ಉತ್ತರಪ್ರದೇಶ: ಯೂಟ್ಯೂಬ್ ನೋಡಿಕೊಂಡು ಅದರ ಸೂಚನೆ ಪ್ರಕಾರ ಸ್ವತಃ ಹೆರಿಗೆ ಮಾಡಿಸಿಕೊಳ್ಳಲು ಪ್ರಯತ್ನಿಸಿದ್ದ ಅವಿವಾಹಿತ ಮಹಿಳೆ ಹಾಗೂ ಮಗು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಗೋರಖ್ ಪುರದಲ್ಲಿ ಭಾನುವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ವಿವಾಹಕ್ಕೂ ಮುನ್ನವೇ ಗರ್ಭಿಣಿಯಾಗಿದ್ದ 26ರ ಹರೆಯದ ಯುವತಿ ಕಳ್ಳಾಟಿಕೆಯಲ್ಲಿ ಯೂಟ್ಯೂಬ್ ನೋಡಿಕೊಂಡು ಹೆರಿಗೆ ಮಾಡಿಸಿಕೊಳ್ಳಲು ಮುಂದಾಗಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಸೋಮವಾರ ಬೆಳಗ್ಗೆ ನೆರಮನೆಯವರು ಈಕೆಯ ಮನೆ ಬಳಿ ಬಂದಾಗ ಕೋಣೆಯಿಂದ ರಕ್ತ ಹರಿದು ಬರುತ್ತಿರುವುದನ್ನು ಗಮನಿಸಿ ಆಕೆಯ ಬಾಡಿಗೆ ಮನೆ ಮಾಲೀಕನಿಗೆ ಮಾಹಿತಿ ನೀಡಿದ್ದರು. ಬಳಿಕ ಮನೆ ಮಾಲೀಕ ಬಂದು ಬಾಗಿಲನ್ನು ಒಡೆದಾಗ ತಾಯಿ ಮತ್ತು ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದರು.
ತಾಯಿ ಮತ್ತು ಮಗುವಿನ ಪ್ರಾಣ ಹೋಗಿರುವುದನ್ನು ಮನಗಂಡ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದು, ಬಳಿಕ ಶವವನ್ನು ಯುವತಿಯ ಮನೆಯವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಸ್ಮಾರ್ಟ್ ಫೋನ್ ವಶಕ್ಕೆ ಪಡೆದಿದ್ದ ಪೊಲೀಸರಿಗೆ ಆಕೆ, ಸ್ವತಃ ಹೆರಿಗೆ ಮಾಡಿಸಿಕೊಳ್ಳುವುದು ಹೇಗೆ ಎಂಬ ವಿಡಿಯೋ ಅದರಲ್ಲಿ ಪ್ಲೇ ಆಗಿರುವುದನ್ನು ಪತ್ತೆ ಹಚ್ಚಿದ್ದರು. ಅಲ್ಲದೇ ಸುರಕ್ಷಿತ ಹೆರಿಗೆ ಮಾಡಿಸಿಕೊಳ್ಳುವುದು ಹೇಗೆ ಎಂಬ ವಿಡಿಯೋವನ್ನು ಆಕೆ ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದಳು ಎಂಬುದಾಗಿ ಪೊಲೀಸ್ ಮೂಲಗಳು ಹೇಳಿವೆ.