ, ಅರಣ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next