Advertisement

ಲಾಕ್ ಡೌನ್: ಮಗನನ್ನು ಮನೆಗೆ ಕರೆತರಲು ಸ್ಕೂಟಿಯಲ್ಲಿ 1,400 ಕಿ.ಮೀ. ಪ್ರಯಾಣಿಸಿದ ತಾಯಿ

05:43 PM Apr 10, 2020 | Nagendra Trasi |

ತೆಲಂಗಾಣ/ಮಹಾರಾಷ್ಟ್ರ:ಕೋವಿಡ್ 19 ಮಹಾಮಾರಿ ವಿರುದ್ಧ ಹೋರಾಡಲು ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳ, ಪೊಲೀಸರು ಹಾಗೂ ಶುಚಿತ್ವ ಕೆಲಸದಲ್ಲಿ ತೊಡಗಿರುವವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಹೀಗೆ ಲಾಕ್ ಡೌನ್ ನಡುವೆ ಹಲವು ಅಪರೂಪದ ಘಟನೆಗಳು ಬೆಳಕಿಗೆ ಬರುತ್ತಿದೆ.

Advertisement

ಮಗನಿಗಾಗಿ 1,400 ಕಿಲೋ ಮೀಟರ್ ಸ್ಕೂಟಿಯಲ್ಲಿ ಪ್ರಯಾಣಿಸಿದ ತಾಯಿ:
ಲಾಕ್ ಡೌನ್ ಘೋಷಣೆಯಾದ ನಂತರ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ನಿರ್ಬಂಧ ವಿಧಿಸಿದ ಪರಿಣಾಮ ನೂರಾರು ಮಂದಿ ಕಾಲ್ನಡಿಗೆಯಲ್ಲಿಯೇ ತಮ್ಮ ಮನೆ ತಲುಪಿದ, ದಾರಿ ಮಧ್ಯೆ ಸಿಲುಕಿಕೊಂಡ ಘಟನೆಗಳನ್ನು ಓದಿದ್ದೇವೆ. ಅದೇ ರೀತಿ ತೆಲಂಗಾಣದ ಈ ತಾಯಿ ಮಗನನ್ನು ಮನೆಗೆ ವಾಪಸ್ ಕರೆತರಲು 1,400 ಕಿಲೋ ಮೀಟರ್ ಕ್ರಮಿಸಿದ ಘಟನೆ ನಡೆದಿದೆ.

ತೆಲಂಗಾಣದ ನಿಜಾಮುದ್ದೀನ್ ಜಿಲ್ಲೆಯ 50 ವರ್ಷದ ಟೀಚರ್ ರಝೀಯಾ ಬೇಗಂ ತನ್ನ ದ್ವಿಚಕ್ರ ವಾಹನದಲ್ಲಿ ಆಂಧ್ರಪ್ರದೇಶದ ನೆಲ್ಲೂರ್ ಗೆ ತೆರಳಲು ನಿರ್ಧರಿಸಿದ್ದರು. ಅದಕ್ಕೆ ಕಾರಣ ಲಾಕ್ ಡೌನ್ ನಿಂದಾಗಿ ನೆಲ್ಲೂರ್ ನಲ್ಲಿ ಮಗ ಸಿಕ್ಕಿಹಾಕಿಕೊಂಡಿರುವುದು.

ರಝೀಯಾ ಬೇಗಂ ಮಹಾರಾಷ್ಟ್ರ-ತೆಲಂಗಾಣ ಗಡಿಭಾಗದ ಬೋಧಾನ್ ಎಂಬ ಪುಟ್ಟ ಗ್ರಾಮದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಕೆ ಸೋಮವಾರ ಬೆಳಗ್ಗೆ ಸ್ಕೂಟಿಯಲ್ಲಿ ಹೊರಟು ಮಂಗಳವಾರ ಮಧ್ಯಾಹ್ನ ಆಂಧ್ರಪ್ರದೇಶ-ತಮಿಳುನಾಡು ಗಡಿಯಲ್ಲಿನ ನೆಲ್ಲೂರ್ ಅನ್ನು ತಲುಪಿದ್ದರು. ನಂತರ 17 ವರ್ಷದ ಪುತ್ರ ಮೊಹಮ್ಮದ್ ನಿಜಾಮುದ್ದೀನ್ ನನ್ನು ಕರೆದುಕೊಂಡು ಬುಧವಾರ ಸಂಜೆ ಮನೆಗೆ ವಾಪಸ್ ಆಗಿದ್ದರು.

Advertisement

ಈ ಮೂರು ದಿನಗಳ ದೀರ್ಘ ಪ್ರಯಾಣದಲ್ಲಿ ರಝೀಯಾ ಬೇಗಂ ಅವರು ತಮ್ಮ ಸ್ಕೂಟಿಯಲ್ಲಿ ಬರೋಬ್ಬರಿ 1,400 ಕಿಲೋ ಮೀಟರ್ ನಷ್ಟು ದೂರ ಕ್ರಮಿಸಿರುವುದಾಗಿ ವರದಿ ತಿಳಿಸಿದೆ.

ರಝೀಯಾ ಅವರು ಪುತ್ರ, ಪುತ್ರಿ ಜತೆ ವಾಸವಾಗಿದ್ದಾರೆ. ಮಗ ನಿಜಾಮುದ್ದೀನ್ ಹೈದರಾಬಾದ್ ನಲ್ಲಿ ಮೆಡಿಕಲ್ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದ. ನೆಲ್ಲೂರ್ ನಲ್ಲಿ ತನ್ನ ಗೆಳೆಯನ ಅನಾರೋಗ್ಯ ಪೀಡಿತ ತಂದೆಯ ಆರೋಗ್ಯ ವಿಚಾರಿಸಲು ತೆರಳಿದ್ದ ವೇಳೆ ಲಾಕ್ ಡೌನ್ ಘೋಷಣೆಯಾಗಿತ್ತು. ಇದರಿಂದಾಗಿ ಆತ ನೆಲ್ಲೂರ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಂದು ವರದಿ ತಿಳಿಸಿದೆ.

ಲಾಕ್ ಡೌನ್ ನಂತರ ಟೀಚರ್ ಬೋಧಾನ್ ಎಸಿಪಿ ಜೈಪಾಲ್ ರೆಡ್ಡಿ ಅವರನ್ನು ಭೇಟಿಯಾಗಿ ಕರ್ಫ್ಯೂ ಪಾಸ್ ನೀಡುವಂತೆ ಮನವಿ ಮಾಡಿಕೊಂಡಿದ್ದರು. ನಂತರ ಬಿಸ್ಕೆಟ್, ತಿಂಡಿ, ನೀರಿನ ಬಾಟಲ್ ತೆಗೆದುಕೊಂಡು ಸ್ಕೂಟಿಯಲ್ಲಿ ಪ್ರಯಾಣಿಸಿದ್ದರು ಎಂದು ವರದಿ ವಿವರಿಸಿದೆ. ಪ್ರಯಾಣದ ವೇಳೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ತಪಾಸಣೆ ನಡೆಸಿ ವಿವರಣೆ ಕೇಳಿದ್ದರು. ಪ್ರಯಾಣದ ವೇಳೆ ಪೊಲೀಸರು ನೆರವು ನೀಡಿರುವುದಾಗಿ ರಝೀಯಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next