ಜನಪ್ರಿಯ ಗಾಯಕಿ ಶ್ರೇಯಾ ಘೋಶಾಲ್ ಅವರ ಇತ್ತೀಚಿನ ಸೋಲೋ ಸಾಂಗ್ “ಅಂಗನಾ ಮೋರೆ” ಯೂಟ್ಯೂಬ್ ನಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಸುಮಧುರ ಹಾಡು ಕೇಳುಗನಿಗೆ ಹಿತವಾದ ರಂಜನೆಯ ಪ್ರಭಾವವನ್ನು ಬೀರುತ್ತಿದೆ.
ಶ್ರೇಯಾ ಘೋಶಾಲ್ ಅವರ ಸಹೋದರ ಸೌಮ್ಯದೀಪ್ ಘೋಶಾಲ್ ಅವರ ಸಂಗೀತ ನಿರ್ಮಾಣದೊಂದಿಗೆ ಸ್ವತಃ ಶ್ರೇಯಾ ಬರೆದು, ಸಂಯೋಜಿಸಿ ಹಾಡಿದ್ದಾರೆ.
ನಜೀಫ್ ಮೊಹಮ್ಮದ್ ನಿರ್ದೇಶನದಲ್ಲಿ ಮೂಡಿ ಬಂದ “ಅಂಗನಾ ಮೋರೆ” ಸಮಕಾಲೀನ ನೃತ್ಯ ಪ್ರಕಾರಗಳ ಮೂಲಕ ಕಥೆ ಹೇಳುತ್ತಾ, ಶ್ರೇಯಾ ಅವರ ಮೇಲೆ ಕೇಂದ್ರೀಕರಿಸುತ್ತದೆ. ಇನ್ನು, ಸೌಮ್ಯ ದೀಪ್ ಕೂಡ ತೆರೆ ಮೇಲೆ ಕಾಣಿಸಿಕೊಂಡಿರುವುದು ವಿಶೇಷ.
ಆಳವಾಗಿ ಪ್ರೀತಿಸುವ ಪ್ರೇಮಿಗಳು ಒಬ್ಬರಿಗೊಬ್ಬರು ಹಾತೊರೆಯುವ ಸನ್ನಿವೇಶವನ್ನು ಕಟ್ಟಿಕೊಡುತ್ತದೆ ಈ ಹಾಡು. ದೂರವಾದ ಪ್ರೇಮದಲ್ಲಿನ ಹುಡುಕಾಟ, ಚಡಪಡಿಕೆ, ನೋವು ಎಲ್ಲವನ್ನೂ ಹೇಳುವಂತೆ ಶ್ರೇಯಾ ಭಾವನಾತ್ಮಕವಾಗಿ ಈ ಹಾಡನ್ನು ಕೇಳುಗನ ಬಾಯಲ್ಲಿ ಮತ್ತೆ ಮತ್ತೆ ಗುನುಗುವಂತೆ ರಚಿಸಿದ್ದಾರೆ.
ಕೋವಿಡ್ 19 ಈ ಹಾಡಿನ ಸೃಷ್ಟಿಗೆ ಕಾರಣವಾಯಿತು : ಶ್ರೇಯಾ ಘೋಶಾಲ್
2020 ಅನೇಕ ಥರದಲ್ಲಿ ನಮ್ಮೆಲ್ಲರನ್ನೂ ಖಿನ್ನತೆಗೆ ದೂಡಿದೆ. ಆದರೇ, ವೈಯಕ್ತಿಕ ಬೆಳವಣಿಗೆಗೆ ಇದು ತುಂಬಾ ಸಹಕಾರಿಯಾಗಿತ್ತು. ಕೋವಿಡ್ 19 ಲಾಕ್ಡೌನ್ ಸಂದರ್ಭದಲ್ಲಿ ನಾನು ಒಳ್ಳೆಯ ಹಾಡುಗಳ ಕೇಳುಗಳಾಗಿದ್ದೆ. ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳಲ್ಲಿ ಸಂತೋಷದಿಂದ ತೊಡಗಿಕೊಳ್ಳುತ್ತಿದ್ದೆ. ಮನೆಯ ಸ್ಟುಡಿಯೋ ದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದೆ. ನನ್ನ ಅರೆಶಾಸ್ತ್ರೀಯ ಸಂಗೀತದ ಬೇರುಗಳೊಂದಿಗೆ ಪ್ರತಿಧ್ವನಿಸುವ ಹಾಡೊಂದನ್ನು ರಚಿಸಬೇಕು ಎಂದು ನನ್ನ ಹೃದಯ ಹಂಬಲಿಸುತ್ತಿದ್ದರಿಂದ “ಅಂಗನಾ ಮೋರೆ” ಹುಟ್ಟಿಕೊಳ್ಳುವುದಕ್ಕೆ ಸಾಧ್ಯವಾಯಿತು ಎನ್ನುತ್ತಾರೆ ಈ ತಲೆಮಾರಿನ ಭಾರತದ ಮೆಲೋಡಿ ಹಾಡುಗಳ ಕೋಗಿಲೆ ಶ್ರೇಯಾ ಘೋಶಾಲ್.
ಒಟ್ಟಿನಲ್ಲಿ, ಘೋಶಾಲ್ ಧ್ವನಿಗೆ ಕೇಳುಗರಂತೂ ಫುಲ್ ಖುಷಿಯಾಗಿದ್ದಾರೆ. ಶ್ರೇಯಾ ಘೋಶಾಲ್ ಆಫಿಶಿಯಲ್ ಯೂಟ್ಯೂಬ್ ಚಾನೆಲ್ ನಲ್ಲಿ ಕೇವಲ ಮೂರು ದಿನಗಳಲ್ಲಿ ಮೂರು ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಯಾಗಿರುವ ಬಾಲಿವುಡ್ ಕೋಗಿಲೆಯ ಈ ಹಾಡು ಕೇಳುಗರ ಮನ ತಣ್ಣಗಾಗಿಸುತ್ತಿದೆ ಎನ್ನುವುದಂತೂ ಸತ್ಯ.