Advertisement

ಒಂಟಿ ಗೃಹಿಣಿಯ ಅಂತರಂಗ 

06:15 AM Oct 27, 2017 | |

ಗೆಳತಿ ಒಬ್ಬಳು ಹೇಳುತ್ತಿದ್ದಳು, “”ಗಂಡ-ಮಕ್ಕಳನ್ನೆಲ್ಲ ಬಿಟ್ಟು ಒಂದಷ್ಟು ಸಮಯ ಎಲ್ಲಾದರೂ ತಿರುಗಾಡಿಕೊಂಡು ಬರಬೇಕು ಕಣೆ, ಅಲ್ಲಿ ನಾವು ನಾವಾಗಿರಬೇಕು! ಒಂದು ಕಪ್‌ ಟೀ ಅನ್ನು ಯಾರ ರಗಳೆನೂ ಇಲ್ಲದೇ ಅಸ್ವಾದಿಸಬೇಕು. ಅಲ್ಲಿ ನಾನು ಮತ್ತು ಟೀ ಕಪ್‌ ಅಷ್ಟೇ ಇರಬೇಕು” -ಇದು ಕೆಲವರಿಗೆ ಸೋಜಿಗ ಅನಿಸಬಹುದು, ಏನು ಒಂದು ಕಪ್‌ ಟೀ ಕುಡಿಯುವಷ್ಟು ಸಮಯ ಇಲ್ವಾ? ಎಂದು. ವಿಷಯ ಟೀಗೆ ಸಂಬಂಧಪಟ್ಟಿದ್ದಲ್ಲ. ಅದು ಅವಳ ಅಸ್ಮಿತೆಗೆ ಸಂಬಂಧಪಟ್ಟಿದ್ದು.

Advertisement

ಅಮ್ಮಾ…’ ಎಂದು ಸೈಕಲ್‌ ಏರಿ ನಿಂತ ಮಗ ಇನ್ನೇನು ಬಿದ್ದೇಬಿಡುತ್ತಾನೆ ಎಂದು ಓಡುತ್ತಿರುವಾಗಲೇ, “”ನನ್ನ ಶರ್ಟ್‌ಗೆ ಇಸ್ತ್ರೀ ಮಾಡಿದ್ದಿಯಾ” ಎಂದು ಬಾತ್‌ರೂಮಿನಿಂದಲೇ ಕೇಳುವ ಗಂಡ, ಹೊರಗಡೆ ಢಣ ಢಣ ಎಂದು ಕಸ ಕೊಂಡೊಯ್ಯುವವನ ಗಾಡಿಯ ಸದ್ದು ಕೇಳಿದಾಗ ಯಾವ ಕಡೆ ಹೋಗಬೇಕೆಂದು ಗೊತ್ತಾಗದೇ ಕೊನೆಗೆ ಕರುಳಿನ ಕರೆಗೆ ಓಗೊಟ್ಟು ಮಗನನ್ನು ಸೈಕಲ್‌ನಿಂದ ಇಳಿಸಿ, ನಂತರ ಗಂಡನಿಗೆ ಇಸಿŒ ಮಾಡಿದ ಬಟ್ಟೆ ಕೊಟ್ಟು, ಕಸ ಎಸೆದು ಬಂದು “ಉಸ್ಸಪ್ಪ’ ಎನ್ನುವಾಗಲೇ ಮಗ “ಚುಂಯ್‌’ ಎಂದು ಉಚ್ಚೆ ಮಾಡಿದ. ತಗೋಳಪ್ಪ ಮತ್ತೆ ಶುರುವಾಯಿತು ಕಾಯಕ! ಉಚ್ಚೆ ಒರೆಸಿ, ಗಂಡನಿಗೆ ಟೀ ಕೊಟ್ಟು, ಮಗುವಿಗೆ ತಿಂಡಿ ತಿನ್ನಿಸಿ, ಸ್ನಾನಮಾಡಿಸಿ ಮಲಗಿಸಿದ ಮೇಲೆ ಅರ್ಧ ಕೆಲಸ ಮುಗಿದಷ್ಟು ನಿರಾಳ ಭಾವ! ಅಲ್ಲಿಗೆ ಮುಗಿದಿಲ್ಲ , ಮತ್ತೆ ಸೊಂಟಕ್ಕೊಂದು ಶಾಲು ಬಿಗಿದುಕೊಂಡು, ಕೆದರಿದ ಕೂದಲನ್ನು ಅಲ್ಲಿಯೇ ಒಪ್ಪಮಾಡಿಕೊಂಡು, ಮನೆ ಒರೆಸಿ, ಬಟ್ಟೆ ತೊಳೆದು ಬಂದು ಕುಳಿತಾಗ “”ಅರೆ… ನಾನಿನ್ನೂ ತಿಂಡಿ ತಿಂದಿಲ್ಲ” ಎಂದು ಹೊಟ್ಟೆ ಸಣ್ಣಗೆ ಅಳುವುದಕ್ಕೆ ಶುರುಮಾಡುತ್ತದೆ. 

ಆರಿದ ಉಪಿಟ್ಟನ್ನೇ ತಟ್ಟೆಗೆ ಸುರಿದುಕೊಂಡು ಒಂದು ದೊಡ್ಡ ಲೋಟ ಚಾ ಎದುರಿಗಿಟ್ಟುಕೊಂಡು ಕುಡಿದರೆ ಆ ದಿನದ ದಿನಚರಿ ಒಂದು ಹಂತಕ್ಕೆ ಮುಗಿಯಿತು ಎಂದರ್ಥ. ಹಾಗಂತ ಇದು ವಿರಾಮವಲ್ಲ. ಒಂದ್ಹತ್ತು ನಿಮಿಷದ ಬ್ರೇಕ್‌ ಅಷ್ಟೇ. ಮತ್ತೆ ಅಡುಗೆ ಕೆಲಸ, ಗಂಡನಿಗೆ ಆರ್ಥಿಕವಾಗಿ ಸಹಾಯವಾಗಲೆಂದು  ಮನೆಯಲ್ಲಿ ಕುಳಿತು ಮಾಡುವ ಒಂದಷ್ಟು ಕೆಲಸವನ್ನು ಮೈಮೇಲೆ ಹಾಕಿಕೊಂಡು, ತಲೆಕೆಡಿಸಿಕೊಂಡು, ಕೆಲವೊಮ್ಮೆ ಮನಸ್ಸಿನೊಳಗೆ ಅತ್ತುಕೊಂಡು, ಮೊಗದೊಮ್ಮೆ ನಕ್ಕಾಗ ಬದುಕಿನ ಬಿಡಿ ಚಿತ್ರಣಕ್ಕೆ ಯಾವ ಬಣ್ಣ ತುಂಬಲಿ ಅನ್ನುವುದೇ ತಿಳಿಯದು! ಟೀವಿಯಲ್ಲಿ ಬರುವ ಯಾವ ಬ್ರಾಂಡಿನ ಚಹಾ, ಡೇಟ್ಸ್‌  ಸಿರಪ್‌ ಕೂಡ ಹೆಣ್ಣಿನ ಮಾನಸಿಕ ಶಕ್ತಿಯನ್ನೂ ಹೆಚ್ಚಿಸದು ಅನಿಸುತ್ತೆ. 

ಗಂಡ, ಮಕ್ಕಳು ಅಲ್ಲದೇ, ಹೆಣ್ಣಿಗೆ ಬೇರೆಯೇ ಆದ ಜೀವನವಿಲ್ಲವೆ? ಎಷ್ಟೋ ಸಲ ಈ ಪ್ರಶ್ನೆ ಮನದಲ್ಲಿ ಮೂಡಿದರೂ ನನ್ನ ಅಜ್ಜಿ ಇದ್ದಿದ್ದು ಹೀಗೆ, ನನ್ನ ಅಮ್ಮ ಇದ್ದಿದ್ದು ಹೀಗೆ ನಾನು ಇವರಿಗಿಂತ ಹೇಗೆ ಭಿನ್ನ. ನನ್ನದೂ ಅವರ ಹಾದಿಯಲ್ಲಿ ಸಾಗಿದ ಜೀವನ ಎಂದು ಸುಮ್ಮನಾಗುತ್ತೇನೆ, ಆದರೆ ಕೆಲವೊಮ್ಮೆ ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜಾnನೋದಯವಾದಂತೆ ನನಗೆ ಅಡುಗೆ ಮನೆಯಲ್ಲಿ ಜಾnನೋದಯವಾಗುತ್ತದೆ. ಸಾರಿಗೆ ಒಗ್ಗರಣೆ ಹಾಕುವಾಗ ಚಟಪಟ ಸಿಡಿಯುವ ಸಾಸಿವೆಯ ಹಾಗೆ ನನ್ನ ಮನಸ್ಸು ಸಿಡಿಮಿಡಿಗೊಳ್ಳುತ್ತಿರುತ್ತದೆ. ನನ್ನ ಮನಸ್ಸಿನ ಹದ ತಪ್ಪಿದಂತೆ ಸಾರಿನ ಹದ ತಪ್ಪದಿದ್ದರೆ ಸಾಕು ಎಂದು ಮತ್ತದೇ ಸಂಸಾರದ ಗುಂಡಿಯೊಳಗೆ ಬಂಧಿಯಾಗುತ್ತೇನೆ.

ಗೆಳತಿ ಒಬ್ಬಳು ಹೇಳುತ್ತಿದ್ದಳು, “”ಗಂಡ-ಮಕ್ಕಳನ್ನೆಲ್ಲ ಬಿಟ್ಟು ಒಂದಷ್ಟು ಸಮಯ ಎಲ್ಲಾದರೂ ತಿರುಗಾಡಿಕೊಂಡು ಬರಬೇಕು ಕಣೆ, ಅಲ್ಲಿ ನಾವು ನಾವಾಗಿರಬೇಕು! ಒಂದು ಕಪ್‌ ಟೀ ಅನ್ನು ಯಾರ ರಗಳೆನೂ ಇಲ್ಲದೇ ಅಸ್ವಾದಿಸಬೇಕು. ಅಲ್ಲಿ ನಾನು ಮತ್ತು ಟೀ ಕಪ್‌ ಅಷ್ಟೇ ಇರಬೇಕು” ಇದು ಕೆಲವರಿಗೆ ಸೋಜಿಗ ಅನಿಸಬಹುದು, ಏನು ಒಂದು ಕಪ್‌ ಟೀ ಕುಡಿಯುವಷ್ಟು ಸಮಯ ಇಲ್ವಾ? ಎಂದು. ವಿಷಯ ಟೀಗೆ ಸಂಬಂಧಪಟ್ಟಿದ್ದಲ್ಲ. ಅದು ಅವಳ ಅಸ್ಮಿತೆಗೆ ಸಂಬಂಧಪಟ್ಟಿದ್ದು.

Advertisement

ಮುಖದಲ್ಲಿ ನಿಧಾನಕ್ಕೆ ಮೂಡುತ್ತಿರುವ ನೆರಿಗೆ, ತಲೆಯಲ್ಲಿ ಇಣುಕುತ್ತಿರುವ ಬಿಳಿ ಕೂದಲು, ಕಣ್ಣಿನ ಕೆಳಗೆ ತನ್ನಿರುವನ್ನು ತೋರುತ್ತಿರುವ ಕಪ್ಪು ವರ್ತುಲ, ಒಡೆದ ಹಿಮ್ಮಡಿ, ಟ್ಯಾನ್‌ ಆಗಿರುವ ಕೈ ನೋಡಿದಾಗ ಅರೆ ನಾನ್ಯಾಕೆ ಹೀಗಾದೆ ಅನಿಸುತ್ತೆ. ಇಲ್ಲ ಇನ್ನು ಮುಂದೆ ಇವುಗಳಿಗೆಲ್ಲಾ ಗೇಟ್‌ಪಾಸ್‌ ಕೊಟ್ಟು ನಾನು ಮತ್ತೆ ಮದುವೆಗೆ ಮುಂಚೆ ಇದ್ದ ಹಾಗೆ ಇರಬೇಕು. ಜೀವನ ಅಂತದ್ದೇನೂ ಮಹಾ ಬದಲಾವಣೆಗೆ ಒಳಪಟ್ಟಿಲ್ಲ. ಒಬ್ಬಳಿದ್ದೆ, ಇಬ್ಬರಾದ್ವಿ, ಈಗ ಮೂವರಾದ್ವಿ , ಅಷ್ಟೇ ತಾನೆ!

ಪ್ರತಿಯೊಬ್ಬ ಹೆಣ್ಣಿನಲ್ಲಿಯೂ ತಾನು ಇರುವಷ್ಟು ದಿನ ಚೆನ್ನಾಗಿರಬೇಕು ಎಂಬ ಆಸೆ ಇರುತ್ತೆ. ಅದು ಸೌಂದರ್ಯದಲ್ಲಿ ಆಗಿರಬಹುದು ಅಥವಾ ಬದುಕುವ ರೀತಿಯಲ್ಲಿಯಾದರೂ ಆಗಿರಬಹುದು. ಆದರೆ, ಸಂಸಾರ ಎಂಬ ಸಾಗರದೊಳಗೆ ಧುಮುಕಿದ ಮೇಲೆ ಈಜದಿದ್ದರೆ ಹೇಗೆ? ಈ ಈಜಾಟದಲ್ಲಿಯೇ ಬದುಕು ಕಳೆದುಹೋಯೆ¤ನೋ ಎಂದು ಕೊನೆಗೊಮ್ಮೆ ದುಃಖೀಸುತ್ತೇವೆ. ಆದರೆ ಈ ಕೊರಗುವಿಕೆಯಿಂದ ಏನೂ ಪ್ರಯೋಜನವಿಲ್ಲ. ಸ್ವಲ್ಪ ನಮ್ಮ ಬದುಕನ್ನೇ ಬದಲಾಯಿಸಿಕೊಳ್ಳೋಣ. 

ನಾವಿದ್ದರೆ ತಾನೆ ಸಂಸಾರ !
ಗಂಡ-ಮಕ್ಕಳಿಗೆ ಹೇಗೆ ಸಮಯಕ್ಕೆ ಸರಿಯಾಗಿ ಊಟ ಕೊಡ್ತಿವೋ ಹಾಗೆ ನಾವು ಕೂಡ ಸಮಯಕ್ಕೆ ಸರಿಯಾಗಿ ಒಂದೆರೆಡು ತುತ್ತು ಚೆನ್ನಾಗಿ ಊಟ ತಿಂಡಿ ಮಾಡೋಣ. ಉಳಿದಿದ್ದು, ಹಾಳಾದ್ದು ಬಿಸಾಡುವ ಬದಲು ಹೊಟ್ಟೆಗೆ ಹಾಕಿಕೊಳ್ಳುವ ಎಂಬುದಕ್ಕಿಂತ ಸ್ವಲ್ಪವಾದರೂ ಪರಾÌಗಿಲ್ಲ ದೇಹಕ್ಕೆ ಹಿತ ಅನಿಸುವ ಹಣ್ಣು-ಹಂಪಲು, ರಾಗಿ, ಮಜ್ಜಿಗೆಯನ್ನೇ ಸೇವಿಸಿದರೆ ಆಯಿತು. ನಮ್ಮ ಆರೋಗ್ಯ ಸರಿ ಇದ್ದರೆ ತಾನೇ ಕುಟುಂಬದ ಆರೋಗ್ಯ ಕಾಪಾಡಲು ಸಾಧ್ಯವಾಗುವುದು.

ಕನಸಿಗಿರಲಿ ಆದ್ಯತೆ
ಬದುಕಲ್ಲೊಂದು ಕನಸಿನ ಹಕ್ಕಿ ಗೂಡು ಕಟ್ಟಿಕೊಂಡಿರುತ್ತದೆ. ಸಂಸಾರವಾದ ಮೇಲೆ ನನಗ್ಯಾಕೆ ಅದೆಲ್ಲಾ, ಈಗ ಸಮಯವಾದರೂ ಎಲ್ಲಿದೆ? ಮನೆಕೆಲಸವೇ ಹಾಸಿ ಹೊದೆಯುವಷ್ಟು ಇದೆ ಎಂದು ಕನಸನ್ನು ಅಲ್ಲಿಯೇ ಹೊಸಕಿ ಹಾಕುವುದು ಬೇಡ. ಸಂಗಾತಿಯೊಡನೆ ಕುಳಿತು ಚರ್ಚಿಸಿ. ಸಮಯ ಯಾವ ರೀತಿ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ಯೋಚಿಸಿ. ಪರಸ್ಪರರ ಬೆಂಬಲ, ಪ್ರೀತಿಯಿಂದ ಕನಸು ನನಸಾಗಿಸಿ.

ಜೊತೆಗೊಂದಿಷ್ಟು ಹವ್ಯಾಸವಿರಲಿ
ಹೊರಗಡೆ ಹೋಗಿ ದುಡಿಯಿರಿ ಅಥವಾ ಗೃಹಿಣಿಯಾಗಿ ಮನೆಯಲ್ಲಿಯೇ ಇರಿ ಏನೇ ಇದ್ದರೂ ನಿಮ್ಮದೇ ಆದ ಮನಸ್ಸಿಗೆ ಮುದ ನೀಡುವ ಹವ್ಯಾಸವೊಂದು ಬೆಳೆಸಿಕೊಳ್ಳಿ. ಹೂವಿನ ಗಿಡ ನೆಡುವುದೋ, ತರಕಾರಿ ಬೆಳೆಯುವುದೋ, ಓದುವುದೋ, ಟೈಲರಿಂಗ್‌ ಹೀಗೆ ಯಾವುದೇ ಇರಲಿ ನಿಮ್ಮ ಮನಸ್ಸನ್ನು ಸದಾ ಉಲ್ಲಾಸಗೊಳಿಸುವ ಹವ್ಯಾಸ ಅದಾಗಿರಲಿ.

ಚಿಕ್ಕದೊಂದು ಪ್ರವಾಸ
“ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎನ್ನುವ ಹಾಗೆ, ತುಂಬ ದುಬಾರಿಯಲ್ಲದಿದ್ದರೂ ಇರುವುದರಲ್ಲಿಯೇ ಹತ್ತಿರದ ಜಾಗಗಳಿಗೆ ಭೇಟಿ ನೀಡಿ. ನಿಮ್ಮದೇ ಕುಟುಂಬದ ಜತೆ ಒಂದಷ್ಟು ಹೊತ್ತು ಖುಷಿಯ ಕ್ಷಣಗಳನ್ನು ಕಳೆಯಿರಿ. ಬದುಕು ಬೆಳೆಯುವುದು, ಆರುವುದು ನಮ್ಮ ಕೈಯಲ್ಲಿ. ಚಿಕ್ಕಪುಟ್ಟ ವಿಷಯಗಳಲ್ಲಿ ಖುಷಿಯ ಕಣಜವನ್ನು ಹುಡುಕಿರಿ. ಮನತುಂಬಿ ನಕ್ಕುಬಿಡಿ. ಜೀವನ ಮತ್ತಷ್ಟು ಹಗುರವಾಗುವುದು.

– ಪವಿತ್ರಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next