Advertisement
ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಆರಂಭಿಸಿದ ಅಧ್ಯಕ್ಷ ರಶ್ಮೀ ಉದಯ ಕುಮಾರ್, 1996ರಲ್ಲಿ ಯಾವುದೇ ಲಾಭದ ಉದ್ದೇಶವಿಲ್ಲದೆ ಸ್ಥಾಪನೆಯಾದ ಸಿಂಗಾಪುರ ಕನ್ನಡ ಸಂಘವು 25 ವರ್ಷಗಳ ಕಲಾವಧಿಯ ಮೈಲುಗಲ್ಲನ್ನು ತಲುಪಿದೆ. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ಆಚರಣೆ ಮಾಡಲಾಗುವುದು. ಇದರ ಮೊದಲನೇ ಕಾರ್ಯಕ್ರಮವೇ “ಬೆಳ್ಳಿ ಅಂಚು’ ಸಿಂಗಾರಕ್ಕೊಂದು ಹೊಸ ಮೆರುಗು ಎಂದರು.
Related Articles
Advertisement
ಕಾರ್ಯಕ್ರಮದ ಆರಂಭದಲ್ಲಿ ಸಿಂಗಾಪುರ ಕನ್ನಡ ಸಂಘಕ್ಕೆ ಶುಭ ಹಾರೈಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಅವರಿಗೆ ರಶ್ಮೀ ಅಭಿನಂದನೆ ಸಲ್ಲಿಸಿದರು.
ವಿಶೇಷ ಸಂಚಿಕೆ, ನೂತನ ಜಾಲತಾಣ :
ಸಂಘದ ರಜತ ಮಹೋತ್ಸವ ಸಂದರ್ಭದಲ್ಲಿ ಸಿಂಗಾರ ಪತ್ರಿಕೆ ವಿಶೇಷ ಸಂಚಿಕೆ ಪ್ರಕಟಗೊಂಡಿದ್ದು, ಇದನ್ನು ಸಂಪೂರ್ಣ ಮಹಿಳಾ ತಂಡ ಸಂಪಾದಿಸಿದೆ. ಇದರ ಪ್ರಧಾನ ಸಂಪಾದಕರಾಗಿ ಮಾಲಾ ನಾಗರಾಜ್, ವಿದ್ಯಾ ವೆಂಕಟೇಶ್, ಸಹ ಸಂಪಾದಕರಾಗಿ ಕವಿತಾ ರಾಘವೇಂದ್ರ, ಯಶಸ್ವಿನಿ ಮುರಳಿ, ಕಾರ್ಯಕಾರಿ ಸಮಿತಿ ಸದಸ್ಯರು ಇ- ಪತ್ರಿಕೆಯನ್ನು ಯಶಸ್ವಿಯಾಗಿ ಹೊರತರಲು ನೀಡಿರುವ ಕೊಡುಗೆಗಾಗಿ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಇ- ಸಿಂಗಾರ ಪತ್ರಿಕೆಯ ಪ್ರಧಾನ ಸಂಪಾದಕಿ ಮಾಲಾ ನಾಗರಾಜ್ ಅವರು ಪತ್ರಿಕೆಯ ಕುರಿತು ಮಾಹಿತಿ ನೀಡಿದರು.
ಸಂಘದ ವೆಬ್‌ಸೈಟ್ ಸರಳೀಕರಿಸಬೇಕು ಎನ್ನುವ ಉದ್ದೇಶದ ಪರಿಣಾಮ ವೆಬ್‌ಸೈಟ್‌ನ ಹೊಸ ರೂಪ ಸಿದ್ಧವಾಗಿದ್ದು, ಇದು ಸುಮಾರು 6 ತಿಂಗಳ ಕಠಿನ ಪರಿಶ್ರಮ ಮತ್ತು ಬದ್ಧತೆಯ ಫಲಿತಾಂಶವಾಗಿದೆ ಎಂದು ಸಂಘದ ಕಾರ್ಯದರ್ಶಿ ಪವನ್ ಜೋಶಿ ಅವರು ನೂತನ ಜಾಲತಾಣದ ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ ನೂತನ ಜಾಲತಾಣದ ಲೋಕಾರ್ಪಣೆಯೂ ನಡೆಯಿತು. ನೂತನ ವೆಬ್‌ಸೈಟ್ ಅನಾವರಣದಲ್ಲಿ ಅವರ ಶ್ರಮ ಮತ್ತು ಮುಂದಾಳುತನಕ್ಕೆ ಕಾರ್ಯಕಾರಿ ಸಮಿತಿ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸತ್ವ ಪರೀಕ್ಷೆ ಯಕ್ಷಗಾನ ಪ್ರದರ್ಶನ ನಡೆಯಿತು.
ಪ್ರಸಂಗ ಕವಿ ಹಳೆಮಕ್ಕಿ ರಾಮ. ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಶಂಕರ ಭಾಗವತ ಮತ್ತು ಪ್ರಸನ್ನ ಹೆಗ್ಗಾರು, ಮುಮ್ಮೇಳದಲ್ಲಿ ಉದಯ ಕಡಬಾಳ, ಕಾರ್ತಿಕ್ ಚಿಟ್ಟಾಣಿ, ಶ್ರೀಧರ ಭಟ್ಟ ಕಾಸರಕೋಡು, ಸದಾಶಿವ ಮಲವಳ್ಳಿ, ವಿನಯ
ಬೇರೂಳ್ಳಿ ಅವರು ಪ್ರದರ್ಶನದ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕಲೆಯನ್ನು ಎತ್ತಿ ಹಿಡಿಯುವಂತೆ ಮಾಡಿದ್ದು ಸಿಂಗಾಪುರ ಕನ್ನಡಿಗರ ಮನ ಸಳೆಯಿತು.
ಸಿಂಗಾಪುರ ಕನ್ನಡ ಸಂಘ ಬೆಳೆದು ಬಂದ ದಾರಿ :
1996ರಲ್ಲಿ ಸ್ಥಾಪನೆಯಾದ ಸಿಂಗಾಪುರ ಕನ್ನಡ ಸಂಘವು ಸ್ವಯಂ ಸೇವಕರನ್ನು ಒಳಗೊಂಡಿದ್ದು ಕನ್ನಡಾಭಿಮಾನಿಗಳಾಗಿ ಸಮುದಾಯಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆಗೆ ಹತ್ತಿರವಾಗಲು ಇಂದಿನ, ಮುಂದಿನ ಪೀಳಿಗೆಯನ್ನು ತೊಡಗಿಸಿಕೊಳ್ಳಲು ಇಂಚರ, ವಚನಾಂಜಲಿ, ದೀಪೋತ್ಸವ, ಪುರಂದರ ನಮನ… ಸೇರಿದಂತೆ ಇನ್ನು ಹಲವಾರು ಕಾರ್ಯಕ್ರಮಗಳನ್ನು ಕಾರ್ಯಕಾರಿ ಸಮಿತಿಯು ಆಯೋಜಿಸುತ್ತಿದೆ.
ಕ್ರೀಡೆಯಲ್ಲಿ ಕ್ರೀಡಾ ಸಂಜೆ, ಬ್ಯಾಡ್ಮಿಂಟನ್, ಬೌಲಿಂಗ್, ಶೈಕ್ಷಣಿಕವಾಗಿ ಕನ್ನಡ ಭಾಷಾ ಕಲಿಕೆ ಕಾರ್ಯಕ್ರಮ ಕನ್ನಡ ಕಲಿ, ವಿಭಿನ್ನ ಕೌಶಲಗಳನ್ನು ಕಲಿಯಲು, ಪ್ರೋತ್ಸಾಹಿಸಲು ಸಿಂಗಾರ ಪಾಠ ಶಾಲೆ, ಅಂತರ ಸಾಂಸ್ಕೃತಿಕದಲ್ಲಿ ಲೀಸಾ, ಗೀತಾ ಜಯಂತಿ, ಐಎಚ್‌ಸಿ, ಐಎಇಸಿಸಿ ಇವರೊಂದಿಗೆ ಸಂಘವೂ ಪ್ರಾತಿನಿಧ್ಯ ವಹಿಸುತ್ತಿದೆ. ಕ್ಷೇಮಾಭ್ಯುದಯದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸಲು ಸಿಂಗಾರ ವಿಹಾರ ಹೊರಾಂಗಣ ಚಟುವಟಿಕೆಗಳು, ಪ್ರಕೃತಿ ಚಿಕಿತ್ಸೆಯ ಬಗ್ಗೆ ಉಪನ್ಯಾಸಗಳನ್ನೂ ಆಯೋಜಿಸಲಾಗಿತ್ತು. ಪ್ರತೀ ವರ್ಷ ನವಂಬರ್ ತಿಂಗಳಲ್ಲಿ ಸಿಂಗಾಪುರ ಕನ್ನಡಿಗರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಗೈದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ದೀಪೋತ್ಸವದ ವೇಳೆ ಸಿಂಗಾರ ಪುರಸ್ಕಾರ, ಸಿಂಗಾರ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
ಆನ್‌ಲೈನ್ ಅವಕಾಶ :
2020ರ ಮಾರ್ಚ್‌ನಲ್ಲಿ ಕೋವಿಡ್ ಸಾಂಕ್ರಾಮಿಕ ವಿಶ್ವಾದ್ಯಂತ ವ್ಯಾಪಿಸಿದಾಗ ಸಿಂಗಾಪುರದಲ್ಲೂ ಲಾಕ್‌ಡೌನ್‌ನಂತೆಯೇ circuit breaker ಅನ್ನು ಘೋಷಿಸಲಾಯಿತು. ಪ್ರಯಾಣ, ಸಂಪರ್ಕ, ಸಹವಾಸ ಎಲ್ಲವನ್ನೂ ನಿಷೇಧಿಸಲಾಗಿತ್ತು. ಹೀಗಾಗಿ ಸಭಾಂಗಣ, ಸಂಗೀತ ಕಛೇರಿಗಳು ಸಂಪೂರ್ಣ ನಿಂತುಹೋಯಿತು. ಸಂಘ ಹೇಗೆ ಕಾರ್ಯನಿರ್ವಹಿಸಬೇಕು, ಹೇಗೆ ತೊಡಗಿಸಿಕೊಳ್ಳಬೇಕು ಎಂಬ ಗಂಭೀರ, ಹಿಂದೆಂದೂ ಎದುರಿಸಲಾಗದ ಸವಾಲು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ವಿಚಾರಧಾರೆಗಳು ಹರಿದುಬಂದವು. ಆರ್ಥಿಕವಾಗಿ, ಮಾನಸಿಕವಾಗಿ ಕುಸಿಯುವಂತೆ ಮಾಡಿದ ಕೊರೊನಾ ವೈರಸ್ ಭೀತಿ ಎದುರಿಸಲು ದೈಹಿಕ ಮಾತ್ರವಲ್ಲ ಮಾನಸಿಕ ಯೋಗಕ್ಷೇಮವೂ ಬಹಳ ಮುಖ್ಯ. ಹೀಗಾಗಿ ಸಂಘ ತನ್ನ ಕಾರ್ಯಚಟುವಟಿಕೆಗಳನ್ನು ತಂತ್ರಜ್ಞಾನ ಬಳಸಿ ಮುಂದುವರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಡಲಾಯಿತು. ಈ ವೇಳೆ ಸಿಂಗಾಪುರ ಕನ್ನಡಿಗರಿಗೆ ಕಲಿಯಲು, ಮನರಂಜಿಸಲು ಅನೇಕ ಚಟುವಟಿಕೆಗಳನ್ನು ಆನ್‌ಲೈನ್ ಮೂಲಕ ಒದಗಿಸಲಾಯಿತು. ಅಲ್ಲದೇ ತುರ್ತು ಸಹಾಯ ಮತ್ತು ಮಾಹಿತಿಗಾಗಿ ಹೈಲ್ಪ್ಲೈನ್ ಪ್ರಾರಂಭಿಸಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಯಿತು.
ಸಿಂಗಾಪುರ ಕನ್ನಡಿಗರ ನಡುವೆ ಒಡನಾಟ ಹೆಚ್ಚಿಸಲು, ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಆನ್‌ಲೈನ್‌ನಲ್ಲಿ ಬಿಸಿನೆಸ್ ಆ್ಯಂಡ್ ಟೆಕ್ನಾಲಜಿ ಲೀಡರ್‌ಶಿಪ್, ನಾಟಕ ಪ್ರದರ್ಶನ, ಸ್ಮಾರ್ಟ್‌ಫೋನ್ ಫೋಟೋಗ್ರಫಿ, ಅಡುಗೆ ತಯಾರಿ ಸ್ಪರ್ಧೆ, ಯೋಗ, ಮಂಡಲ ಆರ್ಟ್, ಚಿನ್ನರ ವೆಬ್‌ಲೋಕ ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಕೋವಿಡ್ ಸಮಯದಲ್ಲಿ ತೊಂದರೆಗೊಳಗಾದ ಕಲಾವಿದರಿಗೆ ಸಹಾಯ ಮಾಡುವ ಉದ್ದೇಶದಿಂದ ಆನ್‌ಲೈನ್ ವೇದಿಕೆಯಲ್ಲಿ ಸಣ್ಣ ಪ್ರಮಾಣದ ನಿಧಿ ಸಂಗ್ರಹ ಕಾರ್ಯಕ್ರಮವನ್ನೂ ನಡೆಸಿತು. ಪುರಂದರ ನಮನ, ವಚನಾಂಜಲಿ, ದೀಪೋತ್ಸವ ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ಆನ್‌ಲೈನ್‌ನಲ್ಲಿ ಆಯೋಜಿಸುವಲ್ಲಿ ಯಶಸ್ವಿಯಾದೆವು.
ಹಾಲಿ ಕಾರ್ಯಕಾರಿ ಸಮಿತಿ :
ರಶ್ಮೀ ಉದಯಕುಮಾರ್ (ಅಧ್ಯಕ್ಷೆ), ಶ್ರೀನಿವಾಸ್ ಕೆ.ಜೆ. (ಉಪಾಧ್ಯಕ್ಷ), ಪವನ್‌ಜೋಶಿ (ಕಾರ್ಯದರ್ಶಿ), ಭಾಗ್ಯಲಕ್ಷಿ$¾à ಬಾವಿ (ಕೋಶಾಧಿಕಾರಿಗಳು- 2020- 21), ರಮೇಶ್ ನಾರಾಯಣಪ್ಪ (ಕೋಶಾಧಿಕಾರಿಗಳು- 2019-20), ಸುದೀಪ್ ಪೆರ್ಡೂರು (ಜತೆ ಕೋಶಾಧಿಕಾರಿ), ಶುಭಾ ಎಚ್.ಎನ್. (ಸಾಂಸ್ಕೃತಿಕ ಕಾರ್ಯದರ್ಶಿ), ಸದಸ್ಯರು- ಕವಿತಾ ರಾಘವೇಂದ್ರ, ಯಶಸ್ವಿನೀ ಮುರಳಿ, ಶಿವಕುಮಾರ್ ವಿಜಯಕುಮಾರ್, ಪ್ರಮೋದ್ ನಾಯಕ್ವಾಡಿ, ಸುಮಂತ್ ಜಯತೀರ್ಥ, ವರುಣ್ ರಾಘವೇಂದ್ರ, ಪ್ರೇಮ್‌ಕುಮಾರ್, ಸತೀಶ್ ಆರ್.ಎಲ್. ಕಾರ್ಯ ನಿರ್ವಹಿಸುತ್ತಿದ್ದಾರೆ.